ರಾಹುಲ್ ಗಾಂಧಿ ದ್ವಿಪೌರತ್ವ ಆರೋಪದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ಆಗಿದೆ 4 ವರ್ಷ
Misleading claim by social media user as Congress leader Rahul Gandhi has dual citizenship
By Srinivasa Mata Published on 26 May 2023 1:06 PM GMTಹೈದರಾಬಾದ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ, ಅಲ್ಲಿ ಕಂಪನಿಯೊಂದರ ವ್ಯವಹಾರ ನಡೆಸುವ ವೇಳೆ ದಾಖಲೆಗಳಲ್ಲಿ ತಾನು “ಬ್ರಿಟಿಷ್ ನಾಗರಿಕ” ಎಂದು ನಮೂದಿಸಿದ್ದಾರೆ ಎಂಬ ಆರೋಪವನ್ನು ಮಾಡಿ, ರವೀಂದ್ರ ಜೋಶಿ ಕ್ರಿಯೇಷನ್ಸ್ ಹೆಸರಲ್ಲಿ ವಿಡಿಯೋ ಮಾಡಲಾಗಿದೆ. ರಾಹುಲ್ ಗಾಂಧಿ ಅವರು ಪಾಸ್ ಪೋರ್ಟ್ ಗಾಗಿ ನಿರಾಕ್ಷೇಪಣಾ ಪತ್ರಕ್ಕಾಗಿ ದೆಹಲಿ ಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಮಾಡಲಾಗಿದ್ದು, ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ, ಯುನೈಟೆಡ್ ಕಿಂಗ್ ಡಮ್ ಪಾಸ್ ಪೋರ್ಟ್ ಹೊಂದಿದ್ದಾರೆ ಎಂದೆಲ್ಲಾ ಹೇಳಲಾಗಿದೆ. ನ್ಯೂಸ್ ಮೀಟರ್ ನಿಂದ ಫ್ಯಾಕ್ಟ್ ಚೆಕ್ ಮಾಡಿರುವಂತೆ ಈ ಮಾಹಿತಿಗಳು ತಪ್ಪು ಮತ್ತು ಆರೋಪಗಳು ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲೇ ಮಾನ್ಯ ಮಾಡಿಲ್ಲ ಎಂದು ಕಂಡುಬಂದಿದೆ.
FACTCHECK
ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂಬ ಬಗ್ಗೆ ಹಿಂದೂ ಮಹಾಸಭಾದ ಜೈ ಭಗವಾನ್ ಗೋಯಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅದಕ್ಕೆ ಅವರು ಆಧಾರ ಎಂಬಂತೆ ಕೋರ್ಟ್ ಮುಂದೆ ತಂದಿದ್ದದ್ದು ಕಂಪನಿಯೊಂದರ ದಾಖಲಾತಿಯಲ್ಲಿ ರಾಹುಲ್ ಗಾಂಧಿ ಬ್ರಿಟಿಷ್ ನಾಗರಿಕ ಎಂದಿದೆ ಎಂಬ ಅಂಶ. 2019ನೇ ಇಸವಿಯ ಮೇ 10ನೇ ತಾರೀಕು ಕೋರ್ಟ್ ಆದೇಶವನ್ನು “ಇಂಡಿಯಾ ಟುಡೇ” ವರದಿ ಮಾಡಿದೆ. ಅದರ ಪ್ರಕಾರ, ರಾಹುಲ್ ಗಾಂಧಿ “ದ್ವಿಪೌರತ್ವ” ವಿಚಾರದ ಬಗ್ಗೆ ತನಿಖೆಗಾಗಿ ಹಾಕಿಕೊಂಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಎನ್ ಡಿಟಿವಿಯಲ್ಲಿ ಕೂಡ ಈ ಬಗ್ಗೆ ವರದಿ ಪ್ರಕಟವಾಗಿದೆ.
“ಕೇವಲ ಕಂಪನಿಯ ಕಾಗದ ಪತ್ರದಲ್ಲಿ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದಿದೆ ಎಂಬ ಮಾತ್ರಕ್ಕೆ ಅವರು ಬ್ರಿಟಿಷ್ ಪ್ರಜೆ ಆಗಿಬಿಡುತ್ತಾರೆಯೇ?” ಎಂದು ಕೋರ್ಟ್ ಪ್ರಶ್ನೆ ಮಾಡಿತ್ತು.
"ನಾವು ರಿಟ್ ಅರ್ಜಿಯನ್ನು ಪರಿಗಣಿಸುವ ಬಗ್ಗೆ ಒಲವು ಹೊಂದಿಲ್ಲ. ಅದೇ ಪ್ರಕಾರ, ವಜಾಗೊಳಿಸಲಾಗಿದೆ,” ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಒಳಗೊಂಡಂಥ ಪೀಠವು ಹೇಳಿತ್ತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಗೃಹ ವ್ಯವಹಾರಗಳ ಸಚಿವಾಲಯಕ್ಕೆ ತನಿಖೆಗೆ ಆದೇಶಿಸಬೇಕು ಎಂದು ಕೇಳಲಾಗಿತ್ತು . ಜತೆಗೆ ಆಗ ಲೋಕಸಭಾ ಚುನಾವಣೆಯಿಂದ ಸ್ಪರ್ಧೆ ಮಾಡದಿರುವಂತೆ ರಾಹುಲ್ ಗಾಂಧಿಯವರನ್ನು ತಡೆಯಲು ಚುನಾವಣೆ ಆಯೋಗಕ್ಕೆ ಆದೇಶಿಸಬೇಕು ಎಂದು ಕೇಳಲಾಗಿತ್ತು.
ಇನ್ನು ಅರ್ಜಿಯ ಸಮಯದ ಬಗ್ಗೆ ಕೂಡ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಗಿತ್ತು. “ಆ ದಾಖಲಾತಿಯು ಬೆಳಕಿಗೆ ಬಂದಿದ್ದು 2015ರಲ್ಲಷ್ಟೇ,” ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದರೆ ಕೋರ್ಟ್ ಗೆ ಬರುವುದಕ್ಕೆ 2019ರ ತನಕ ಯಾಕೆ ಸಮಯ ತೆಗೆದುಕೊಂಡಿರಿ ಎಂದು ಸುಪ್ರೀಂ ಕೋರ್ಟ್ ಪೀಠವು ಪ್ರಶ್ನಿಸಿತ್ತು.
ಇನ್ನು ನವೆಂಬರ್ 17, 2015ರಲ್ಲಿ ಬಿಜಿನೆಸ್ ಇನ್ ಸೈಡರ್ ಇಂಡಿಯಾ ವರದಿಯೊಂದನ್ನು ಪ್ರಕಟಿಸಿದೆ. ಅದರ ಪ್ರಕಾರ, ಯುಕೆ ಕಂಪನಿ ಹೌಸ್ ಹೇಳಿರುವಂತೆ, ವಾರ್ಷಿಕ ದಾಖಲಾತಿಗಳ ಸಲ್ಲಿಕೆಯನ್ನು ಎಲೆಕ್ಟ್ರಾನಿಕಲಿ ಮಾಡುವಾಗ “ನಮೂದಿಸುವಾಗ ಆಗಿರುವಂಥ ಲೋಪ” ಆಗಿದ್ದಿರಬಹುದು ಎಂದು ಹೇಳಿದೆ. ಕಂಪನೀಸ್ ಹೌಸ್ ಎಂಬುದು ಎಕ್ಸ್ ಕ್ಯೂಟಿವ್ ಸಂಸ್ಥೆ. ಅದು ಲಿಮಿಟೆಡ್ ಕಂಪನಿಗಳ ಇನ್ ಕಾರ್ಪೊರೇಟ್ ಹಾಗೂ ವಿಸರ್ಜನೆ ಎರಡನ್ನೂ ಮಾಡುತ್ತದೆ.
ದ ವೀಕ್ 2019ರ ಏಪ್ರಿಲ್ 30ರಂದು ವರದಿಯನ್ನು ಪ್ರಕಟಿಸಿದ್ದು, ಆಗಸ್ಟ್ 21, 2003ರ ಬ್ಯಾಕಪ್ಸ್ ಲಿಮಿಟೆಡ್‌ನ 'ಸರ್ಟಿಫಿಕೇಟ್ ಆಫ್ ಇನ್ ಕಾರ್ಪೊರೇಷನ್'ಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಅದರಲ್ಲಿ ರಾಹುಲ್ 'ನಿರ್ದೇಶಕ 1' ಎಂದು ಲಿಸ್ಟ್ ಮಾಡಲಾಗಿದ್ದು, ಅವರ ಜನ್ಮ ದಿನಾಂಕವನ್ನು 19-06-1970 ಎಂದು ನಮೂದಿಸಲಾಗಿದೆ ಮತ್ತು ಅವರ ರಾಷ್ಟ್ರೀಯತೆಯನ್ನು ಭಾರತೀಯ ಎಂದು ನೀಡಲಾಗಿದೆ.
CONCLUSION
ರಾಹುಲ್ ಗಾಂಧಿ ದ್ವಿಪೌರತ್ವ ಆರೋಪ ಹಾಗೂ ಆ ಆರೋಪ ಮಾಡಲಿಕ್ಕೆ ಕಾರಣವಾಗಿ ನೀಡಿದ ದಾಖಲಾತಿ ಎರಡನ್ನೂ ಸುಪ್ರೀಂ ಕೋರ್ಟ್ ನ ಪೀಠವು ರದ್ದು ಮಾಡಿದೆ. ಆದರೆ ಅದನ್ನೇ ಈಗಲೂ ಹೇಳುತ್ತಾ ಇರುವುದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಕಂಡುಬರುತ್ತದೆ.