ತಮಿಳುನಾಡಿನಲ್ಲಿ ಮಗು ಹುಟ್ಟುತ್ತಲೇ ಮಾತನಾಡಿತು ಎಂಬ ಸುದ್ದಿ ನಂಬಲು ಸಾಧ್ಯವಿಲ್ಲ ಎನ್ನುವ ವೈದ್ಯರು
Newly born baby speaks in Tamil Nadu claim by hospital doctor
By Srinivasa Mata Published on 14 Feb 2023 1:43 PM ISTಹೈದರಾಬಾದ್, ಫೆಬ್ರವರಿ 14: ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಇಲ್ಲಿರುವ ಉತ್ತರಮೇರೂರ್ ಎಂಬಲ್ಲಿ ಇರುವ ಚಿನ್ನ ಅಳಿಸೂರ್ ಎಂಬ ಗ್ರಾಮದಲ್ಲಿ ರೇವತಿ- ಚಂದ್ರ ಎಂಬ ದಂಪತಿಗೆ ಜನಿಸಿದ ಮಗು ಹುಟ್ಟುತ್ತಲೇ ಮಾತನಾಡಿತು, ಆ ನಂತರ ಅಳುವುದಕ್ಕೆ ಆರಂಭಿಸಿತು. ಅದೀಗ ಉಳಿದ ಮಕ್ಕಳಂತೆಯೇ ಇದೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ ನ್ಯೂಸ್ ಮೀಟರ್ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಒಂದು ಮಗು ಹುಟ್ಟಿದ ತಕ್ಷಣ ಮಾತನಾಡುವುದು ಅಸಾಧ್ಯ ಎಂದು ತಿಳಿದುಬಂದಿದೆ.
Fact check
ಬೆಂಗಳೂರಿನ ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯಲ್ಲಿ ಇರುವ ಸ್ಪೀಚ್ ಥೆರಪಿಸ್ಟ್ ಗೋಕುಲ ರಾಜ್ ಅವರು ನ್ಯೂಸ್ ಮೀಟರ್ ಜತೆ ಮಾತನಾಡಿ, ಒಂದು ಮಗು ಹುಟ್ಟಿದ ಕೂಡಲೇ ಅಳುತ್ತದೆ. ಸಾಮಾನ್ಯವಾಗಿ ಹುಟ್ಟಿದ ಎರಡರಿಂದ ಮೂರು ತಿಂಗಳಿಗೆ ಗೂ.. ಎಂಬ ಶಬ್ದ ಮಾಡಲು ಆರಂಭಿಸುತ್ತದೆ. ಅದುವರೆಗೆ ಮಗುವಿನ ಭಾವಾಭಿವ್ಯಕ್ತಿ ಅಂದರೆ ಅಳುವೇ ಆಗಿರುತ್ತದೆ. ಒಂದಕ್ಷರಗಳನ್ನು ಉಚ್ಚಾರ ಮಾಡುವುದಕ್ಕೆ ಆರು ತಿಂಗಳು ಸಮಯ ಆಗುತ್ತದೆ. ಅಂದರೆ ಮಗು ಹುಟ್ಟಿದ ಸರಾಸರಿ ಆರು ತಿಂಗಳಿಗೆ ಒಂದಕ್ಷರಗಳನ್ನು ಹೇಳಲು ಆರಂಭಿಸುತ್ತದೆ. ಸಾಧಾರಣವಾಗಿ ಅಮ್ಮ- ಅಪ್ಪ ಅನ್ನೋದನ್ನು ಹೇಳುವುದಕ್ಕೆ ಒಂಬತ್ತು ತಿಂಗಳು ಆಗುತ್ತದೆ. ಅದು ಕೂಡ ಮಗುವಿನ ಅರ್ಥಪೂರ್ಣವಾದ ಭಾವಾಭಿವ್ಯಕ್ತಿ ಆಗಿರುವುದಿಲ್ಲ. ನಾವು ಏನು ಹೇಳುತ್ತೇವೋ ಅದನ್ನು ಮತ್ತೆ ಹೇಳುತ್ತದೆ, ಅಷ್ಟೇ. ಇವೆಲ್ಲ ಸಾಮಾನ್ಯವಾಗಿ ತೆಗೆದುಕೊಳ್ಳುವ ಸಮಯ. ಕೆಲವು ಮಕ್ಕಳು ಒಂದೆರಡು ತಿಂಗಳು ತಡ ಆಗಬಹುದು ಎಂದು ಹೇಳಿದರು.
ಒಂದು ವರ್ಷಕ್ಕೆ ಮಗು ಅಪ್ಪ- ಅಮ್ಮ, ಅಜ್ಜಿ- ತಾತ ಅಂತ ಹೇಳಬೇಕು. ಒಂದು ವೇಳೆ ಮಗುವಿಗೆ ಒಂದೂವರೆ ವರ್ಷ ಆದ ನಂತರವೂ ಎರಡು ವರ್ಷಕ್ಕೂ ಮಗು ಅಪ್ಪ- ಅಮ್ಮ, ಅಜ್ಜಿ- ತಾತ ಹೀಗೆ ಮಾತನಾಡುತ್ತಿಲ್ಲ ಅಂತಾದರೆ ಆಗ ಪೀಡಿಯಾಟ್ರಿಷನ್ ಅಥವಾ ಸ್ಪೀಚ್ ಥೆರಪಿಸ್ಟ್ ಹತ್ತಿರ ಮಗುವನ್ನು ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಬೇಕು. ಹೀಗೆ ಮಾತನಾಡಿರುವುದಕ್ಕೆ ಪರಿಸರ ಕಾರಣಗಳಿರಬಹುದು, ಕೌಟುಂಬಿಕ ಸಮಸ್ಯೆ, ಮಾನಸಿಕ ಸಮಸ್ಯೆ, ವೈದ್ಯಕೀಯ ಕಾರಣಗಳು ಇರಬಹುದು ಎಂದರು.
ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಈ ನಿರ್ದಿಷ್ಟ ಸುದ್ದಿಯ ಬಗ್ಗೆ ಹೇಳುವುದಾದರೆ, ಇದನ್ನು ನಂಬುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಮಗುವೊಂದು ಹುಟ್ಟಿದಾಗ ಅದರ ಶ್ವಾಸಕೋಶ, ಉಸಿರಾಟದ ನಾಳ (ವಿಂಡ್ ಪೈಪ್), ವೋಕಲ್ ಕಾರ್ಡ್, ಧ್ವನಿ ಪೆಟ್ಟಿಗೆ ಹಾಗೂ ಬಾಯಿಯಲ್ಲಿ ಆಮ್ನಿಯಾಟಿಕ್ಸ್ ಫ್ಲುಯಿಡ್ಸ್ ತುಂಬಿಕೊಂಡಿರುತ್ತದೆ. ಮಕ್ಕಳು ಅತ್ತರೆ ಆ ಆಮ್ನಿಯಾಟಿಕ್ಸ್ ಫ್ಲುಯಿಡ್ಸ್ ಇಲ್ಲದಂತಾಗುತ್ತದೆ. ಅದಕ್ಕೆ ಮುಂಚೆ ಮಾತನಾಡುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ವಿಜ್ಞಾನ ಅಂದರೆ ಡೇಟಾ. ಅದರ ಪ್ರಕಾರವಾಗಿ, ಗಮನಿಸಬೇಕಾದ ವಾಸ್ತವ ಅಂಶಗಳನ್ನು ಗಮನಿಸಬೇಕು. ಆ ವಿಡಿಯೋದಲ್ಲಿ ವೈದ್ಯರು, ವಾಸ್ತವಕ್ಕೆ ಪುರಾವೆ ಅಂತ ಏನನ್ನೂ ನೀಡುತ್ತಿಲ್ಲ. ಪೋಷಕರು, ಅಜ್ಜಿ, ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಹೇಳುವುದನ್ನು ನಂಬುವುದಕ್ಕೆ ಸಾಧ್ಯವಿಲ್ಲ. ನಾನು ಆರಂಭದಲ್ಲೇ ಹೇಳಿದಂತೆ, ಒಂದು ಮಗು ಹುಟ್ಟಿದ ತಕ್ಷಣ ಅದು ಅಳುವುದನ್ನೇ ಆರಂಭಿಸುತ್ತದೆ. ಆ ನಂತರ ಎರಡು- ಮೂರು ತಿಂಗಳಿಗೆ ‘ಗೂ’ ಎಂಬ ಶಬ್ದ ಮಾಡುತ್ತದೆ ಎಂದು ವಿವರಿಸಿದರು.
Conclusion
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ರೇವತಿ- ಚಂದ್ರ ಅವರ ಮಗು ಹುಟ್ಟುತ್ತಲೇ ಮಾತನಾಡಿತು ಎಂಬ ಸುದ್ದಿ ಮೊದಲಿಗೆ ನ್ಯೂಸ್ 7ರಲ್ಲಿ ಪ್ರಸಾರ ಮಾಡಲಾಗಿದೆ. ಅದರಲ್ಲಿ ಮಗುವಿನ ತಾಯಿ, ಅಜ್ಜಿ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮಾತನಾಡಿದ್ದು, “ನಾನ್ ವಂದಿಟ್ಟೇನ್” (ನಾನು ಬಂದ್ಬಿಟ್ಟೆ) ಎಂದು ಮಗು ಹೇಳಿದಂತೆ ಕೇಳಿಬಂತು ಎಂದಿದ್ದಾರೆ. ಆದರೆ ವೈದ್ಯಕೀಯ ವಿಜ್ಞಾನದ ಪ್ರಕಾರ ಇದು ಸಾಧ್ಯವೇ ಇಲ್ಲ ಎಂಬುದನ್ನು ವೈದ್ಯರು ಹೇಳುತ್ತಾರೆ ಹಾಗೂ ಈ ರೀತಿ ಹಿಂದೆ ಆಗಿದ್ದರ ಬಗ್ಗೆ ಯಾವುದೇ ಉದಾಹರಣೆಯೂ ಸಿಗುವುದಿಲ್ಲ. ಆದ್ದರಿಂದ ಈ ಸುದ್ದಿ ನಂಬುವುದಕ್ಕೆ ಸಾಧ್ಯವಿಲ್ಲ.