ಭಾರತದ ವಿರುದ್ಧ ಏಷ್ಯಾಕಪ್ ನಲ್ಲಿ ಸೋತ ಬಳಿಕ ಎಲ್ಲ ಪಾಕ್ ಆಟಗಾರರು ಆಸ್ಪತ್ರೆಗೆ ದಾಖಲು ಎಂಬುದು ಸುಳ್ಳು ಸುದ್ದಿ

ಏಷ್ಯಾ ಕಪ್ 2023ರ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತದ ವಿರುದ್ಧ ಭಾರೀ ಅಂತರದಿಂದ ಸೋತ ನಂತರ ಪಾಕಿಸ್ತಾನದ ಎಲ್ಲ ಆಟಗಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಪಾಕಿಸ್ತಾನದಲ್ಲಿ ಅಭಿಮಾನಿಗಳು ಎಲ್ಲ ಟೀವಿ ಸೆಟ್ ಗಳನ್ನು ಒಡೆದಿದ್ದಾರೆ ಎಂಬುದು ಸುಳ್ಳು ಸುದ್ದಿ.

By Srinivasa Mata  Published on  13 Sep 2023 5:37 AM GMT
ಭಾರತದ ವಿರುದ್ಧ ಏಷ್ಯಾಕಪ್ ನಲ್ಲಿ ಸೋತ ಬಳಿಕ ಎಲ್ಲ ಪಾಕ್ ಆಟಗಾರರು ಆಸ್ಪತ್ರೆಗೆ ದಾಖಲು ಎಂಬುದು ಸುಳ್ಳು ಸುದ್ದಿ

ಹೈದರಾಬಾದ್: ಸೋಲಿನ ಬಳಿಕ ಪಾಕಿಸ್ತಾನದಲ್ಲಿ ದೊಡ್ಡ ಜಗಳ | ಎಲ್ಲಾ ಪಾಕ್ ಆಟಗಾರರು ಆಸ್ಪತ್ರೆಗೆ ದಾಖಲು - ಹೀಗೊಂದು ಶೀರ್ಷಿಕೆ ನೀಡಿ, ವಿಡಿಯೋವೊಂದನ್ನು ಮಾಡಲಾಗಿದೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಷ್ಯಾ ಕಪ್ 2023ರ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತದ ವಿರುದ್ಧ ಇನ್ನೂರಕ್ಕೂ ಹೆಚ್ಚು ರನ್ ನಿಂದ ಪಾಕಿಸ್ತಾನ ಸೋಲನುಭವಿಸಿದೆ. ಆ ನಂತರ ಹೀಗಾಗಿದೆ ಎಂದು ವರದಿ ಮಾಡಿರುವ ಈ ವಿಡಿಯೋ “ಸುಳ್ಳು ಮಾಹಿತಿ”ಯನ್ನು ಒಳಗೊಂಡಿದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.

ವಿಡಿಯೋ ಸುದ್ದಿಯನ್ನು ನೋಡುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

Fact Check

ಪಾಕಿಸ್ತಾನದ ಬೌಲರ್ ಗಳಾದ ಹ್ಯಾರಿಸ್ ರವೂಫ್ ಹಾಗೂ ನಸೀಮ್ ಶಾ ಗಾಯಾಳುಗಳಾಗಿದ್ದಾರೆ. ವಿಶ್ವ ಕಪ್ ಅನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಅವರಿಬ್ಬರಿಗೆ ಬದಲಿಯಾಗಿ ಶಾನವಾಜ್ ದಹಾನಿ ಮತ್ತು ಜಮಾನ್ ಖಾನ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಪಾಕ್ ತಂಡ ಹೇಳಿಕೆ ನೀಡಿದೆ. ಇನ್ನು ಸಲ್ಮಾನ್ ಅಘಾ ಖಾನ್ ಅವರಿಗೆ ಭಾರತದ ವಿರುದ್ಧದ ಪಂದ್ಯದಲ್ಲಿ ಚೆಂಡು ಮುಖಕ್ಕೆ ಬಡಿದು ಗಾಯವಾಗಿತ್ತು. ಇದನ್ನು ಹೊರತುಪಡಿಸಿದರೆ ವಿಡಿಯೋದಲ್ಲಿ ಸುದ್ದಿ ಆಗಿರುವಂತೆ ಎಲ್ಲ ಪಾಕ್ ಆಟಗಾರರು ಆಸ್ಪತ್ರೆಗೇನೂ ಸೇರಿಲ್ಲ.

ಹ್ಯಾರಿಸ್ ರವೂಫ್, ನಸೀಮ್ ಶಾ ಅವರಿಗೆ ಗಾಯವಾಗಿರುವುದು ಮತ್ತು ಅವರಿಬ್ಬರಿಗೆ ಬದಲಿಯಾಗಿ ಇನ್ನಿಬ್ಬರು ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಪಾಕ್ ಕ್ರಿಕೆಟ್ ತಂಡದ ಹೇಳಿಕೆ ಪ್ರಕಟ ಆಗಿರುವ ಪ್ರಜಾವಾಣಿ ವರದಿಯನ್ನು ಇಲ್ಲಿ ಓದಬಹುದು. ಇನ್ನು ವಿಸ್ತಾರ ನ್ಯೂಸ್ ವೆಬ್ ಸೈಟ್ ನಲ್ಲಿ ಸಲ್ಮಾನ್ ಅಘಾ ಖಾನ್ ಅವರಿಗೆ ಮುಖಕ್ಕೆ ಚೆಂಡು ಬಡಿದು, ರಕ್ತಸ್ರಾವ ಆಗಿರುವ ಬಗ್ಗೆ ವರದಿ ಪ್ರಕಟವಾಗಿದೆ. ಅದನ್ನು ಸಹ ಇಲ್ಲಿ ಓದಬಹುದು.




ಇನ್ನು ಭಾರತದ ವಿರುದ್ಧ ಪಾಕ್ ಹೀನಾಯವಾಗಿ ಸೋತಿದ್ದರಿಂದ ಪಾಕಿಸ್ತಾನದಲ್ಲಿ “ಎಲ್ಲ ಟೀವಿಗಳನ್ನು” ಒಡೆದು ಹಾಕಲಾಗಿದೆ ಎಂದು ವಿಡಿಯೋದಲ್ಲಿ ಹೇಳಿದ್ದು, ಅಂಥ ಯಾವುದೇ ವರದಿ ಪ್ರಕಟವಾಗಿಲ್ಲ. ಜತೆಗೆ “ದಿ ಪ್ರಿಂಟ್” ವೆಬ್ ಸೈಟ್ ನಲ್ಲಿ Losing to India broke hearts not TV in Pakistan. Cricket fans took a ‘loyalty test’ on Babar ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಲಾಗಿದೆ. ಭಾರತಕ್ಕೆ ಸೋತಿದ್ದರಿಂದ ಪಾಕಿಸ್ತಾನದಲ್ಲಿ ಹೃದಯಗಳು ಒಡೆದಿವೆ, ಟೀವಿಯಲ್ಲ. ಕ್ರಿಕೆಟ್ ಅಭಿಮಾನಿಗಳು ಬಾಬರ್ ವಿಶ್ವಾಸ ಪರೀಕ್ಷೆಗೆ ಒಡ್ಡಿದ್ದಾರೆ ಎಂಬ ಅರ್ಥದಲ್ಲಿ ಈ ವರದಿ ಇದೆ.




ಪಾಕಿಸ್ತಾನ ಆಟಗಾರರು ತವರಿಗೆ ಬಂದರೆ ಹೊಡಿತೀವಿ, ಬಡಿತೀವಿ ಎಂದು ಪಾಕಿಸ್ತಾನೀಯರು ಹೇಳುತ್ತಿದ್ದಾರೆ ಎಂದು ಸಹ ವಿಡಿಯೋದಲ್ಲಿ ಹೇಳಲಾಗಿದೆ. ಜತೆಗೆ ಪಾಕಿಸ್ತಾನದಲ್ಲಿ ದೊಡ್ಡ ಜಗಳ ಎಂದು ವಿಡಿಯೋದ ಥಂಬ್ ನೇಲ್ ನಲ್ಲಿ ಹಾಕಲಾಗಿದೆ. ಆದರೆ ಎಲ್ಲಿ, ಯಾರು ಹೇಳಿದ್ದು ಎಂಬುದಕ್ಕೆ ಒಂದು ಉದಾಹರಣೆ ಎಂಬಂತೆ ‘ಎಕ್ಸ್’ (ಈ ಹಿಂದೆ ಟ್ವಿಟ್ಟರ್) ನಂಥ ಮೈಕ್ರೋ ಬ್ಲಾಗಿಂಗ್ ಸೈಟ್ ಅಥವಾ ಯಾವುದೇ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ವೈರಲ್ ಆದ ವಿಡಿಯೋದಲ್ಲಿ ಉಲ್ಲೇಖ ಮಾಡಿಲ್ಲ. ಇನ್ನು ಪಾಕಿಸ್ತಾನದಲ್ಲಿ ಅಷ್ಟು ದೊಡ್ಡ ಜಗಳ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿಯಾದರೂ ವರದಿ ಆಗಬೇಕಿತ್ತು. ಅಂಥ ಯಾವ ವರದಿ ಸಹ ಆಗಿಲ್ಲ.

Conclusion

ಈ ಎಲ್ಲ ಸುದ್ದಿ- ಸಾಕ್ಷ್ಯಗಳನ್ನು ಪರಾಮರ್ಶೆ ಮಾಡಿದ ಮೇಲೆ ಪಾಕ್ ನ ಎಲ್ಲ ಆಟಗಾರರು ಆಸ್ಪತ್ರೆಗೆ ದಾಖಲು, ಪಾಕಿಸ್ತಾನದಲ್ಲಿ ದೊಡ್ಡ ಜಗಳ ಎಂಬ ಶೀರ್ಷಿಕೆಯಡಿ ವೈರಲ್ ಆಗಿರುವಂಥ ಸೋಷಿಯಲ್ ಮೀಡಿಯಾದ ವಿಡಿಯೋ ಸುಳ್ಳು ಸುದ್ದಿ ಎಂದು ಖಚಿತವಾಗುತ್ತದೆ.

Claim Review:Pakistan all cricketers admitted to hospital after defeat against India in Super 4 match of Asia Cup 2023 false claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story