ದೊಡ್ಡ ಕಟ್ಟಡವೊಂದರ ಬದಿಯಿಂದ ಕೆಳಗಿಳಿದು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಜನರು ಹಲ್ಲೆ ನಡೆಸುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಇಸ್ಲಾಮಿ ಮೂಲಭೂತವಾದಿ ಗುಂಪು ಜಮಾತ್-ಎ-ಇಸ್ಲಾಮಿಯ ಜನರು ಬಾಂಗ್ಲಾದೇಶದಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾರೆ. ಇವರಿಂದ ಪಾರಾಗಲು ಹಿಂದೂ ವಿದ್ಯಾರ್ಥಿಗಳು ಕಟ್ಟಡದಿಂದ ಜಿಗಿಯುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ರಿಷಭ್ ಎಂಬ ಎಕ್ಸ್ ಖಾತೆಯಿಂದ ಜುಲೈ 22, 2024 ರಂದು ಈ ವಿಡಿಯೋ ಅಪ್ಲೋಡ್ ಆಗಿದ್ದು ಇದರಲ್ಲಿ ಕೆಲ ಜನರು ದೊಡ್ಡ ಕಟ್ಟಡದ ಬದಿಯಿಂದ ಕೆಳಗೆ ಇಳಿಯುತ್ತಿರುವುದು ಮತ್ತು ಕೆಲವು ಕಟ್ಟಡದಿಂದ ಕೆಳಗೆ ಹಾರಿರುವುದು ಸೆರೆಯಾಗಿದೆ. ಈ ವೀಡಿಯೊಕ್ಕೆ ಅವರು ಶೀರ್ಷಿಕೆ ಕೂಡ ನೀಡಿದ್ದು, “ಬಾಂಗ್ಲಾದೇಶದ ಢಾಕಾದಲ್ಲಿ ಹಿಂದೂ ವಿದ್ಯಾರ್ಥಿಗಳ ಭಯಾನಕ ದೃಶ್ಯ: ಜಮಾತ್-ಎ-ಇಸ್ಲಾಮಿ ನಡೆಸಿದ ದಾಳಿಯಿಂದ ಭಯಭೀತರಾದ ಹಿಂದೂ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೇಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂಬುದನ್ನು ನೋಡಿ. ಇವರಲ್ಲಿ ಎಷ್ಟು ಜನರು ಮೇಲಿನಿಂದ ಕೆಳಗೆ ಬಿದ್ದರು ನೋಡಿ,'' ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಸಂಜಯ್ ಗುಪ್ತಾ ಎಂಬ ಫೇಸ್ಬುಕ್ ಬಳಕೆದಾರರು ಇದೇ ವೀಡಿಯೊವನ್ನು ಹಂಚಿಕೊಂಡಿದ್ದು, ''ಜಮಾಯತ್-ಎ-ಇಸ್ಲಾಮಿ ಮಾಡಿದ ದಾಳಿಯಲ್ಲಿ ಬಾಂಗ್ಲಾದೇಶದ ಢಾಕಾದ ಹಿಂದೂ ಹಾಸ್ಟೆಲ್ ವಿದ್ಯಾರ್ಥಿಗಳು ಕಾರ್ನಿಶ್‌ನೊಂದಿಗೆ ಹೇಗೆ ನೇತಾಡುತ್ತಿದ್ದಾರೆ ಎಂಬುದನ್ನು ನೋಡಿ. ಮೇಲಿನಿಂದ ಎಷ್ಟು ಜನರು ಬಿದ್ದಿದ್ದಾರೊ. ಬದುಕಿದ್ದಾರೊ ಸತ್ತಿದ್ದಾರೊ ದೇವರೇ ಬಲ್ಲ,'' ಎಂದು ಬರೆದಿದ್ದಾರೆ.
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ವೈರಲ್ ವೀಡಿಯೊದಲ್ಲಿ ಛಾತ್ರಾ ಲೀಗ್ ನಾಯಕರು ಮತ್ತು ಕಾರ್ಯಕರ್ತರು ಕಟ್ಟಡದ ತುದಿಯಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುತ್ತಿರುವುದು ನಾವು ಕಂಡುಕೊಂಡಿದ್ದೇವೆ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್‍ನಲ್ಲಿ ವೈರಲ್ ವೀಡಿಯೊದ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಜುಲೈ 18, 2024 ರಂದು ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಕಂಡುಬಂತು.
ವೀಡಿಯೊಕ್ಕೆ ಬಾಂಗ್ಲಾದೇಶದ ಕೋಟಾ ವಿರೋಧಿ ಪ್ರತಿಭಟನೆ ಎಂದು ಶೀರ್ಷಿಕೆ ನೀಡಲಾಗಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಬಾಂಗ್ಲಾದೇಶ ಛತ್ರ ಲೀಗ್ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಆರು ಅಂತಸ್ತಿನ ಕಟ್ಟಡದಿಂದ ಎಸೆಯಲಾಯಿತು ಎಂದು ವೀಡಿಯೊದಲ್ಲಿ ಆ್ಯಂಕರ್ ಹೇಳುತ್ತಾರೆ.
ಇದೇ ವೀಡಿಯೊವನ್ನು RTV ಯೂಟ್ಯೂಬ್ ಚಾನಲ್ನಲ್ಲಿ ಕೂಡ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಕೋಟಾ ವಿರೋಧಿ ಪ್ರತಿಭಟನೆ ನಡುವೆ, ಛತ್ರ ಲೀಗ್ ಮತ್ತು ಜುಬೋ ಲೀಗ್‌ನ ಕಾರ್ಯಕರ್ತರು ಆತ್ಮರಕ್ಷಣೆಗಾಗಿ ಕಟ್ಟಡದ ಮೇಲ್ಛಾವಣಿ ಹತ್ತಿದ್ದಾರೆ ಎಂದು ವರದಿಯಲ್ಲಿದೆ.
ಬಾಂಗ್ಲಾ ಟ್ರಿಬ್ಯೂನ್ ಎಂಬ ವೆಬ್ಸೈಟ್ನಲ್ಲಿ ಜುಲೈ 18, 2024 ರಂದು ಈ ಕುರಿತು ಸುದ್ದಿ ಪ್ರಕಟವಾಗಿದೆ.
ಕಟ್ಟಡದಿಂದ ಎಸೆಯಲ್ಪಟ್ಟ ಬಿಸಿಎಲ್ ಕಾರ್ಮಿಕರ ಸ್ಥಿತಿಯ ಬಗ್ಗೆ ವರದಿಯಲ್ಲಿ ಬರೆಯಲಾಗಿದೆ. “ಚಿತ್ತಗಾಂಗ್‌ನಲ್ಲಿ ಕೋಟಾ ಸುಧಾರಣೆಗಾಗಿ ಆಂದೋಲನ ನಡೆಸುತ್ತಿದ್ದ ವಿದ್ಯಾರ್ಥಿಗಳೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಆರು ಅಂತಸ್ತಿನ ಕಟ್ಟಡದಿಂದ ಎಸೆಯಲ್ಪಟ್ಟ ಆರು ಬಿಸಿಎಲ್ ಕಾರ್ಯಕರ್ತರ ಸ್ಥಿತಿ ಗಂಭೀರವಾಗಿದೆ. ಅವರನ್ನು ಚಿತ್ತಗಾಂಗ್‌ನ ಎರಡು ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ. ಉಳಿದವರು ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಪಾರ್ಕ್‌ವ್ಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,'' ಎಂದು ಬರೆಯಲಾಗಿದೆ.
ಹೀಗಾಗಿ, ವೈರಲ್ ವೀಡಿಯೊದಲ್ಲಿರುವಂತೆ ಬಾಂಗ್ಲಾದೇಶದಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದರೆ ಬಿಸಿಎಲ್ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ ಎಂಬುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ.