ಹೈದರಾಬಾದ್: ಉತ್ತರ ಪ್ರದೇಶದಲ್ಲಿ ಹಿಂದೂ ಹುಡುಗಿಯ ದುಪ್ಪಟ ಹಿಡಿದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಜಿಹಾದಿಗಳಿಗೆ ಯೋಗಿ ಸರ್ಕಾರ ಸರಿಯಾದ ಉತ್ತರ ನೀಡಿದೆ- ಹೀಗೆ ಒಕ್ಕಣೆ ಹಾಕಿ, ಬಿಜೆಪಿ ಶಿವಮೊಗ್ಗ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದ್ದು, ಈ ಪೋಸ್ಟ್ ನಲ್ಲಿ ಇರುವ ವಿಡಿಯೋ ಓದುಗರನ್ನು ದಾರಿ ತಪ್ಪಿಸುವಂಥದ್ದು ಮತ್ತು ತಪ್ಪು ಮಾಹಿತಿ ಒಳಗೊಂಡಿದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.
ಈ ಫೇಸ್ ಬುಕ್ ಪೋಸ್ಟ್ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
Fact Check
ರಾಜಸ್ಥಾನದ ಭರತ್ ಪುರದಲ್ಲಿನ ಅಜಯ್ ಝಾಮ್ರಿ ಹತ್ಯೆ ಪ್ರಕರಣದ ಆರೋಪಿಗಳ ವಿಡಿಯೋವನ್ನು ಫಸ್ಟ್ ಇಂಡಿಯಾ ನ್ಯೂಸ್ ನಲ್ಲಿ ಪ್ರಸಾರ ಮಾಡಲಾಗಿದ್ದು, ಸದ್ಯಕ್ಕೆ ವೈರಲ್ ಆಗಿರುವಂಥ ಫೇಸ್ ಬುಕ್ ಪೋಸ್ಟ್ ಅದಕ್ಕೆ ಸಂಬಂಧಿಸಿದ್ದಾಗಿದೆ. ಆ ವಿಡಿಯೋವನ್ನು ನೋಡುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ. ಇನ್ನು ಈ ಘಟನೆಯ ಬಗ್ಗೆ ವಿವರಗಳು ವರದಿಯಾದಂತೆ ಈ ರೀತಿ ಇದೆ: ಆಗಸ್ಟ್ 27ನೇ ತಾರೀಕಿನ ಸಂಜೆ ಹೊತ್ತಿಗೆ ರಾಜಸ್ಥಾನದ ಭರತ್ ಪುರದಲ್ಲಿ ಇರುವ ಹೀರಾದಾಸ್ ಚೌಕದಲ್ಲಿ ಅಜಯ್ ಝಾಮ್ರಿ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಈ ಪ್ರಕರಣದ ತನಿಖೆ ವೇಳೆ, ಮೂವರು ಆರೋಪಿಗಳು ಉತ್ತರಾಖಂಡ್ ನಲ್ಲಿನ ಡೆಹ್ರಾಡೂನ್ ನಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು, ಆ ನಂತರದಲ್ಲಿ ಪೊಲೀಸರು ಮೂವರು ಆರೋಪಿಗಳಾದ ಯುವರಾಜ್, ಬಂಟಿ ಮತ್ತು ತೇಜ್ ವೀರ್ ಎಂಬುವರನ್ನು ಅಲ್ಲಿಯೇ ಬಂಧಿಸಿ, ಸೆಪ್ಟೆಂಬರ್ 5ನೇ ತಾರೀಕಿನ ರಾತ್ರಿ ಭರತ್ ಪುರಕ್ಕೆ ಕರೆತಂದರು.
ಭರತ್ ಪುರ ಪೊಲೀಸರ ಜಿಲ್ಲಾ ವಿಶೇಷ ತಂಡವು (ಡಿಎಸ್‌ಟಿ) ಮೂವರು ಆರೋಪಿಗಳನ್ನು ಅಟಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸುವುದಕ್ಕೆ ಆಲೋಚಿಸಿದ್ದರು. ಈ ಸಮಯದಲ್ಲಿ ತೇಜ್ ವೀರ್ ಎಂಬಾತ ಕಾನ್‌ಸ್ಟೇಬಲ್ ಒಬ್ಬರ ರೈಫಲ್ ಕಸಿದು, ಓಡಿಹೋಗಲು ಆರಂಭಿಸಿದ. ಆತನನ್ನು ಹಿಡಿಯುವುದಕ್ಕಾಗಿ ಪೊಲೀಸರು ಬೆನ್ನಟ್ಟಿದಾಗ, ಆತ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿಯ ಎದೆಗೆ ಗುಂಡು ಹಾರಿದೆ, ಆದರೆ ಅವರು ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಇದಾದ ನಂತರದಲ್ಲಿ ಪೊಲೀಸರು ಸಹ ಗುಂಡು ಹಾರಿಸಿದ್ದು, ಮೂವರು ಆರೋಪಿಗಳ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಆರೋಪಿಗಳನ್ನು ಆರ್ ಬಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಜೈಪುರಕ್ಕೆ ಕಳುಹಿಸಲಾಗಿದೆ.
ಆದರೆ, ಉತ್ತರಪ್ರದೇಶದ ಅಂಬೇಡ್ಕರ್ ನಗರ ಘಟನೆಯೇ ಬೇರೆ. ಅಲ್ಲಿ ಹದಿನೇಳು ವರ್ಷದ ವಿದ್ಯಾರ್ಥಿನಿಯ ದುಪ್ಪಟ್ಟಾ ಎಳೆದಿದ್ದರಿಂದ ವಾಹನದಿಂದ ಬಿದ್ದು, ಆಕೆ ಮೃತಪಡುತ್ತಾಳೆ. ಪೊಲೀಸರು ಆರೋಪಿಗಳನ್ನು ಬಂಧಿಸಿದಾಗ, ಅವರು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಈ ವೇಳೆ ಪೊಲೀಸರು ಹಾರಿಸಿದ ಗುಂಡಿನಿಂದ ಆರೋಪಿಗಳಿಗೆ ಗಾಯಗಳಾಗುತ್ತವೆ. ಈ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ”ದಲ್ಲಿ ವರದಿ ಪ್ರಕಟವಾಗಿದ್ದು, ಅದರಲ್ಲಿ ಆರೋಪಿಗಳ ವಿಡಿಯೋ ಸಹ ಇದೆ. ಅದನ್ನು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.
Conclusion
ಈ ಎರಡೂ ಘಟನೆಗಳು ಬೇರೆ ಬೇರೆ. ಆದರೆ ರಾಜಸ್ಥಾನದ ಭರತ್ ಪುರದಲ್ಲಿ ಕೊಲೆ ಪ್ರಕರಣದಲ್ಲಿ ಬಂದಿಯಾದ ಆರೋಪಿಗಳ ವಿಡಿಯೋವನ್ನು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿನ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಗಳು ಎಂದು ಪೋಸ್ಟ್ ಮಾಡಿ, ತಪ್ಪು ಮಾಹಿತಿ ನೀಡುತ್ತಿರುವುದು ಖಾತ್ರಿಯಾಗುತ್ತದೆ.