ಹೈದರಾಬಾದ್: ನಿಮ್ಮ ಬಳಿ ರೇಷನ್ ಕಾರ್ಡ್ ಒಂದಿದ್ದರೆ ಸಾಕು ಗ್ಯಾಸ್ ಸಿಲಿಂಡರ್ ಗೆ ಹಣ ಕೊಡುವ ಅವಶ್ಯಕತೆಯೇ ಇಲ್ಲ ಹೇಗೆ ಗೊತ್ತಾ - ಹೀಗೊಂದು ಶೀರ್ಷಿಕೆ ನೀಡಿ, ಪ್ರಕಟಿಸಿರುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಈ ಸುದ್ದಿ “ಸುಳ್ಳು” ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
ಈ ಸುದ್ದಿಯನ್ನು ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
Fact Check
ನಿಮ್ಮ ಬಳಿ ರೇಷನ್ ಕಾರ್ಡ್ ಒಂದಿದ್ದರೆ ಸಾಕು ಗ್ಯಾಸ್ ಸಿಲಿಂಡರ್ ಗೆ ಹಣ ಕೊಡುವ ಅವಶ್ಯಕತೆಯೇ ಇಲ್ಲ. -ಹೀಗೆ ವೈರಲ್ ಸುದ್ದಿ ಆರಂಭವಾಗುತ್ತದೆ. ದೇಶದ ಬಡವರಿಗಾಗಿ ಇರುವಂಥ ಉಜ್ವಲ ಯೋಜನೆಯಡಿಯಲ್ಲಿ ವರ್ಷಕ್ಕೆ ಹನ್ನೆರಡು ಸಿಲಿಂಡರ್ ಗೆ ಇನ್ನೂರು ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ. ಜತೆಗೆ ಇತ್ತೀಚೆಗೆ ಗೃಹ ಬಳಕೆಗೆ ಬಳಸುವಂಥ ಸಿಲಿಂಡರ್ ಬೆಲೆಯನ್ನು ರಕ್ಷಾಬಂಧನದ ಸಂದರ್ಭದಲ್ಲಿ ಆಗಸ್ಟ್ 29ನೇ ತಾರೀಕು ಕೇಂದ್ರ ಸರ್ಕಾರದಿಂದ 200 ರೂಪಾಯಿ ಇಳಿಸಲಾಯಿತು. ಸದ್ಯಕ್ಕೆ ಬೆಂಗಳೂರಿನಲ್ಲಿ 14.2 ಕೇಜಿ ತೂಕದ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ 905 ರೂಪಾಯಿಗೆ ಸಿಗುತ್ತಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ (200+200) ಒಟ್ಟು ನಾನೂರು ರೂಪಾಯಿ ಕಡಿಮೆಗೆ ಸಿಲಿಂಡರ್ ಲಭ್ಯವಿದೆ. ಈ ಬಗ್ಗೆ ಎಚ್ ಟಿ ಕನ್ನಡ ವೆಬ್ ಸೈಟ್ ನಲ್ಲಿ ಪ್ರಕಟ ಆಗಿರುವ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಆದರೆ, ವೈರಲ್ ಆಗಿರುವ ಸುದ್ದಿಯಲ್ಲಿ ತಿಳಿಸಿರುವಂತೆ ರೇಷನ್ ಕಾರ್ಡ್ ಒಂದಿದ್ದರೆ ಸಾಕು ಗ್ಯಾಸ್ ಸಿಲಿಂಡರ್ ಗೆ ಹಣ ಕೊಡುವ ಅವಶ್ಯಕತೆಯೇ ಇಲ್ಲ ಎಂಬ ಪರಿಸ್ಥಿತಿ ದೇಶದ ಯಾವ ರಾಜ್ಯದಲ್ಲೂ ಇಲ್ಲ. ಇನ್ನು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಆಯಾ ರಾಜ್ಯದ ವ್ಯಾಪ್ತಿಯಲ್ಲಿ ಕೆಲವು ಘೋಷಣೆಗಳನ್ನು ಮಾಡಿವೆ. ಅದು ಕೂಡ ಆಯಾ ರಾಜ್ಯ ಸರ್ಕಾರಗಳು ನೀಡುವಂಥ ಸಬ್ಸಿಡಿ ಹಣವೇ ಹೊರತು, ಪೂರ್ತಿಯಾಗಿ ಉಚಿತ ಎಂಬುದು ಎಲ್ಲೂ ಇಲ್ಲ.
ಅದೇ ರೀತಿ ರಾಜಸ್ಥಾನದಂಥ ರಾಜ್ಯದಲ್ಲಿ ಮಾಡಿರುವ ಘೋಷಣೆ ಉಜ್ವಲ ಫಲಾನುಭವಿಗಳಿಗೆ ವಿನಾ ಎಲ್ಲರಿಗೂ ಅಲ್ಲ. ಚುನಾವಣೆ ಭರವಸೆಗಳು ಆ ಪಕ್ಷದ ಗೆಲುವು ಮತ್ತು ಅದೇ ಪಕ್ಷ ಸರ್ಕಾರ ರಚಿಸಿದರೆ ಮತ್ತು ಆ ನಂತರದಲ್ಲಿ ಯೋಜನೆ ಜಾರಿಗೆ ತಂದಲ್ಲಿ ಮಾತ್ರ ಅನ್ವಯ ಆಗುತ್ತದೆ. ಉದಾಹರಣೆಗೆ, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಐನೂರು ರೂಪಾಯಿಗೆ ಇಳಿಸುವುದಾಗಿ ಭರವಸೆ ನೀಡಿದೆ.
ಸುದ್ದಿಯಲ್ಲಿ ಗೋವಾ ಸರ್ಕಾರದ ಪ್ರಸ್ತಾವ ಮಾಡಲಾಗಿದೆ. ಅದರ ಪ್ರಕಾರ, ಗೋವಾ ಸರ್ಕಾರವು ಕೂಡ ಇದನ್ನ ಘೋಷಣೆ ಮಾಡಿದೆ. ಒಟ್ಟಿನಲ್ಲಿ 14.2 Kg ಗ್ಯಾಸ್ ಲೀಡರ್ ಬೆಲೆ 902ರೂ. ಇದೆ, ಕೇಂದ್ರದಿಂದ 200ರೂ. ಸಬ್ಸಿಡಿ ಘೋಷಿಸಿರುವುದರಿಂದ ಅಲ್ಲಿನ ರಾಜ್ಯ ಸರ್ಕಾರವು 275 ಇಳಿಸುವುದಾಗಿ ಹೇಳಿದೆ. ಹಾಗಾಗಿ 428 ರೂ. ಗೆ ಅವರು ಗ್ಯಾಸ್ ಸಿಲಿಂಡರ್ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ. ಇದು ಅಂತ್ಯೋದಯ ಅನ್ನ ಯೋಜನಾ ರೇಷನ್ ಕಾರ್ಡ್ ಹೊಂದಿರುವ ಹನ್ನೊಂದು ಸಾವಿರಕ್ಕಿಂತ ಸ್ವಲ್ಪ ಹೆಚ್ಚಿನ ಮಂದಿಗೆ (ಗೋವಾದಲ್ಲಿ ಇರುವಂಥವರು) ಇದು ಅನ್ವಯ ಆಗಲಿದೆ. ಈ ಬಗ್ಗೆ ಎಎನ್ ಐ ನ್ಯೂಸ್ ಸುದ್ದಿ ಸಂಸ್ಥೆ ಪ್ರಕಟಿಸಿರುವ ಸುದ್ದಿ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ. ಸದ್ಯಕ್ಕಂತೂ ಕರ್ನಾಟಕ ರಾಜ್ಯದಲ್ಲಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಒಟ್ಟು ನಾನೂರು ರೂಪಾಯಿ ಕಡಿಮೆ ಬೆಲೆಗೆ ಸಿಗುತ್ತದೆ.
Conclusion
ರೇಷನ್ ಕಾರ್ಡ್ ಇದ್ದಲ್ಲಿ ಗ್ಯಾಸ್ ಸಿಲಿಂಡರ್ ಗೆ ಹಣ ಕೊಡುವ ಅವಶ್ಯಕತೆಯೇ ಇಲ್ಲ ಎಂಬುದು ಸುಳ್ಳು ಸುದ್ದಿ. ಚುನಾವಣೆ ಭರವಸೆಗಳು ಈಡೇರಿಸಿದಲ್ಲಿ ಬಡವರಿಗಾಗಿ ಇರುವಂಥ ಯೋಜನೆಗಳ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಆಗುತ್ತದೆಯೇ ವಿನಾ ಹಣ ಕೊಡುವ ಅವಶ್ಯಕತೆ ಇಲ್ಲ ಎಂಬುದು ಸುಳ್ಳು.