ಹೈದರಾಬಾದ್: ಸೌಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಂತೋಷ್ ರಾವ್ ಈ ಪ್ರಕರಣದ ಪ್ರಮುಖ ಸಾಕ್ಷಿ- ಹೀಗೊಂದು ಹೆಡ್ಡಿಂಗ್ ನಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಬಗ್ಗೆ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಅವರನ್ನು ಮಾತನಾಡಿಸಿದ ವಿಡಿಯೋದಲ್ಲಿ ತಮ್ಮ ಅಭಿಪ್ರಾಯವನ್ನು ಅವರು ಹೇಳಿದ್ದಾರೆ. ಇದಕ್ಕೆ ಯಾವುದೇ ಅಧಿಕೃತ ಮಾನ್ಯತೆ ಇಲ್ಲ. ಇನ್ನು ಈ ರೀತಿಯ ಹೆಡ್ಡಿಂಗ್ ನೀಡುವ ಮೂಲಕ ಓದುಗರನ್ನು ದಾರಿ ತಪ್ಪಿಸಲಾಗಿದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
ಈ ವಿಡಿಯೋ ಸುದ್ದಿಯ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.
Factcheck
ಪತ್ರಿಕೋದ್ಯಮದ ಪ್ರಾಥಮಿಕ ಪಾಠಗಳನ್ನು ಪಾಲಿಸದೆ ಹೀಗೊಂದು ಸುದ್ದಿ ಮಾಡಲಾಗಿದೆ. ಸೌಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಂತೋಷ್ ರಾವ್ ಈ ಪ್ರಕರಣದ ಪ್ರಮುಖ ಸಾಕ್ಷಿ ಎಂದು ಹೇಳಿರುವುದು ಗಿರೀಶ್ ಮಟ್ಟಣ್ಣನವರ್. ಸರಿ, ಆತನಿಗೂ ಈ ಪ್ರಕರಣಕ್ಕೂ ಏನು ಸಂಬಂಧ? ಅವರು ಈ ಪ್ರಕರಣದ ಎಫ್ ಐಆರ್, ಚಾರ್ಜ್ ಶೀಟ್, ಆರೋಪಿ ಸ್ಥಾನದಲ್ಲಿ ಇದ್ದ ಸಂತೋಷ್ ರಾವ್ ಅವರ ವೈದ್ಯಕೀಯ ವರದಿ ಇಂಥದ್ದನ್ನು ಓದಿದ್ದಾರೆ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳನ್ನು ಮಾತನಾಡಿಸಿದ್ದಾರೆ. ಹೀಗಂತ ಸ್ವತಃ ಗಿರೀಶ್ ಮಟ್ಟಣ್ಣನವರ್ ಹೇಳಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಓದಿದ ಮೇಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ತೋಚಿದ್ದನ್ನು ಹಾಗೂ ಊಹಿಸಿದ್ದನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಹೀಗೆ ಮಾಡಿದ ವಿಡಿಯೋದ ಹೆಡ್ಡಿಂಗ್ ನಲ್ಲಿ ಗಿರೀಶ್ ಮಟ್ಟಣನವರ್ ಅಭಿಪ್ರಾಯ ಎಂದು ಬರೆಯಬೇಕಿತ್ತು. ಆದರೆ ಅದನ್ನು ಮಾಡಿಲ್ಲ. ಪ್ರಕರಣಕ್ಕೆ ಟ್ವಿಸ್ಟ್ ಅಥವಾ ತಿರುವು ಬರುವುದು ನ್ಯಾಯಾಲಯದಲ್ಲಿ ನಡೆಯುವಂಥ ಬೆಳವಣಿಗೆಗಳಿಂದಲೇ ವಿನಾ ಯಾವುದೇ ಒಬ್ಬ ವ್ಯಕ್ತಿಯ ಸ್ವಂತ ಅಭಿಪ್ರಾಯದಿಂದ ಅಲ್ಲ. ಅದರಲ್ಲೂ ಈ ಪ್ರಕರಣದ ವಿಚಾರದಲ್ಲಿ ಹೇಗೂ ಸಂಬಂಧಪಡದ, ತನಿಖೆಯ ಯಾವುದೇ ಹಂತದಲ್ಲೂ ಒಳಗೊಳ್ಳದ ಹಾಗೂ ಈಗ ಪೊಲೀಸ್ ಅಧಿಕಾರಿಯೇ ಅಲ್ಲದ ವ್ಯಕ್ತಿ ಅಭಿಪ್ರಾಯವನ್ನು ತೆಗೆದುಕೊಂಡು, ಹೀಗೆ ಹೆಡ್ಡಿಂಗ್ ಕೊಡುವುದು ಮಾಧ್ಯಮದ ಮೂಲ ತತ್ವಕ್ಕೆ ವಿರುದ್ಧವಾದದ್ದು.
ಇನ್ನು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸೌಜನ್ಯಾ ಪ್ರಕರಣದ ಆರೋಪಿ ಸಂತೋಷ್ ರಾವ್ ನಿರಪರಾಧಿ ಎಂದು ಖುಲಾಸೆ ಮಾಡಲಾಗಿದೆ. ಆ ನಂತರ ಪ್ರಕರಣದ ಮರು ತನಿಖೆಗೆ ಮನವಿ ಮಾಡಲಾಗುವುದು ಹಾಗೂ ಈ ಬಗ್ಗೆ ಏನೇನು ಕ್ರಮ ತೆಗೆದುಕೊಳ್ಳಬಹುದು ಅದನ್ನು ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.
ಅಲ್ಲಿಗೆ ಸೌಜನ್ಯಾ ಪ್ರಕರಣ ಮುಂದಿನ ಹಂತದ ನ್ಯಾಯಾಂಗ ಹೋರಾಟ ಹೇಗಿರಬಹುದು ಎಂದು ರಾಜ್ಯ ಸರ್ಕಾರ ನಿರ್ಧಾರ ಮಾಡಬೇಕಾಗುತ್ತದೆ. ಉಳಿದಂತೆ ಯಾವುದೇ ವ್ಯಕ್ತಿ, ಮಾಧ್ಯಮಗಳು ತಮ್ಮ ಮೂಗಿನ ನೇರಕ್ಕೆ ತರ್ಕವನ್ನು ಕಟ್ಟುತ್ತಾ ಹೋಗಬಹುದು. ಅದಕ್ಕೆ ನ್ಯಾಯಾಲದ ದೃಷ್ಟಿಯಿಂದ ಯಾವ ಮಾನ್ಯತೆಯೂ ಇಲ್ಲ.
Conclusion
ಸೌಜನ್ಯಾ ಅತ್ಯಾಚಾರ- ಹತ್ಯೆ ಪ್ರಕರಣದಲ್ಲಿ ಸಂತೋಷ್ ರಾವ್ ಸಾಕ್ಷಿ ಎಂಬುದು ಗಿರೀಶ್ ಮಟ್ಟಣ್ಣನವರ್ ಸ್ವಂತ ಅಭಿಪ್ರಾಯ. ಇದು ಅವರ ಊಹೆ. ಇದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ನ್ಯಾಯಾಂಗವು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಡಿಯೋ ಸುದ್ದಿ ಮೂಲಕ ಜನರ ತಪ್ಪಿಸುವ ಪ್ರಯತ್ನ ಇದಾಗಿದೆ.