ಹೈದರಾಬಾದ್: ಇಷ್ಟು ಜನರು ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಕಟ್ಟಲೇಬೇಕು, ಗೃಹಜ್ಯೋತಿ ಯೋಜನೆಯ ಲಾಭ ಇಂತಹವರಿಗೆ ನೀಡಲು ಆಗುವುದಿಲ್ಲ, ಸರ್ಕಾರದ ಹೊಸ ನಿಯಮ - ಹೀಗೊಂದು ಶೀರ್ಷಿಕೆ ನೀಡಿ, ಸುದ್ದಿಯೊಂದನ್ನು ಪ್ರಕಟಿಸಲಾಗಿದೆ. ಜತೆಗೆ ಥಂಬ್ ನೇಲ್ ನಲ್ಲಿ ಸಾರ್ವಜನಿಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಪ್ರತಿ ಮನೆಗೆ ಇನ್ನೂರು ಯೂನಿಟ್ ವಿದ್ಯುತ್ ಇಂಥ ಜನರಿಗೆ ಉಚಿತ ವಿದ್ಯುತ್ ಸಿಗಲ್ ಬಿಲ್ ಕಟ್ಟಲೇಬೇಕು ಸರ್ಕಾರದಿಂದ ಬಂತು ಹೊಸ ಆದೇಶ- ಹೀಗಿದ್ದು, ಜುಲೈ 30, 2023ರಂದು ಸುದ್ದಿ ಪ್ರಕಟವಾಗಿದ್ದು, ಇದು ವೈರಲ್ ಕೂಡ ಆಗಿದೆ. ಆದರೆ ಈ ಸುದ್ದಿಯಲ್ಲಿ ಇರುವಂಥ ಮಾಹಿತಿ ಅಪೂರ್ಣವಾಗಿ, ಜನರ ದಿಕ್ಕು ತಪ್ಪಿಸುವಂತಿದೆ ಹಾಗೂ ತಪ್ಪಾಗಿದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ. ಇನ್ನು ಸರ್ಕಾರದಿಂದಲೂ ಈ ಯೋಜನೆಗೆ ಸಂಬಂಧಿಸಿದಂತೆ ಹಾಗೂ ಈ ಸುದ್ದಿಯಲ್ಲಿ ಇರುವಂತೆ ಯಾವುದೇ ಹೊಸ ಆದೇಶ ಬಂದಿಲ್ಲ.
ಈ ಬಗ್ಗೆ ಪ್ರಕಟ ಆಗಿರುವ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Factcheck
ಇನ್ನೂರು ಯೂನಿಟ್ ತನಕ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಆಗಸ್ಟ್ ತಿಂಗಳಲ್ಲಿ ಜಾರಿಗೆ ತರುವುದಾಗಿ ತಿಳಿಸಲಾಗಿತ್ತು. ಇನ್ನು ಇದಕ್ಕಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಜುಲೈ 25, 2023 ಕೊನೆ ದಿನಾಂಕ ಎನ್ನಲಾಗಿತ್ತು. ಅಂದರೆ ಯಾರು ಯೋಜನೆ ಫಲಾನುಭವಿಗಳಾಗಲು ಅರ್ಹರಿರುತ್ತಾರೋ ಜುಲೈ 25ರೊಳಗಾಗಿ ಅರ್ಜಿ ಹಾಕಿಕೊಂಡಿರುತ್ತಾರೋ ಅಂಥವರಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ನೀಡುವಾಗ ಯೋಜನೆಯ ವಿನಾಯಿತಿ ಅನ್ವಯ ಆಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಈ ಮೇಲ್ಕಂಡ ಸುದ್ದಿಯಲ್ಲಿ ಆಗಸ್ಟ್ ಇಂದಲೇ ಉಚಿತ ವಿದ್ಯುತ್ ಪಡೆಯಲು ಜುಲೈ 27ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸೂಚನೆಯನ್ನು ನೀಡಲಾಗಿತ್ತು ಎಂದಿದೆ, ಅದು ತಪ್ಪು. ಕೊನೆ ದಿನಾಂಕ ಜುಲೈ 25 ಆಗಿತ್ತು.
ಗೃಹ ಜೊತೆ ಯೋಜನೆ ಇನ್ನೂ ಜಾರಿ ಆಗದೆ ಇರುವ ಕಾರಣದಿಂದಾಗಿ ನೀವು ಜುಲೈ ತಿಂಗಳ ವಿದ್ಯುತ್ ಬಿಲ್ಲನ್ನು ಕಟ್ಟಬೇಕಾಗುತ್ತದೆ ಈಗಾಗಲೇ ಅರ್ಜಿ ಸಲ್ಲಿಸಿರುವಂತಹ ಜನರಿಗೆ ಆಗಸ್ಟ್ ನಿಂದ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು 200 ಯೂನಿಟ್ ಗಳವರೆಗೆ ನೀವು ಉಚಿತ ವಿದ್ಯತ್ ಅನ್ನು ಪಡೆದುಕೊಳ್ಳಬಹುದಾಗಿದೆ. - ಹೀಗೆ ಸುದ್ದಿಯಲ್ಲಿ ಹೇಳಲಾಗಿದೆ. ಗೃಹ ಜ್ಯೋತಿ ಯೋಜನೆ ಆಗಸ್ಟ್ ತಿಂಗಳಿಂದ ಜಾರಿ ಆಗುತ್ತದೆ. ಅರ್ಹ ಫಲಾನುಭವಿಗಳು ಜುಲೈ ತಿಂಗಳ ವಿದ್ಯುತ್ ಬಳಕೆಗೆ ಬಿಲ್ ಕಟ್ಟಬೇಕಿರುವುದಿಲ್ಲ.
ಜನರು ಜುಲೈನಿಂದಲೇ ಎಲೆಕ್ಟ್ರಿಸಿಟಿ ಬಿಲ್ ಕಡಿಮೆ ಬರಬಹುದು ಎಂದು ನಿರೀಕ್ಷೆ ಹೊಂದಿದ್ದರು ಆದರೆ ಬಿಲ್ ಜಾಸ್ತಿಯೇ ಬಂದಿದೆ ಇದರಿಂದ ಜನರಿಗೆ ಅಪ್ಲಿಕೇಶನ್ ನಲ್ಲಿ ಏನಾದರೂ ಸಮಸ್ಯೆ ಆಗಿದೆ ಎಂದು ಆತಂಕ ಶುರುವಾಗಿದೆ. -ಸುದ್ದಿಯಲ್ಲಿ ಹೀಗೂ ಒಂದು ವಾಕ್ಯ ಇದೆ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲು ಆರಂಭಿಸಿದ್ದು ಜೂನ್ 18, 2023ರಿಂದ ಹಾಗೂ ಕೊನೆ ದಿನಾಂಕ ಅಂತ ಇದ್ದದ್ದು ಜುಲೈ 25. ಇನ್ನು ಅರ್ಜಿ ಆಹ್ವಾನಕ್ಕೂ ಮುಂಚಿತವಾಗಿಯೇ ಯೋಜನೆಯು ಜುಲೈ ತಿಂಗಳಲ್ಲಿ ಬಳಕೆ ಆದ ವಿದ್ಯುತ್ ನ ಬಿಲ್ ಗೆ ಅನ್ವಯ ಎಂದು, ಆಗಸ್ಟ್ ತಿಂಗಳಲ್ಲಿ ಯೋಜನೆ ಜಾರಿ ಅಂತಲೂ ಸರ್ಕಾರದಿಂದ ಮಾಹಿತಿ ನೀಡಲಾಗಿತ್ತು. ಇಷ್ಟಾದ ಮೇಲೆ, ವೈರಲ್ ಆಗಿರುವ ಸುದ್ದಿಯಲ್ಲಿ, ಜುಲೈನಿಂದಲೇ ಎಲೆಕ್ಟ್ರಿಸಿಟಿ ಬಿಲ್ ಕಡಿಮೆ ಬರಬಹುದು ಎಂದು ನಿರೀಕ್ಷೆ ಹೊಂದಿದ್ದರು ಆದರೆ ಬಿಲ್ ಜಾಸ್ತಿಯೇ ಬಂದಿದೆ ಇದರಿಂದ ಜನರಿಗೆ ಅಪ್ಲಿಕೇಶನ್ ನಲ್ಲಿ ಏನಾದರೂ ಸಮಸ್ಯೆ ಆಗಿದೆ ಎಂದು ಆತಂಕ ಶುರುವಾಗಿದೆ- ಹೀಗೆ ಪಬ್ಲಿಷ್ ಮಾಡಲಾಗಿದೆ. ಆದ್ದರಿಂದ ಇದು ಕೂಡ ತಪ್ಪು ಮಾಹಿತಿ.
ಒಂದು ವೇಳೆ ಜುಲೈ ತಿಂಗಳ ಕೊನೆ ದಿನದಂದು ಈ ಯೋಜನೆಗೆ ಅರ್ಜಿ ಹಾಕಿಕೊಳ್ಳದಿದ್ದಲ್ಲಿ ಆ ನಂತರ ಕೂಡ ಸಲ್ಲಿಕೆ ಮಾಡಬಹುದು. ಆದರೆ ಯೋಜನೆಯ ಲಾಭ ಸಿಗುವುದು ಅರ್ಜಿ ಹಾಕಿಕೊಳ್ಳುವ ಸಮಯದ ಆಧಾರದಲ್ಲಿ ಮುಂದಕ್ಕೆ ಹೋಗುತ್ತದೆ.
Conclusion
ಯಾರು, ಅರ್ಹ ಫಲಾನುಭವಿಗಳಿರುತ್ತಾರೋ ಅವರು ನಿಗದಿತ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಿರುವುದಿಲ್ಲವೋ ಅಂಥವರಿಗೆ ಆಗಸ್ಟ್ ನಲ್ಲಿ ಯೋಜನೆಯ ಲಾಭ ಸಿಗುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯೇ ಆಗಿತ್ತು. ಇದೇನೋ ಸರ್ಕಾರ ಹೊಸ ನಿಯಮ ಮಾಡಿದೆ ಅಂತ ಶೀರ್ಷಿಕೆ ಕೊಟ್ಟು, ಜನರ ದಿಕ್ಕು ತಪ್ಪಿಸುವಂಥ ಪ್ರಯತ್ನ ಮಾಡಲಾಗಿದೆ.