Fact Check: ಶಾಲೆ ತಲುಪಲು ಮಕ್ಕಳು ಕೇಬಲ್ ಟ್ರಾಲಿಯಲ್ಲಿ ನದಿ ದಾಟುತ್ತಿರುವ ವೀಡಿಯೊ ಭಾರತದ್ದಲ್ಲ
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕೆಲವು ಮಕ್ಕಳು ಕೇಬಲ್ ಟ್ರಾಲಿಯಲ್ಲಿ ಕುಳಿತು ನದಿಯನ್ನು ದಾಟುತ್ತಿರುವುದನ್ನು ಕಾಣಬಹುದು.
By Vinay Bhat Published on 1 Aug 2024 11:28 AM GMTClaim: ಭಾರತದಲ್ಲಿ ಮಕ್ಕಳು ಕೇಬಲ್ ಟ್ರಾಲಿಯ ಸಹಾಯದಿಂದ ಅಪಾಯಕಾರಿಯಾದ ನದಿ ದಾಟಿ ಶಾಲೆಗೆ ತೆರಳುತ್ತಿದ್ದಾರೆ.
Fact: ಈ ವೈರಲ್ ಆಗುತ್ತಿರುವ ವೀಡಿಯೊ ಭಾರತದದ್ದಲ್ಲ. ಇದು ನೇಪಾಳದ ಕುಂಪುರ್ ಗ್ರಾಮದ್ದಾಗಿದೆ.
ಜುಲೈ 22 ರಂದು ಶ್ರಾವಣ ಮಾಸದಂದು ಪ್ರಾರಂಭವಾದ ಕನ್ವರ್ ಯಾತ್ರೆಯಲ್ಲಿ ಕನ್ವರಿಯರಿಗೆ ಮಾರ್ಗ ಮಧ್ಯದಲ್ಲಿ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಜೊತೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಕೂಡ ಮಾಡಿದೆ. ಹೀಗಿರುವಾಗ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಕೆಲವು ಮಕ್ಕಳು ಎತ್ತರದಲ್ಲಿ ಅಳವಡಿಸಲಾದ ಕೇಬಲ್ ಟ್ರಾಲಿಯಲ್ಲಿ ಕುಳಿತು ನದಿಯನ್ನು ದಾಟುತ್ತಿರುವುದನ್ನು ಕಾಣಬಹುದು. ಈ ಮಕ್ಕಳು ನೀಲಿ ಸಮವಸ್ತ್ರವನ್ನು ಧರಿಸಿ, ಭುಜದ ಮೇಲೆ ಬ್ಯಾಗ್ ಹಾಕಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಮಕ್ಕಳು ಶಾಲೆಗೆ ಹೋಗುತ್ತಿರುವಂತೆ ಕಾಣುತ್ತಿದೆ.
ಜುಲೈ 28, 2024 ರಂದು ಧ್ರುವ್ ರಾತೇ ಫ್ಯಾನ್ಸ್ ಕ್ಲಬ್ ಎಂಬ ಎಕ್ಸ್ ಖಾತೆಯಿಂದ ಈ ವೀಡಿಯೊ ಅಪ್ಲೋಡ್ ಆಗಿದೆ. ಇದರಲ್ಲಿ ''ಕಾವಾಡ ಯಾತ್ರೆಗೆ ಸರ್ಕಾರ ಎಷ್ಟು ಪ್ರಯತ್ನ ಪಟ್ಟಿದೆಯೋ ಅಷ್ಟೇ ಪ್ರಯತ್ನ ಈ ಶಾಲೆಗೆ ಹೋಗುವ ಮಕ್ಕಳ ಹಾದಿಯತ್ತಲೂ ಗಮನ ಹರಿಸಿದ್ದರೆ,'' ಎಂದು ಬರೆದುಕೊಂಡಿದ್ದಾರೆ.
सरकार ने जितनी ताकत कावड़ यात्रा पर लगाई है काश कि थोड़ा सा ध्यान इन स्कूल जाते बच्चों के रास्ते के लिए भी दे देते।, pic.twitter.com/O6imGZwgwj
— Dhruv Rathee Satire (@DhruvRatheFc) July 28, 2024
ಹಾಗೆಯೆ ಕಮಲೇಶ್ ಕುಶ್ವಾಲ ಎಂಬ ಎಕ್ಸ್ ಬಳಕೆದಾರರು ಕೂಡ ಇದೇ ಬರಹದೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೊಗೆ ಅತಿಹೆಚ್ಚು ಪ್ರತಿಕ್ರಿಯೆಗಳು ಬಂದಿದ್ದು, ಅನೇಕ ಜನರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳಿಗೆ ಮತದಾನ ಮಾಡಲು ಸಾಧ್ಯವಿಲ್ಲ, ಹೀಗಾಗಿ ಸರ್ಕಾರವು ಅವರ ಪರವಾಗಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಅಸಲಿಗೆ ಈ ವೈರಲ್ ಆಗುತ್ತಿರುವ ವೀಡಿಯೊ ಭಾರತದದ್ದಲ್ಲ. ಇದು ನೇಪಾಳದ ಕುಂಪುರ್ ಗ್ರಾಮದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆದರೆ ಇಲ್ಲಿ ಈ ವೀಡಿಯೊಕ್ಕೆ ಸಂಬಂಧ ಪಟ್ಟ ಖಚಿತ ಮಾಹಿತಿ ಸಿಗಲಿಲ್ಲ.
ಈ ವೈರಲ್ ವೀಡಿಯೊದ ಮೇಲಿನ ಬಲಭಾಗದಲ್ಲಿ "@ಫ್ರೀಡಾಕ್ಯುಮೆಂಟರಿ" ಎಂದು ಬರೆಯಲಾಗಿದೆ, ಈ ವಾಟರ್ಮಾರ್ಕ್ ಬಳಸಿಕೊಂಡು, ನಾವು ಫೇಸ್‌ಬುಕ್ ಖಾತೆಯಲ್ಲಿ ಸರ್ಚ್ ಮಾಡಿದೆವು. ಆಗ ಮೇ 1, 2024 ರಂದು ಫ್ರೀ ಡಾಕ್ಯುಮೆಂಟರಿ ಖಾತೆಯಿಂದ ಪೋಸ್ಟ್ ಮಾಡಲಾದ 59 ಸೆಕೆಂಡ್ಗಳ ಇದೇ ವೀಡಿಯೊ ಕಂಡುಬಂತು. ''ನೇಪಾಳದ ಅಪಾಯಕಾರಿ ಮಾರ್ಗದಲ್ಲಿ ಶಾಲೆಗೆ ಹೋಗುವ ಮಕ್ಕಳು,'' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.
ಇದೇ ಶೀರ್ಷಿಕೆಯನ್ನು ನಾವು ಗೂಗಲ್ನಲ್ಲಿ ಸರ್ಚ್ ಮಾಡಿದೆವು. ಆಗ ಸೆಪ್ಟೆಂಬರ್ 6, 2015 ರಲ್ಲಿ ಇದೇ ಫ್ರೀ ಡಾಕ್ಯುಮೆಂಟರಿ ಯೂಟ್ಯೂಬ್ ಚಾನೆಲ್ನಲ್ಲಿ ಈ ಕುರಿತ ದೀರ್ಘ ವೀಡಿಯೊ ಆವೃತ್ತಿಯನ್ನು ಕಂಡುಕೊಂಡಿದ್ದೇವೆ. ಇದು ಸುಮಾರು ಒಂದು ಗಂಟೆಯಷ್ಟು ದೀರ್ಘವಾಗಿದೆ. 23 ನಿಮಿಷ 05 ಸೆಕೆಂಡ್ಗಳಲ್ಲಿ ಸದ್ಯ ವೈರಲ್ ಆಗುತ್ತಿರುವ ಕ್ಲಿಪ್ನ ಭಾಗವನ್ನು ಕಾಣಬಹುದು.
ವೀಡಿಯೊದ ಜೊತೆಗೆ ನೀಡಿರುವ ಮಾಹಿತಿಯ ಪ್ರಕಾರ, ಈ ವೀಡಿಯೊ ನೇಪಾಳದ ಕುಂಪುರ್ ಗ್ರಾಮದ್ದಾಗಿದೆ. ಇದು ನೇಪಾಳದ ಬಾಗ್ಮತಿ ಪ್ರಾಂತ್ಯದಲ್ಲಿದೆ. ಈ ಸಾಕ್ಷ್ಯಚಿತ್ರವನ್ನು 'ಜೋಕಿಮ್ ಫೊರ್ಸ್ಟರ್' ಎಂಬವರು ನಿರ್ಮಿಸಿದ್ದಾರೆ. ವೀಡಿಯೊದಲ್ಲಿ ಕಂಡುಬರುವ ಮಕ್ಕಳು ತಮ್ಮ ಹಳ್ಳಿಯಿಂದ 'ಶ್ರೀ ಆದರ್ಶ ಶಾಲೆಗೆ' ಹೋಗುತ್ತಿದ್ದಾರೆ. ತಮ್ಮ ಶಾಲೆಗೆ ತಲುಪಲು ಅವರು ತ್ರಿಶೂಲಿ ನದಿಯನ್ನು ಕೇಬಲ್ ಟ್ರಾಲಿಯ ಸಹಾಯದಿಂದ ಕಾಡುಗಳ ಮೂಲಕ ಕಷ್ಟದ ಮಾರ್ಗಗಳಲ್ಲಿ ನಡೆದುಕೊಂಡು ಹೋಗಬೇಕು. ಈ ವೀಡಿಯೊದಲ್ಲಿ, ಗ್ರಾಮದ ಮಕ್ಕಳು ಮತ್ತು ಅವರ ಕುಟುಂಬ ಸದಸ್ಯರನ್ನು ಕೂಡ ಸಂದರ್ಶಿಸಲಾಗಿದೆ.
ಹೀಗಾಗಿ ಮಕ್ಕಳು ಕೇಬಲ್ ಟ್ರಾಲಿಯಲ್ಲಿ ನದಿ ದಾಟಿ ಶಾಲೆಗೆ ಹೋಗುತ್ತಿರುವ ವೈರಲ್ ವೀಡಿಯೊ ಭಾರತದ್ದಲ್ಲ. ಬದಲಿಗೆ ನೇಪಾಳದ ಕುಂಪುರ್ ಗ್ರಾಮದ ವೀಡಿಯೊ ಆಗಿದೆ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.