ಶೃಂಗೇರಿ ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿ, ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂಬುದು ಸುಳ್ಳು ಸುದ್ದಿ

ಶಂಗೇರಿ ಮಠದ ಪೀಠಾಧಿಪತಿಗಳಾದ ಭಾರತೀ ತೀರ್ಥ ಸ್ವಾಮೀಜಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂದು ವೈರಲ್ ಆಗಿರುವ ಪೋಸ್ಟ್ ಸುಳ್ಳು ಸುದ್ದಿ. ಅದರಲ್ಲಿರುವ ಎಲ್ಲ ಮಾಹಿತಿ ಸುಳ್ಳಾಗಿದೆ.

By Srinivasa Mata  Published on  29 Sep 2023 5:02 PM GMT
ಶೃಂಗೇರಿ ಮಠದ ಪೀಠಾಧಿಪತಿಗಳು ರಾಹುಲ್ ಗಾಂಧಿ, ಸಿದ್ದರಾಮಯ್ಯನವರಿಗೆ ಆಶೀರ್ವಾದ ಮಾಡಲು ನಿರಾಕರಿಸಿದರು ಎಂಬುದು ಸುಳ್ಳು ಸುದ್ದಿ

ಹೈದರಾಬಾದ್: ಶೃಂಗೇರಿ ಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯರು ರಾಹುಲ್ ಮತ್ತು ಸಿದ್ದರಾಮಯ್ಯ (ಕರ್ನಾಟಕ ಸಿಎಂ) ಆಶೀರ್ವಾದ ಮಾಡಲು ನಿರಾಕರಿಸಿದರು. -ಈ ಸಾಲಿನಿಂದ ಆರಂಭವಾಗುವ ಫೇಸ್ ಬುಕ್ ಪೋಸ್ಟ್ ವೊಂದು ವೈರಲ್ ಆಗಿದೆ. ಈ ಫೇಸ್ ಬುಕ್ ಪೋಸ್ಟ್ ನಲ್ಲಿರುವ ಪೂರ್ಣ ವಿವರ ಹೀಗಿದೆ: *ಶೃಂಗೇರಿ ಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯರು ರಾಹುಲ್ ಮತ್ತು ಸಿದ್ದರಾಮಯ್ಯ (ಕರ್ನಾಟಕ ಸಿಎಂ) ಆಶೀರ್ವಾದ ಮಾಡಲು ನಿರಾಕರಿಸಿದರು.*

*ಜಗದ್ಗುರುಗಳು ಅವರಿಗೆ ಹೇಳಿದರು "ನೀವು ಮಠಕ್ಕೆ ಬಂದಿದ್ದೀರಿ, ಧನ್ಯವಾದಗಳು. ಆದರೆ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲ, ನಾವು ನಿಮ್ಮನ್ನು ಆಶೀರ್ವದಿಸಲು ಸಾಧ್ಯವಿಲ್ಲ".*

*ಸಭೆಯಲ್ಲಿ ಜಗದ್ಗುರುಗಳು ರಾಹುಲ್ ಮತ್ತು ಸಿದ್ದರಾಮಯ್ಯ ಅವರಿಗೆ ಹಿಂದೂ ಧರ್ಮದ ಬಗ್ಗೆ ಅಸಹಿಷ್ಣುತೆ ಇದ್ದರೆ, ನಿಮ್ಮ ಕಾರ್ಯಗಳಿಂದ ಹಿಂದೂ ಧರ್ಮದಲ್ಲಿ ಅಸಂಗತತೆಯನ್ನು ಉಂಟುಮಾಡುವ ಬದಲು ದಯವಿಟ್ಟು ಹಿಂದೂ ಧರ್ಮದಿಂದ ದೂರವಿರಿ ಎಂದು ಹೇಳಿದರು. ಹಿಂದೂ ಮಠ, ಮಂದಿರಗಳ ನಿರ್ವಹಣೆಯನ್ನು ಸರಕಾರ ವಹಿಸಿಕೊಂಡಿದೆ. ಅಷ್ಟೇ ಅಲ್ಲ ಹುಂಡಿಯ ರೂಪದಲ್ಲಿ ಬರುವ ಹಣ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ಬಳಕೆಯಾಗುತ್ತಿಲ್ಲ, ಅದೇ ಹಣವನ್ನು ಅನ್ಯ ಧರ್ಮದವರ ಕಲ್ಯಾಣಕ್ಕೆ ವಿನಿಯೋಗಿಸುತ್ತಿರುವುದು ಒಪ್ಪತಕ್ಕದ್ದಲ್ಲ.* *ನೀವು ನಮ್ಮ ಮಠಕ್ಕೆ ಬರುವುದು ಒಳ್ಳೆಯದು. ಆದರೆ ನೀವು ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ರೀತಿಗೆ ನಾವು ನಿಮಗೆ ಆಶೀರ್ವಾದ ನೀಡಲು ಸಾಧ್ಯವಿಲ್ಲ. ಜಗದ್ಗುರುಗಳು ಇಬ್ಬರಿಗೂ ನೇರವಾಗಿ ಹೇಳಿದರು.*

*ರಾಜಕಾರಣಿಗಳಾದ ರಾಹುಲ್ ಮತ್ತು ಸಿದ್ದರಾಮಯ್ಯ ಇಬ್ಬರೂ ಜಗದ್ಗುರುಗಳಿಂದ ಇಂತಹ ತೀಕ್ಷ್ಣವಾದ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ಇಬ್ಬರೂ ತುಂಬಾ ತಡಬಡಾಯಿಸಿ ಸಭೆಯಿಂದ ಹೊರಬಂದ ನಂತರ ಜಗದ್ಗುರುಗಳ ಪ್ರತಿಕ್ರಿಯೆ ಮಾಧ್ಯಮಗಳಿಗೆ ಬರದಂತೆ ತಡೆಯುವುದು ಹೇಗೆ ಎಂಬ ಚರ್ಚೆ ಶುರುವಾಯಿತು. ಮಠಕ್ಕೆ ಸಂಬಂಧಿಸಿದ ಎಲ್ಲಾ ಭಕ್ತರು ಮತ್ತು ಸಿಬ್ಬಂದಿಗಳು ಜಗದ್ಗುರುಗಳ ಪ್ರತಿಕ್ರಿಯೆಯನ್ನು ಕೇಳಿ ಸಂತೋಷಪಟ್ಟರು ಮತ್ತು ವಿಳಂಬವಿಲ್ಲದೆ ಪ್ರತಿ ಹಂತದಲ್ಲೂ ಹಂಚಿಕೊಂಡರು.*

*ನಮ್ಮ ಋಷಿಮುನಿಗಳು ಮತ್ತು ಸಂತರು ಹೀಗೆಯೇ ಇರಬೇಕೆಂದು ನಾನು ಬಯಸುತ್ತೇನೆ.*

ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿರುವಂತೆ ಇದು ಸುಳ್ಳು ಸುದ್ದಿ.

Fact Check

ಈಗ ವೈರಲ್ ಆಗಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಬಳಸಿರುವುದು 2018ನೇ ಇಸವಿಯ ಮಾರ್ಚ್ 21ನೇ ತಾರೀಕಿನದು. ಆಗ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ಸಿದ್ದರಾಮಯ್ಯನವರೇ. ಆ ವೇಳೆ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮತ್ತು ಸಿದ್ದರಾಮಯ್ಯ ಅವರು ಶೃಂಗೇರಿಗೆ ಭೇಟಿ ನೀಡಿ, ಶ್ರೀ ಭಾರತೀ ತೀರ್ಥ ಸ್ವಾಮೀಜಿಯಿಂದ ಆಶೀರ್ವಾದ ಪಡೆದಿದ್ದರು.




ಈ ಬಗ್ಗೆ ರಾಜ್ಯದ ಪ್ರಮುಖ ಪತ್ರಿಕೆಯಾದ ವಿಜಯ ಕರ್ನಾಟಕದ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಕಟವಾಗಿತ್ತು. ಅದರ ಶೀರ್ಷಿಕೆ: ಶೃಂಗೇರಿ ಸ್ವಾಮೀಜಿ ಆಶೀರ್ವಾದ ಪಡೆದ ರಾಹುಲ್, ಸಿದ್ದರಾಮಯ್ಯ

ಇನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಇರುವಂತೆ ರಾಹುಲ್ ಗಾಂಧಿ- ಸಿದ್ದರಾಮಯ್ಯ ಅವರು ಭೇಟಿ ನೀಡಿದ ವೇಳೆ ಉಳಿದ ಭಕ್ತರು ಇರಲಿಲ್ಲ. ಆ ನಂತರ ರಾಹುಲ್ ಗಾಂಧಿಯವರ ಜತೆಗೆ ಮಾತ್ರ ಭಾರತೀ ತೀರ್ಥ ಸ್ವಾಮೀಜಿ ಮಾತನಾಡಿದ್ದಾರೆ ಎಂದು ಟಿವಿ9 ಕನ್ನಡ ನ್ಯೂಸ್ ಚಾನೆಲ್ ವರದಿ ಮಾಡಿದೆ ಅದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Conclusion

ಶೃಂಗೇರಿಯ ಭಾರತೀ ತೀರ್ಥ ಸ್ವಾಮಿಗಳು ಆಶೀರ್ವಾದ ಮಾಡುವುದಿಲ್ಲ ಎಂದಿದ್ದಾಗಲೀ ಅಥವಾ ಹಿಂದೂ ದೇವಸ್ಥಾನದ ಹಣ ಅನ್ಯ ಧರ್ಮದವರ ಕಲ್ಯಾಣಕ್ಕೆ ವಿನಿಯೋಗಿಸುತ್ತಿರುವುದು ಒಪ್ಪತಕ್ಕದಲ್ಲ ಎಂದ ಬಗ್ಗೆಯಾಗಲೀ ಯಾವ ಮಾಧ್ಯಮದಲ್ಲೂ ವರದಿ ಆಗಿಲ್ಲ, ಯಾವ ಸೋಷಿಯಲ್ ಮೀಡಿಯಾದಲ್ಲೂ ಆ ವೇಳೆಗೂ ಬಂದಿರಲಿಲ್ಲ. ಜಗದ್ಗುರುಗಳ ಪ್ರತಿಕ್ರಿಯೆಯನ್ನು ಯಾವ ಭಕ್ತರು ಸಹ ಹಂಚಿಕೊಂಡಿಲ್ಲ. ಹೀಗೆ ವೈರಲ್ ಪೋಸ್ಟ್ ನಲ್ಲಿರುವುದು ಯಾವುದು ನಿಜವಲ್ಲ.

Claim Review:Sringeri seer Bharati Teertha Swamiji denied blessings to Rahul Gandhi, CM Siddaramaiah false claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story