ಕರ್ನಾಟಕ, ಕೇರಳ ಸೇರಿದಂತೆ ದೇಶಾದ್ಯಂತ ಭಾರೀ ಮಳೆಯಾಗುತ್ತಿದೆ. ಇದರ ನಡುವೆ ನೀರು ತುಂಬಿರುವ ತರಗತಿಯಲ್ಲಿ ವಿದ್ಯಾರ್ಥಿಗಳು ಈಜಾಡುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಇತ್ತೀಚಿನ ಘಟನೆಯಾಗಿದ್ದು, ಉತ್ತರ ಪ್ರದೇಶದ ಶಾಲೆಗಳ ದುಸ್ಥಿತಿ ಎಂಬ ಪೋಸ್ಟ್ಗಳು ವೈರಲ್ ಆಗುತ್ತಿವೆ. ತರಗತಿ ಕೊಠಡಿಗಳು ನೀರಿನಿಂದ ಮುಳುಗಿವೆ ಮತ್ತು ಮಕ್ಕಳು ಓದುವ ಬದಲು ಈಜಾಡುತ್ತಿದ್ದಾರೆ ಎಂದು ಅನೇಕರು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.
ಜೋಸೆಫ್ ಪುರುಶೋತ್ತಮ್ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಆಗಸ್ಟ್ 2, 2024 ರಂದು ಈ ವೀಡಿಯೊ ಹಂಚಿಕೊಂಡಿದ್ದು, "ಇದು ಕ್ಲಾಸ್ ರೂಂ ಓ, ಸ್ವಿಮ್ಮಿಂಗ್ ಪೂಲ್ ಓ, ಉತ್ತರ ಪ್ರದೇಶದ ಒಂದು ಶಾಲೆ" ಎಂದು ಬರೆದುಕೊಂಡಿದ್ದಾರೆ. ವೀಡಿಯೊದಲ್ಲಿ ಕಂಡುಬರುವಂತೆ ಶಾಲೆಯ ಕೋಣೆಯಲ್ಲಿ ನೀರು ತುಂಬಿದೆ. ಆದರೆ ಮುಳುಗುವಷ್ಟು ನೀರಿಲ್ಲ. ಮಕ್ಕಳು ಇದರಲ್ಲಿ ಮೋಜು ಮಸ್ತಿ ಮಾಡುತ್ತಿರುವುದು ಕಾಣಬಹುದು.
ಮುಕುಲ್ ಅಸ್ತನ ಎಂಬ ಫೇಸ್‌ಬುಕ್ ಖಾತೆಯಿಂದ ಕೂಡ ಆಗಸ್ಟ್ 2, 2024 ರಂದು ಇದೇ ವೀಡಿಯೊ ಅಪ್ಲೋಡ್ ಆಗಿದೆ. ಇವರು, 'ಇದು ಯುಪಿಯಲ್ಲಿ ಒಂದು ತರಗತಿ.. ಮಕ್ಕಳಿಗೆ ಈಜುಕೊಳವನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು ಯೋಗಿ ಜಿ' ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಸದ್ಯ ಹರಿದಾಡುತ್ತಿರುವ ವೀಡಿಯೊ ಸುಮಾರು ಮೂರು ತಿಂಗಳ ಹಳೇಯದ್ದಾಗಿದೆ. ತೀವ್ರ ಬಿಸಿಲಿನಿಂದ ಮಕ್ಕಳನ್ನು ತಂಪಾಗಿಸಲು ತರಗತಿಯ ಕೊಠಡಿಯಲ್ಲಿ ನೀರು ಹಾಕಲಾಗಿತ್ತು. ಈ ವೀಡಿಯೊಕ್ಕೆ ಈಹ ಬೇರೆ ರೂಪಕೊಟ್ಟು ವೈರಲ್ ಮಾಡಲಾಗುತ್ತಿದೆ ಎಂದು ನ್ಯೂಸ್‌ಮೀಟರ್ ಕಂಡುಕೊಂಡಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಎನ್ಡಿಟಿವಿ ಯೂಟ್ಯೂಬ್ ಚಾನಲ್‌ನಿಂದ ಏಪ್ರಿಲ್ 30, 2024 ರಂದು ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ.
“ಭಾರತದಲ್ಲಿ ಬಿಸಿಲಿನ ಅಲೆ | ಯುಪಿಯ ಶಾಲೆಯಲ್ಲಿ ತಾಪಮಾನವು ಹೆಚ್ಚಾಗುತ್ತಿದ್ದಂತೆ ತರಗತಿಯನ್ನು ಈಜುಕೊಳವಾಗಿ ಪರಿವರ್ತಿಸಲಾಗಿದೆ'' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಪೋಸ್ಟ್ ಮಾಡಿದ್ದಾರೆ. ಶಾಲಾ ಮಕ್ಕಳನ್ನು ಬಿಸಿಗಾಳಿಯಿಂದ ರಕ್ಷಿಸಲು ತರಗತಿ ಕೊಠಡಿಗಳನ್ನು ಬದಲಾಯಿಸಲಾಗಿದೆ ಎಂದು ವಿವರಿಸಲಾಗಿದೆ.
ಎನ್ಡಿಟಿವಿ ವರದಿಯ ಪ್ರಕಾರ, ಉತ್ತರ ಪ್ರದೇಶದ ಕನ್ನೌಜ್‌ನಲ್ಲಿರುವ ಶಾಲೆಯೊಂದು ಬಿಸಿಲಿನ ಶಾಖವನ್ನು ಎದುರಿಸಲು ಈ ವಿಶೇಷ ನಿರ್ಧಾರವನ್ನು ತೆಗೆದುಕೊಂಡಿದೆ. ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿದ್ದಂತೆ, ವಿದ್ಯಾರ್ಥಿಗಳನ್ನು ತಂಪಾಗಿಸಲು ಮತ್ತು ಶಾಲೆಗೆ ಹಾಜರಾಗಲು ಪ್ರೋತ್ಸಾಹಿಸಲು ತರಗತಿಯನ್ನು ತಾತ್ಕಾಲಿಕ ಈಜುಕೊಳವಾಗಿ ಪರಿವರ್ತಿಸಲಾಗಿದೆ ಎಂದು ಬರೆಯಲಾಗಿದೆ.
ಮಿರರ್ ನೌ, ಟೈಮ್ಸ್ ನೌ, ಝೀ ಬ್ಯುಸಿನೆಸ್ ಮಾಧ್ಯಮಗಳು ಕೂಡ ಯುಪಿಯ ಕಣ್ಣೂರಿನ ಶಾಲೆಯೊಂದರ ಈ ವೀಡಿಯೊವನ್ನು ಏಪ್ರಿಲ್ 2024 ರಲ್ಲಿ ಅಪ್‌ಲೋಡ್ ಮಾಡಿದೆ. ಅಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸಲು ಮತ್ತು ಬಿಸಿಯ ಶಾಖವನ್ನು ನಿಭಾಯಿಸಲು ತರಗತಿಯನ್ನು ಈಜುಕೊಳವಾಗಿ ಪರಿವರ್ತಿಸಲಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್ 30, 2024 ರಂದು
ದಿ ಇಂಡಿಯನ್ ಎಕ್ಸ್‌ಪ್ರೆಸ್,
ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುಡುವ ಬಿಸಿಲಿನಿಂದ ಪಾರಾಗಲು ತರಗತಿಯನ್ನು ಈಜುಕೊಳವನ್ನಾಗಿ ಮಾಡಿದ್ದಾರೆ ಎಂದು ವರದಿ ಮಾಡಿವೆ.
ಹೀಗಾಗಿ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ತರಗತಿಯೊಂದು ಈಜು ಕೊಳವಾಗಿದೆ ಎಂದು ಬಿಂಬಿಸುತ್ತಿರುವ ವೈರಲ್ ಪೋಸ್ಟ್ ಸುಳ್ಳಾಗಿದೆ. ಈ ವೀಡಿಯೊ ಹಳೆಯದಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈರೀತಿ ಮಾಡಲಾಗಿದೆ ಎಂದು ನಾವು ಖಚಿತಪಡಿಸುತ್ತೇವೆ.