ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಅಕ್ಟೋಬರ್ 28ರವರೆಗೂ ವರುಣ ಆರ್ಭಟ ಇರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ/ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಕೂಡ ಘೋಷಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದರೆ, ಇನ್ನು ಕೆಲವು ಕಡೆ ರಸ್ತೆಗಳಲ್ಲೇ ನೀರು ಹರಿಯುತ್ತಿದ್ದು ತೊರೆ ಹಳ್ಳಗಳಂತಾಗಿವೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ಹರಿದಾಡುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಎಂಬಂತೆ ಮಾಡಲಾಗುವುದು ಹೇಳಿದ್ದರು. ಆದರೆ, ಸಿಲಿಕಾನ್ ಸಿಟಿಯಲ್ಲಿ ಮಳೆಯಿಂದಾದ ಅನಾಹುತಗಳನ್ನು ಕಂಡು ಬ್ರ್ಯಾಂಡ್ ಬೆಂಗಳೂರು ಸಾಕಷ್ಟು ಟೀಕೆಗಳನ್ನು ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧ ಪಟ್ಟಂತೆ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಮಳೆ ಬರುತ್ತಿರುವಾಗ ರಸ್ತೆಯ ಮಧ್ಯೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಉರಿಯುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬ್ರಾಂಡ್ ಬೆಂಗಳೂರು ಬಿಸಿ ನೀರು ಭಾಗ್ಯ ಅಷ್ಟೇ.. ಯಾರಿಗೆ ಏನಾದ್ರೆ ನಮಗೇನು ಅಂತಿದೆ ಕಾಸಿಲ್ಲದ ಸರ್ಕಾರ,’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ವೀಡಿಯೊ ಬೆಂಗಳೂರಿನದ್ದಲ್ಲ, ಬದಲಾಗಿ ಇದು ವಿಯೆಟ್ನಾಂನಲ್ಲಿ ನಡೆದ ಘಟನೆ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಅನೇಕ ಫಲಿತಾಂಶಗಳು ಇದು ವಿಯೆಟ್ನಾಂನದ್ದು ಎಂಬಂತೆ ಪೋಸ್ಟ್ ಗಳಿರುವುದನ್ನು ಗಮನಿಸಿದ್ದೇವೆ. ಅಕ್ಟೋಬರ್ 16, 2024 ರಂದು ರೆಡಿಟ್ ನಲ್ಲಿ ವಿಯೆಟ್ನಾಂ ನೇಷನ್ ಎಂಬ ಬಳೆಕೆದಾರರು ಮಾಡಿದ ಪೋಸ್ಟ್ ನಮಗೆ ಸಿಕ್ಕಿತು. ‘‘ಅಕ್ಟೋಬರ್ 14 ರ ಮಧ್ಯಾಹ್ನ, 2 ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಯಿಂದ ಕ್ಯಾನ್ ಥೋ ನಗರದ ಮಧ್ಯ ಪ್ರದೇಶದ ಬೀದಿಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಯಿತು. ಗುಡುಗು ಸಹಿತ ಭಾರೀ ಮಳೆಯಿಂದಾಗಿ ನಿನ್ಹ್ ಕಿಯು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿತು. ನ್ಗುಯೆನ್ ವ್ಯಾನ್ ಲಿನ್ಹ್ ಬೀದಿಯಲ್ಲಿ, ವಿದ್ಯುತ್ ತಂತಿ ಪ್ರವಾಹದ ನೀರಿದ್ದ ರಸ್ತೆಯ ಮೇಲೆ ಬಿದ್ದು, ಅದರಿಂದ ಕಿಡಿಗಳು ಸಿಡಿದಿದ್ದರಿಂದ ಅನೇಕ ಜನರು ಭಯಭೀತರಾಗಿದ್ದರು,’’ ಎಂದು ಬರೆಯಲಾಗಿದೆ.
ಹಾಗೆಯೆ ಇದೇ ವೀಡಿಯೊವನ್ನು ವಿಯೆಟ್ನಾಂನ ಹವಾಮಾನ ಮತ್ತು ಪರಿಸರದ ಬಗ್ಗೆ ಮಾಹಿತಿ ನೀಡುವ KÊNH VTC14 ಯೂಟ್ಯೂಬ್ ಚಾನೆಲ್ನಲ್ಲಿ ಅಕ್ಟೋಬರ್ 17, 2024 ರಂದು ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ‘‘ತುಂಡಾದ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಗೆ ಬೀಳುವ ಭಯಾನಕ ದೃಶ್ಯ, ಇದರಿಂದ ಕಿಡಿಗಳು ಹಾರಿವೆ,’’ ಎಂದು ಶೀರ್ಷಿಕೆ ನೀಡಲಾಗಿದೆ.
ಇನ್ನು ಅಕ್ಟೋಬರ್ 16, 2024ರಂದು ವಿಯೆಟ್ನಾಂನ ಸುದ್ದಿ ವೆಬ್ಸೈಟ್ ವಿಯೆಟ್ನಾಂ ಪ್ಲಸ್ ಪ್ರಕಟಿಸಿದ ವರದಿಯನ್ನು ನಾವು ಕಂಡಿದ್ದೇವೆ, ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಕ್ಯಾನ್ ಥೋದಲ್ಲಿ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಯ ಮೇಲೆ ಬಿದ್ದಾಗ ಸಂಭವಿಸಿದ ಆಘಾತಕಾರಿ ದೃಶ್ಯ. ತುಂಡಾದ ವಿದ್ಯುತ್ ತಂತಿಯು ನೀರಿನ ಮೇಲ್ಮೈಯಲ್ಲಿ ಅಪಾಯಕಾರಿಯಾಗಿ ಕಾಣುವ ಕಿಡಿಗಳನ್ನು ಕಂಡು ಜನರು ಭಯಭೀತರಾಗಿದ್ದರು,’’ ಎಂದು ಬರೆಯಲಾಗಿದೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವಿದ್ಯುತ್ ತಂತಿಗಳು ಮಳೆ ನೀರು ಹರಿಯುತ್ತಿದ್ದ ರಸ್ತೆಮೇಲೆ ಬಿದ್ದು ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದು ಬೆಂಗಳೂರಿನಲ್ಲಿ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ವಿಯೆಟ್ನಾಂನಲ್ಲಿ ನಡೆದ ಘಟನೆ ಆಗಿದೆ.