Fact Check: ಮುಂಬೈನಲ್ಲಿ ಮುಸ್ಲಿಮರು ಕುದುರೆಯನ್ನು ಗಾಯಗೊಳಿಸಿ ಮೆರವಣಿಗೆ ನಡೆಸಿದ್ದು ಸುಳ್ಳು
ಮುಸ್ಲಿಂ ಸಮುದಾಯದ ಪುರುಷರು ಮೊಹರಂ ಸಮಯದಲ್ಲಿ ಬೀದಿಗಳಲ್ಲಿ ಮೆರವಣಿಗೆ ಮಾಡಲು ಕುದುರೆಯನ್ನು ಗಾಸಿಗೊಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಎಲ್ಲೆಡೆ ಈ ಪೋಸ್ಟ್ ಹರಿದಾಡುತ್ತಿದೆ.
By Newsmeter Network Published on 27 July 2024 5:38 AM GMTClaim: ಮುಸ್ಲಿಂ ಸಮುದಾಯದ ಪುರುಷರು ಮೊಹರಂ ಸಮಯದಲ್ಲಿ ಬೀದಿಗಳಲ್ಲಿ ಮೆರವಣಿಗೆ ಮಾಡಲು ಕುದುರೆಯನ್ನು ಗಾಸಿಗೊಳಿಸಿದ್ದಾರೆ.
Fact: ಇದು ಸುಳ್ಳು ಸುದ್ದಿಯಾಗಿದೆ. ವೈರಲ್ ಆಗುತ್ತಿರುವ ಸುದ್ದಿಯಂತೆ ಇಲ್ಲಿ ಕುದುರೆಯನ್ನು ಗಾಯ ಮಾಡಲಾಗಿಲ್ಲ. ಬದಲಾಗಿ ಮೆರವಣಿಗೆ ವೇಳೆ ಸ್ಥಳದಲ್ಲಿದ್ದವರು ಕುದುರೆಗೆ ಬಣ್ಣ ಬಳಿದಿದ್ದಾರೆ.
ಇಬ್ಬರು ಪುರುಷರು ಗಾಯದ ಗುರುತಿರುವ ಕುದುರೆಯನ್ನು ದೊಡ್ಡ ಗುಂಪಿನ ಮಧ್ಯೆ ಮೆರವಣಿಗೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿರುವ ಕುದುರೆಯ ದೇಹದ ಮೇಲೆ ಅನೇಕ ಗಾಯದ ಗುರುತುಗಳಿವೆ. ಮುಸ್ಲಿಂ ಸಮುದಾಯದ ಪುರುಷರು ಮೊಹರಂ ಸಮಯದಲ್ಲಿ ಬೀದಿಗಳಲ್ಲಿ ಮೆರವಣಿಗೆ ಮಾಡಲು ಕುದುರೆಯನ್ನು ಗಾಸಿಗೊಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಎಲ್ಲೆಡೆ ಈ ಪೋಸ್ಟ್ ಹರಿದಾಡುತ್ತಿದೆ.
ಅಮಿತ್ ಲೆಲಿ ಸ್ಲೇಯರ್ (ಬಾಯಿಲ್ಡ್ ಅಂಡಾ) ಎಂಬ ಎಕ್ಸ್ ಬಳಕೆದಾರರು ಜುಲೈ 18, 2024 ರಂದು ಈ ವೀಡಿಯೊವನ್ನು ಹಂಚಿಕೊಂಡು, "ಈ ವರ್ಷ, ಮುಂಬೈನ ಬೀದಿಗಳಲ್ಲಿ, ಮುಸ್ಲಿಮರು ಕ್ರೌರ್ಯ, ಮುಗ್ಧ ಕುದುರೆಯನ್ನು ತೆಗೆದುಕೊಂಡು, ಅದನ್ನು ಚಾಕುವಿನಿಂದ ಗಾಯ ಮಾಡಿ ಕತ್ತರಿಸಿದ್ದಾರೆ. ಪ್ರವಾದಿಯವರ ಮೊಮ್ಮಗನ ಮರಣದ ಸ್ಮರಣಾರ್ಥವಾಗಿ, ಗಾಯಗೊಂಡ ಪ್ರಾಣಿಯನ್ನು ಮೆರವಣಿಗೆ ಮಾಡುತ್ತಿದ್ದಾರೆ," ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ 35 ಲಕ್ಕಕ್ಕೂ ಅಧಿಕ ವೀಕ್ಷಣೆ ಮತ್ತು 6000 ಕ್ಕೂ ಅಧಿಕ ಲೈಕ್ಸ್ ಬಂದಿದೆ.
ಇದೇ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಾಣಿಯನ್ನು ಗಾಯಗೊಳಿಸಲು ಚಾಕು ಮತ್ತು ಬ್ಲೇಡ್‌ಗಳನ್ನು ಬಳಸುತ್ತಿದ್ದಾರೆ ಎಂದು ಮುಸ್ಲಿಂ ಸಮುದಾಯವನ್ನು ಟೀಕಿಸಿದ್ದಾರೆ. ಇದೇ ರೀತಿಯ ಅನೇಕ ಪೋಸ್ಟ್‌ಗಳು ಅಪ್ಲೋಡ್ ಆಗಿವೆ.
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಮುಸ್ಲಿಮರು ಕುದುರೆಯನ್ನು ಚಾಕುವಿನಿಂದ ಗಾಯ ಮಾಡಿ ಮೆರವಣಿಗೆ ಮಾಡುತ್ತಿದ್ದಾರೆ ಎಂಬ ಸುದ್ದಿ ಸುಳ್ಳಾಗಿದೆ.
ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಮತ್ತು ಅಶುರಾ ಮೊಹರಂನ ಹತ್ತನೇ ದಿನವಾಗಿದೆ. ಇದು ಕರ್ಬಲಾ ಕದನದಲ್ಲಿ ಇಮಾಮ್ ಹುಸೇನ್ ಅವರ ಮರಣದ ನೆನಪಿಗಾಗಿ ಆಚರಿಸಲಾಗುತ್ತದೆ. ಅಶುರಾ ದಿನದಂದು, ಶಿಯಾ ಮುಸ್ಲಿಮರು ಕರ್ಬಲಾ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡ ಇಮಾಮ್ ಹುಸೇನ್ ಅವರ ಕುದುರೆಯ ಗೌರವಾರ್ಥವಾಗಿ ಕುದುರೆಯನ್ನು ಮೆರವಣಿಗೆ ಮಾಡುತ್ತಾರೆ
ಆದರೆ, ವೈರಲ್ ಆಗುತ್ತಿರುವ ಸುದ್ದಿಯಂತೆ ಇಲ್ಲಿ ಕುದುರೆಯನ್ನು ಚಾಕುವಿನಿಂದ ಗಾಯ ಮಾಡಲಾಗಿಲ್ಲ. ಬದಲಾಗಿ ಮೆರವಣಿಗೆ ವೇಳೆ ಸ್ಥಳದಲ್ಲಿದ್ದವರು ಕುದುರೆಗೆ ಬಣ್ಣ ಬಳಿದಿದ್ದಾರೆ. ಈ ಕುರಿತು ಜುಲೈ 17, 2024 ರಂದು ಷಿಯಾ ಏಜೆನ್ಸಿ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊ ಹಂಚಿಕೊಳ್ಳಲಾಗಿದೆ. ಈ ವೀಡಿಯೊದಲ್ಲಿ ಕುದುರೆಗೆ ಬಣ್ಣ ಬಳಿಯುತ್ತಿರುವುದು ಸೆರೆಯಾಗಿದೆ.
ಹಾಗೆಯೆ ಮೆರವಣಿಗೆ ವೇಳೆ ಕುದುರೆಯ ಜೊತೆ ಇರುವ ಅದೇ ವ್ಯಕ್ತಿ ಯೂಟ್ಯೂಬ್ನಲ್ಲಿರುವ ವೀಡಿಯೊದಲ್ಲಿ ಕುದುರೆಗೆ ಬಣ್ಣ ಹಾಕುತ್ತಿದ್ದಾರೆ.
ಈ ಬಗ್ಗೆ PETA ಇಂಡಿಯಾದ ಮ್ಯಾನೇಜರ್ ಮೀಟ್ ಅಶರ್ ಅವರು ಸ್ಪಷ್ಟನೆ ನೀಡಿದ್ದು, ''ಅವರು ಕುದುರೆಗೆ ಯಾವುದೇ ರೀತಿಯ ಹಾನಿ ಮಾಡಿಲ್ಲ. ಆದರೆ, ಮೆರವಣಿಗೆಯಲ್ಲಿ ಯಾವುದೇ ಪ್ರಾಣಿ ಬಳಸುವುದನ್ನು ನಾವು ವಿರೋಧಿಸುತ್ತೇವೆ. ಕುದುರೆಗೆ ಬಣ್ಣ ಬಳಿಯಲಾಗಿದೆ. ಇದು ಅತ್ಯಂತ ಆಕ್ಷೇಪಾರ್ಹವಾಗಿದೆ,'' ಎಂದು ವಿಸ್ತಾರವಾಗಿ ಬರೆದುಕೊಂಡಿದ್ದಾರೆ.
We object to the use of any animal during processions. In this case, the Dongri police tell us the horse was painted. This is also highly objectionable, but the horse is not lacerated. PETA India offered a mechanical elephant for a Muharram procession this year but our offer was… pic.twitter.com/ud7eTpKJt5
— Meet Ashar (@asharmeet02) July 19, 2024
ಹಾಗೆಯೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದನ್ನು ಕೂಡ ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಸಿರು ಬಣ್ಣದ ಕಟ್ಟಡದ ಪಕ್ಕದಲ್ಲಿ ಹಜ್ರತ್ ಇಮಾಮ್ ಮತ್ತು ಡೋಂಗ್ರಿ ಪೊಲೀಸ್ ಎಂದು ಬರೆದಿರುವ ಬೋರ್ಡ್ ಕಾಣಿಸುತ್ತದೆ. ಇದನ್ನು ಗೂಗಲ್ ಸರ್ಚ್ನಲ್ಲಿ ಹುಡುಕಿದಾಗ ಹಜ್ರತ್ ಇಮಾಮ್ ಹುಸೈನ್ ಚೌಕ್ ಡೋಂಗ್ರಿ ಪೊಲೀಸ್ ಸ್ಟೇಷನ್ ಎಂಬುದು ಕಂಡುಬಂತು. ಇನ್ನಷ್ಟು ಖಚಿತತೆಗಾಗಿ ನಾವು ಗೂಗಲ್ ಮ್ಯಾಪ್ನಲ್ಲಿ 'ಹಜ್ರತ್ ಇಮಾಮ್ ಹುಸೈನ್ ಚೌಕ್ ಡೋಂಗ್ರಿ ಪೊಲೀಸ್ ಸ್ಟೇಷನ್' ಎಂದು ಲೊಕೇಷನ್ ಹಾಕಿ ಸ್ಟ್ರೀಟ್ ವೀವ್ ತೆರೆದು ನೋಡಿದಾಗ ಖಚಿತವಾಯಿತು. ವೈರಲ್ ವೀಡಿಯೊದ ಹಿಂಬದಿಯಲ್ಲಿ ಕಂಡುಬರುವ ಹಸಿರು ಬಣ್ಣದ ಕಟ್ಟಡವು ಸುನ್ನಿ ಶಾಫಿ ಮಸೀದಿಯಾಗಿದೆ. ಹಾಗೆಯೆ ಮಸೀದಿಯ ಪಕ್ಕದಲ್ಲಿರುವುದು ಡೋಂಗ್ರಿ ಪೊಲೀಸ್ ಠಾಣೆ ಆಗಿದೆ.
ಹೀಗೆ ಇದು ಮುಂಬೈನ ಡೋಂಗ್ರಿಯ ಹಜ್ರತ್ ಇಮಾಮ್ ಹುಸೇನ್ ಚೌಕ್‌ನಲ್ಲಿ ನಡೆದ ಘಟನೆ ಎಂದು ನಾವು ಕಂಡುಕೊಂಡಿದ್ದೇವೆ.
ಈ ಮೂಲಕ ನಮ್ಮ ತನಿಖೆಯಿಂದ, ವೈರಲ್ ವೀಡಿಯೊಕ್ಕೆ ನೀಡಿರುವ ಶೀರ್ಷಿಕೆಯಂತೆ ಮುಂಬೈನ ಡೋಂಗ್ರಿಯಲ್ಲಿ ನಡೆದ ಅಶುರಾ ಮೆರವಣಿಗೆ ವೇಳೆ ಕುದುರೆಯ ದೇಹದ ಮೇಲೆ ಯಾವುದೇ ಗಾಯಗಳನ್ನು ಮಾಡಲಾಗಿಲ್ಲ. ಕುದುರೆಗೆ ಬಣ್ಣ ಬಳಿದಿರುವುದರಿಂದ ಆರೀತಿ ಕಾಣುತ್ತಿದೆ.