ಹೈದರಾಬಾದ್: ಈ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಅಧಿಕಾರವಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಎಂದು ವಿಡಿಯೋ ತುಣುಕೊಂದನ್ನು ಹರಿಯ ಬಿಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ 80 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಕಳಪೆ ಸಾಧನೆ ತೋರಿದ ಬಳಿಕ ಯೋಗಿ ಆದಿತ್ಯನಾಥ್ ರವರ ವರ್ತನೆಯಲ್ಲಿ ಬದಲಾವಣೆ ಬಂದಿದೆ ಎಂದು ಹೇಳಲಾಗಿದೆ. ಚುನಾವಣೆ ಫಲಿತಾಂಶದ ನಂತರ ಯೋಗಿಯವರು ಮುಸ್ಲಿಮರ ಮೇಲೆ ಸಾಫ್ಟ್ ಕಾರ್ನರ್ ತಾಳಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಬಳಕೆದಾರರು ವೀಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದಾರೆ.
Farhat Official ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ "ಮುಸಲ್ಮಾನರ ಬಗ್ಗೆ ಯೋಗಿಜಿ ಎಂತಹ ಒಳ್ಳೆಯ ಮಾತನ್ನಾಡಿದ್ದಾರೆ" ಎಂಬ ಶೀರ್ಷಿಕೆಯಲ್ಲಿ ವೀಡಿಯೋ ತುಣುಕೊಂದನ್ನು ಅಪ್ಲೋಡ್ ಮಾಡಲಾಗಿದೆ.
X ಬಳಕೆದಾರರೊಬ್ಬರು "ಉತ್ತರ ಪ್ರದೇಶದ ಮತದಾರರು ಯೋಗಿಯವರ ರಾಗವನ್ನೇ ಬದಲಿಸಿದ್ದಾರೆ" ಎಂದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೇ ರೀತಿ ಹಲವಾರು ಇನ್ಸ್ಟಾಗ್ರಾಮ್ ರೀಲ್ಸ್ ಗಳು, ಯೂಟ್ಯೂಬ್ ಶಾರ್ಟ್ಸ್‌ಗಳಾಗಿಯೂ ಕೂಡ ಈ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದೆ
ಫ್ಯಾಕ್ಟ್‌ಚೆಕ್:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನಾವು ಪರಿಶೋಧಿಸಿದಾಗ ಇದು ವಿಡಿಯೋ ಒಂದರ ಆಯ್ದ ಭಾಗವನ್ನು ಮಾತ್ರ ಕ್ಲಿಪ್ ಮಾಡಿ ಹಂಚಲಾಗಿದೆ ಎಂದು ಮನದಟ್ಟಾಗಿದೆ. ವೈರಲ್ ಆದ ವೀಡಿಯೋ ಕ್ಲಿಪ್
Rajasthan Patrika ಎಂಬ ನ್ಯೂಸ್ ಏಜೆನ್ಸಿಯ ಯೂಟ್ಯೂಬ್ ಚಾನಲ್‌ನಲ್ಲಿ ಎಪ್ರಿಲ್ 23 ರಂದು ಅಪ್ಲೋಡ್ ಮಾಡಲಾಗಿತ್ತು.
ಆದರೆ ಅಲ್ಲಿ ಪೂರ್ತಿ ವೀಡಿಯೋ ಲಭಿಸದೇ ಹೋಗಿದ್ದರಿಂದ ನಾವು ಈ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದು ನಮ್ಮನ್ನು ನ್ಯೂಸ್ ಏಜೆನ್ಸಿ
ANI 2024 ಏಪ್ರಿಲ್ ತಿಂಗಳ 23ರಂದು ಅಪ್ಲೋಡ್ ಮಾಡಿದ ವಿಡಿಯೋಗೆ ತಲುಪಿಸಿತು. ಆ ವಿಡಿಯೋದ 0.32 ರಿಂದ ಪ್ರಾರಂಭವಾಗುವ ಟೈಮ್ ಸ್ಪಾನ್‌ನಲ್ಲಿ ಯೋಗಿಯವರು ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದರು.
"ಡಾ. ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿ ಆಗಿದ್ದರು. ಈ ದೇಶದ ಸಂಪತ್ತಿನ ನಿಜವಾದ ಹಕ್ಕುದಾರರು ಮುಸಲ್ಮಾನರು ಎಂದು ಅವರು ಯಾವ ಆಧಾರದ ಮೇಲೆ ಹೇಳಿದರು? ಹಲವಾರು ವರ್ಷಗಳಿಂದ ಅವರು ದೇಶದ ಸಂಪತ್ತನ್ನು ತಮ್ಮ ಪರಿವಾರದ ಸ್ವತ್ತೆಂದು ಭಾವಿಸಿದ್ದರು. ಜಾತಿ-ಧರ್ಮಗಳ ನಡುವೆ ವೈಮನಸ್ಯ ಬಿತ್ತಿ, ದೇಶವನ್ನು ಒಡೆಯುವ ಕೆಲಸವನ್ನು ಅವರು ಮಾಡುತ್ತಲೇ ಬಂದಿದ್ದಾರೆ" ಎಂದು ಯೋಗಿ ಹೇಳುತ್ತಿರುವುದು ಕಾಣಬಹುದು.
Livemint ಎಂಬ ಆನ್ಲೈನ್ ಜರ್ನಲ್‌ನಲ್ಲಿ ಯೋಗಿಯವರ ಅಂದಿನ ಹೇಳಿಕೆಯನ್ನು ವರದಿ ಮಾಡಲಾಗಿದೆ.
ಈ ವೀಡಿಯೋದಲ್ಲಿ ಯೋಗಿಯವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಮನಮೋಹನ್ ಸಿಂಗ್ ಅವರು ಹೇಳಿದ್ದರು ಎನ್ನಲಾದ ಒಂದು ಹೇಳಿಕೆಯನ್ನು ಉಲ್ಲೆಖಿಸಿ ಮಾತನಾಡಿದ್ದರೇ ಹೊರತು 'ಈ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಹಕ್ಕು ಇದೆ' ಎಂದು ಅವರು ಹೇಳಲಿಲ್ಲ. ಆದ್ದರಿಂದ ಮೇಲ್ಕಂಡ ವೀಡಿಯೋವನ್ನು ಕ್ಲಿಪ್ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ ಎಂದು ತಿಳಿದು ಬರುತ್ತದೆ.