ಹೈದರಾಬಾದ್: “ನುಡಿದಂತೆ ನಡೆಯುತ್ತಿರುವ ರಾಜ್ಯ ಸರ್ಕಾರ, ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ 3000 ರೂಪಾಯಿ, ಡಿಪ್ಲೋಮಾ ನಿರುದ್ಯೋಗಿಗಳಿಗೆ 1500! ಈಗಲೇ ಸಲ್ಲಿಸಿ ಅರ್ಜಿ, ಇಲ್ಲಿವೆ ನೋಡಿ ಮಾಹಿತಿ!!” ಎಂಬ ಹೆಡ್ಡಿಂಗ್ ನೊಂದಿಗೆ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ್ದು, ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುಂಚೆ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ ಬಗೆಗಿನ ಮಾಹಿತಿ ಇದಾಗಿದೆ. ಆದರೆ ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಮಾಡಿದಂತೆ ಇದು ದಾರಿ ತಪ್ಪಿಸುವಂಥ ಮಾಹಿತಿ ಆಗಿದೆ. ಸುಳ್ಳು ಮಾಹಿತಿಯನ್ನು ಒಳಗೊಂಡಿದೆ.
ಈ ಸುದ್ದಿಯನ್ನು ಪೂರ್ತಿ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
Factcheck
ಕಾಂಗ್ರೆಸ್ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಈಗಾಗಲೇ ಅಧಿಕಾರಕ್ಕೆ ಏರಿದೆ. ಸರ್ಕಾರದಿಂದ ಈಗಾಗಲೇ ಗೃಹಲಕ್ಷ್ಮೀ, ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸುದ್ದಿಯಲ್ಲಿ ತಿಳಿಸಲಾಗಿದೆ. ಆದರೆ ವಾಸ್ತವದಲ್ಲಿ ಜಾರಿಗೆ ಬಂದಿರುವುದು ಶಕ್ತಿ ಹೆಸರಿನ ಯೋಜನೆ ಮಾತ್ರ, ಅಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾಮಾನ್ಯ ಬಸ್ ಗಳಲ್ಲಿ ಮತ್ತು ಬಿಎಂಟಿಸಿಯಲ್ಲಿ ಮಹಿಳೆಯರಿಗೆ, ಯುವತಿಯರಿಗೆ, ಬಾಲಕಿಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಗೆ ಜೂನ್ ಹನ್ನೊಂದನೇ ತಾರೀಕು ಚಾಲನೆ ನೀಡಲಾಗಿದೆ.
ಆದರೆ, ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಈಗ ಆಹ್ವಾನಿಸಲಾಗಿದೆಯೇ ವಿನಾ ಇನ್ನೂ ಜಾರಿಗೆ ಬಂದಿಲ್ಲ. ಅಂದರೆ ಅರ್ಜಿದಾರರಿಗೆ ಅರ್ಜಿ ಹಾಕಿಕೊಳ್ಳುವುದಕ್ಕೆ ಅವಕಾಶ ಮಾಡಲಾಗಿದೆಯೇ ವಿನಾ ಇನ್ನೂ ಯೋಜನೆ ಅನುಷ್ಠಾನ ಆಗಿಲ್ಲ. ಇದನ್ನು ಸೇವಾಸಿಂಧು ವೆಬ್ ಸೈಟ್ ನಲ್ಲಿ ಪರೀಕ್ಷೆ ಮಾಡಬಹುದು.
ಅದೇ ರೀತಿ ಗೃಹಲಕ್ಷ್ಮೀ ಯೋಜನೆಗೆ ಹಾಗೂ ಯುವನಿಧಿ- ನಿರುದ್ಯೋಗ ಭತ್ಯೆ ವಿಚಾರಕ್ಕೆ ಅರ್ಜಿಯನ್ನೇ ಆಹ್ವಾನಿಸಿಲ್ಲ. ಈ ಬಗ್ಗೆ ಕೂಡ ಸೇವಾಸಿಂಧು ವೆಬ್ ಸೈಟ್ ನಲ್ಲಿಯೇ ಮಾಹಿತಿ ಇದೆ. ಗೃಹಲಕ್ಷ್ಮೀ ಯೋಜನೆ ಜಾರಿಗೆ ಸರ್ವರ್ ಸಮಸ್ಯೆ ಎದುರಾಗಿದೆ. ಆದ್ದರಿಂದ ಅದನ್ನು ನಿವಾರಿಸಿ, ಆಗಸ್ಟ್ ತಿಂಗಳಲ್ಲಿ ಜಾರಿಗೆ ತರುವುದಾಗಿ ಮಾಧ್ಯಮಗಳಲ್ಲಿ ಹೇಳಿರುವುದು ಜೂನ್ 23ನೇ ತಾರೀಕಿನಂದು ಮಾಧ್ಯಮಗಳ ವೆಬ್ ಸೈಟ್ ನಲ್ಲಿ ವರದಿ ಆಗಿದೆ.
ಇನ್ನು ಗೃಹಲಕ್ಷ್ಮೀ ಯೋಜನೆಗೆ ಮುಂದಿನ ಸಚಿವ ಸಂಪುಟದಲ್ಲಿ ಅಂತಿಮ ರೂಪು- ರೇಷೆ ಸಿಗಲಿದೆ. ಈ ಯೋಜನೆ ಜಾರಿಗೆ ಪ್ರತ್ಯೇಕ ಆ್ಯಪ್ ಈಗಾಗಲೇ ತಯಾರಾಗಿದ್ದು, ಈ ಕುರಿತು ಸಿಎಂ ಜತೆ ಚರ್ಚೆ ನಡೆಸಲಾಗುವುದು. ಅಲ್ಲದೇ ಇದಕ್ಕೆ ಯಾವ ದಿನದಿಂದ ಅರ್ಜಿ ಸ್ವೀಕಾರ ಮಾಡಬೇಕು ಮುಖ್ಯಮಂತ್ರಿ ಗಮನಕ್ಕೆ ತಂದು ನಿರ್ಧಾರ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹೇಳಿರುವುದಾಗಿ ಕನ್ನಡದ ಪ್ರಮುಖ ಮಾಧ್ಯಮವಾದ ‘ಪ್ರಜಾವಾಣಿ’ ವೆಬ್ ಸೈಟ್ ನಲ್ಲಿ ವರದಿ ಆಗಿದೆ.
ಇನ್ನು ವೈರಲ್ ಆಗಿರುವ ಸುದ್ದಿಯಲ್ಲಿ ಇರುವಂತೆ ಯುವನಿಧಿ ಯೋಜನೆಗೆ “ಇಂದೇ ಅರ್ಜಿ ಸಲ್ಲಿಸುವುದು” ಸಾಧ್ಯವೇ ಇಲ್ಲ. ಏಕೆಂದರೆ ಅದಕ್ಕೆ ಇನ್ನೂ ಅವಕಾಶ ನೀಡಿಲ್ಲ. ಆದ್ದರಿಂದ ಈ ಸುದ್ದಿಯ ಮೂಲಕ ಜನರನ್ನು ದಾರಿ ತಪ್ಪಿಸಲಾಗಿದೆ.
Conclusion
ಈ ಎಲ್ಲ ಮೇಲ್ಕಂಡ ಕಾರಣಗಳಿಂದ ವೈರಲ್ ಆಗಿರುವ ಸುದ್ದಿಯು ಜನರ ದಾರಿ ತಪ್ಪಿಸುವಂತೆ ಇದ್ದು, ತಪ್ಪು ಮಾಹಿತಿಗಳಿಂದಲೂ ಕೂಡಿದೆ ಎಂಬುದು ಕಂಡುಬರುತ್ತದೆ ಮತ್ತು ಖಚಿತವಾಗುತ್ತದೆ.