Fact Check: ರಣವೀರ್ ಅಲ್ಲಾಬಾಡಿಯಾ ಅಳುತ್ತಿರುವ ಈ ವೀಡಿಯೊ ಇಂಡಿಯಾಸ್ ಗಾಟ್ ಲೇಟೆಂಟ್ ವಿವಾದಕ್ಕೆ ಸಂಬಂಧಿಸಿಲ್ಲ

ರಣವೀರ್ ಅಲ್ಲಾಬಾಡಿಯಾ ಅವರ ವೀಡಿಯೊ ತುಣುಕು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ವಿಡಿಯೋ ಕ್ಲಿಪ್‌ನಲ್ಲಿ, ರಣವೀರ್ ಕ್ಯಾಮೆರಾ ಮುಂದೆ ಅಳುತ್ತಾ ಮಾತನಾಡುತ್ತಿರುವುದು ಕಂಡುಬರುತ್ತದೆ.

By Vinay Bhat  Published on  14 Feb 2025 11:33 AM IST
Fact Check: ರಣವೀರ್ ಅಲ್ಲಾಬಾಡಿಯಾ ಅಳುತ್ತಿರುವ ಈ ವೀಡಿಯೊ ಇಂಡಿಯಾಸ್ ಗಾಟ್ ಲೇಟೆಂಟ್ ವಿವಾದಕ್ಕೆ ಸಂಬಂಧಿಸಿಲ್ಲ
Claim: ರಣವೀರ್ ಅಲ್ಲಾಬಾಡಿಯಾ ಅಳುತ್ತಾ ಕ್ಷಮೆಯಾಚಿಸುವುದು ವೀಡಿಯೊದಲ್ಲಿದೆ.
Fact: ಈ ಹೇಳಿಕೆ ಸುಳ್ಳು. ಈ ವೀಡಿಯೊ ಕ್ಲಿಪ್ 2021 ರಲ್ಲಿ ಅವರು ಕೋವಿಡ್-19 ಪಾಸಿಟಿವ್ ಆಗಿದ್ದಾಗ ಮಾತನಾಡಿದ್ದಾಗಿದೆ.

ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಲಾಹಬಾಡಿಯಾ ಅವರ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಸಮಯ್ ರೈನಾ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅವರಷ್ಟೇ ಅಲ್ಲ, ಸಮಯ್ ರೈನಾ, ಅಪೂರ್ವ ಮಖಿಜಾ ಮತ್ತು ಇತರ ಹಲವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದರ ಮಧ್ಯೆ, ರಣವೀರ್ ಅಲ್ಲಾಬಾಡಿಯಾ ಅವರ ವೀಡಿಯೊ ತುಣುಕು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.

ವಿಡಿಯೋ ಕ್ಲಿಪ್‌ನಲ್ಲಿ, ರಣವೀರ್ ಕ್ಯಾಮೆರಾ ಮುಂದೆ ಅಳುತ್ತಾ ಮಾತನಾಡುತ್ತಿರುವುದು ಕಂಡುಬರುತ್ತದೆ, "ಎಲ್ಲಾ ಕೆಲಸಗಳು ನಿಂತು ಹೋಗಿರುವುದರಿಂದ ನನಗೆ ಬೇಸರವಾಗುತ್ತಿದೆ. ನನಗೆ ತುಂಬಾ ತಪ್ಪಿತಸ್ಥ ಭಾವನೆ ಇದೆ. ನಾನು ಇಡೀ ತಂಡವನ್ನು ಇದಕ್ಕೆ ಒಡ್ಡಿದ್ದೇನೆ. ನನ್ನ ಕಾರಣದಿಂದಾಗಿ, ಇಡೀ ಕೆಲಸ ನಿಂತು ಹೋಗಿದೆ" ಎಂದು ಅವರು ಹೇಳುತ್ತಾರೆ. (ಹಿಂದಿಯಿಂದ ಅನುವಾದಿಸಲಾಗಿದೆ)

ಈ ವೀಡಿಯೊವನ್ನು ಫೇಸ್​ಬುಕ್ ಬಳಕೆದಾರರು ಪೋಸ್ಟ್ ಮಾಡಿದ್ದು, "ಎಷ್ಟೋ ವರ್ಷಗಳಿಂದ ಕಷ್ಟಪಟ್ಟು ಕಟ್ಟಿಕೊಂಡ ಕೋಟೆಯನ್ನ ತನ್ನ ದುರಹಂಕಾರ ಮತ್ತು ಅಹಂಕಾರದಿಂದ 2 ನಿಮಿಷದಲ್ಲಿ ಉರುಳಿಸಿಕೊಂಡ.. " ಎಂದು ಬರೆದುಕೊಂಡಿದ್ದಾರೆ. ( ಆರ್ಕೈವ್ )

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಹೇಳಿಕೆ ಸುಳ್ಳು ಎಂದು ನ್ಯೂಸ್ ಮೀಟರ್ ಕಂಡುಕೊಂಡಿದೆ. ವೈರಲ್ ಆಗಿರುವ ಈ ಕ್ಲಿಪ್ ರಣವೀರ್ ಅಲ್ಲಾಬಾಡಿಯಾ ಅವರ ಹಳೆಯ ಯೂಟ್ಯೂಬ್ ವೀಡಿಯೊದಿಂದ ಬಂದಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ರಣವೀರ್ ಅಲ್ಲಾಬಾಡಿಯಾ ಅವರ ಯೂಟ್ಯೂಬ್ ಚಾನೆಲ್‌ನ ವೀಡಿಯೊ ಒಂದಕ್ಕೆ ನಮ್ಮನ್ನು ಕರೆದೊಯ್ಯಿತು. ‘ಇದು ಕ್ಲಿಕ್‌ಬೈಟ್ ಅಲ್ಲ - ನನ್ನ ಕೋವಿಡ್-19 ಅನುಭವ | ವ್ಲಾಗ್ 24' ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾದ ವೀಡಿಯೊ ಇದಾಗಿದೆ. ಈ ವೀಡಿಯೊವನ್ನು ಏಪ್ರಿಲ್ 7, 2021 ರಂದು ಅಪ್‌ಲೋಡ್ ಮಾಡಲಾಗಿದೆ.

ರಣವೀರ್ ಅವರ ವೈರಲ್ ಕ್ಲಿಪ್ ಅನ್ನು ಈ ಯೂಟ್ಯೂಬ್ ವೀಡಿಯೊದಲ್ಲಿ 0:30-ನಿಮಿಷದಲ್ಲಿ ಕಾಣಬಹುದು.

ವಿಸ್ತೃತ ವೀಡಿಯೊದಲ್ಲಿ, ರಣವೀರ್ ತನಗೆ ಕೋವಿಡ್ -19 ಪಾಸಿಟಿವ್ ಬಂದಿರುವ ಬಗ್ಗೆ ಮಾತನಾಡಿದ್ದಾರೆ. ವೀಡಿಯೊದಲ್ಲಿ, ಅವರ ತಂಡದ ಸದಸ್ಯರನ್ನು ಟೆಸ್ಟ್ ಮಾಡುತ್ತಿರುವುದನ್ನು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ವಿತರಿಸಲಾಗುತ್ತಿರುವುದನ್ನು ಕಾಣಬಹುದು.

ವೀಡಿಯೊದ ವಿವರಣೆಯಲ್ಲಿ, "ನಮಸ್ಕಾರ ಸ್ನೇಹಿತರೇ! ನಿಮಗೆಲ್ಲರಿಗೂ ತಿಳಿದಿರುವಂತೆ, ಕೆಲವು ದಿನಗಳ ಹಿಂದೆ ನನಗೆ ಕೊರೊನಾ ಸೋಂಕು ತಗುಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದೆ. ಮಾರ್ಚ್ 13, 2021 ರ ಬೆಳಿಗ್ಗೆ, ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತು ಮತ್ತು ಎಲ್ಲಾ ಕೆಲಸಗಳು ನಿಂತುಹೋದವು. ಇನ್ನೂ ಕೆಟ್ಟದೆಂದರೆ ನನ್ನ ಕಾರಣದಿಂದಾಗಿ ನನ್ನ ಇಡೀ ಬಿಯರ್‌ಬೈಸೆಪ್ಸ್ ತಂಡವು ಸಹ ಕೊರೊನಾ ಅಪಾಯಕ್ಕೆ ಸಿಲುಕಬಹುದು" ಎಂದು ಬರೆಯಲಾಗಿದೆ.

ಇನ್ನು ನಾವು ಸದ್ಯ ಆಗುತ್ತಿರುವ ವಿವಾದ ಮತ್ತು ಕಾರ್ಯಕ್ರಮದ ಹೇಳಿಕೆಗಳ ಕುರಿತು ಪ್ರತಿಕ್ರಿಯೆಯ ವೀಡಿಯೊವನ್ನು ರಣವೀರ್ ಮಾಡಿದ್ದಾರೆಯೆ ಎಂದು ಹುಡುಕಿದ್ದೇವೆ. ಆಗ ಫೆಬ್ರವರಿ 10 ರಂದು, ರಣವೀರ್ ಅಲ್ಲಾಬಾಡಿಯಾ ಎಕ್ಸ್​ನಲ್ಲಿ ಕ್ಷಮೆಯಾಚಿಸುವ ವೀಡಿಯೊವನ್ನು ಅಪ್ಲೋಡ್ ಮಾಡಿರುವುದು ಸಿಕ್ಕಿದೆ. ಆದರೆ, ಇದು ವೈರಲ್ ವೀಡಿಯೊಕ್ಕಿಂತ ಭಿನ್ನವಾಗಿದೆ. "ಇಂಡಿಯಾಸ್ ಗಾಟ್ ಲ್ಯಾಟೆಂಟ್​ನಲ್ಲಿ ನಾನು ಹಾಗೆ ಹೇಳಬಾರದಿತ್ತು. ಕ್ಷಮಿಸಿ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಈ ವೀಡಿಯೊದಿಂದ ಕೆಲ ಭಾಗಗಳನ್ನು ತೆಗೆದುಹಾಕುವಂತೆ ತಯಾರಕರನ್ನು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಆದ್ದರಿಂದ, ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನ್ಯೂಸ್‌ಮೀಟರ್ ತೀರ್ಮಾನಿಸಿದೆ.

Claim Review:ರಣವೀರ್ ಅಲ್ಲಾಬಾಡಿಯಾ ಅಳುತ್ತಾ ಕ್ಷಮೆಯಾಚಿಸುವುದು ವೀಡಿಯೊದಲ್ಲಿದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಈ ಹೇಳಿಕೆ ಸುಳ್ಳು. ಈ ವೀಡಿಯೊ ಕ್ಲಿಪ್ 2021 ರಲ್ಲಿ ಅವರು ಕೋವಿಡ್-19 ಪಾಸಿಟಿವ್ ಆಗಿದ್ದಾಗ ಮಾತನಾಡಿದ್ದಾಗಿದೆ.
Next Story