ಹೈದರಾಬಾದ್: Cars: 26 Km ಮೈಲೇಜ್ ಮತ್ತು ಬೆಲೆ ಕೇವಲ 5 ಲಕ್ಷ ಮಾತ್ರ, 8 ಆಸನಗಳ ಈ ಕಾರಿಗೆ ಭರ್ಜರಿ ಡಿಮ್ಯಾಂಡ್- ಹೀಗೊಂದು ಶೀರ್ಷಿಕೆ ನೀಡಿದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ ಈ ಸುದ್ದಿ “ಅಪೂರ್ಣ ಮಾಹಿತಿ” ಅಥವಾ ಓದುಗರನ್ನು ದಾರಿ ತಪ್ಪಿಸುವಂಥ ವಿವರಗಳನ್ನು ಹೊಂದಿದೆ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
ಈ ಸುದ್ದಿಯನ್ನು ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.
Fact Check
ಈಗ ವೈರಲ್ ಆಗಿರುವ ಸುದ್ದಿಯ ಶೀರ್ಷಿಕೆಯಲ್ಲಿ ಕೇವಲ 5 ಲಕ್ಷ ಬೆಲೆಯ ಕಾರು 26 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದಿದೆ. ಅಂದ ಹಾಗೆ ಈ ಶೀರ್ಷಿಕೆಯಲ್ಲಿ ಎರಡು ಬೇರೆ ವಿಚಾರಗಳನ್ನು ಒಟ್ಟು ಮಾಡಿ ನೀಡಲಾಗಿದೆ. ಇದು ಮಾರುತಿ ಇಕೋ ಕಾರಿನ ಬಗೆಗಿನ ಮಾಹಿತಿ ಆಗಿದೆ. ಮಾರುತಿ ಸುಝುಕಿ ಇಂಡಿಯಾದ ವೆಬ್ ಸೈಟ್ ನಲ್ಲಿಯೇ ಬೆಲೆ ಪರಿಶೀಲನೆ ಮಾಡಿದಾಗ ಕರ್ನಾಟಕದ ಕೆಂಗೇರಿಯಲ್ಲಿ ಮಾರುತಿ ಇಕೋ ಏಳು ಆಸನಗಳ ಪ್ರಯಾಣಿಕರ ಕಾರಿನ ಆರಂಭಿಕ ಎಕ್ಸ್ ಶೋ ರೂಮ್ ಬೆಲೆ 5,26,948 ರೂಪಾಯಿ (ಐದು ಲಕ್ಷದ ಇಪ್ಪತ್ತಾರು ಸಾವಿರ ರೂಪಾಯಿ) ಇದೆ. ಇದು ಪೆಟ್ರೋಲ್ ಎಂಜಿನ್. ಪೆಟ್ರೋಲ್ ಎಂಜಿನ್ ಮೈಲೇಜ್ (ಕಂಪನಿಯ ವೆಬ್ ಸೈಟ್ ನೀಡಿರುವಂತೆ- ಕೆಲವು ಷರತ್ತುಗಳು ಅನ್ವಯಿಸಿ) ಪ್ರತಿ ಲೀಟರ್ ಗೆ 19.71 ಕಿಲೋಮೀಟರ್ ಇದೆ. ಇದೇ ವಾಹನದ ಆನ್ ರೋಡ್ ಬೆಲೆ 6,43,178 ರೂಪಾಯಿ (ಆರು ಲಕ್ಷದ ನಲವತ್ಮೂರು ಸಾವಿರ) ಇದೆ. ಈ ಮಾಹಿತಿ ಕಾರ್ ದೇಖೋ.ಕಾಮ್ ನಲ್ಲಿ ಲಭ್ಯ ಇದೆ.
ಇನ್ನು ಇಪ್ಪತ್ತಾರು ಕಿಲೋಮೀಟರ್ ಮೈಲೇಜ್ ನೀಡುವಂಥ ಕಾರು ಅಂದರೆ ಅದು ಸಿಎನ್ ಜಿ ವೇರಿಯಂಟ್. ಅದರ ಎಕ್ಸ್ ಶೋ ರೂಮ್ ಬೆಲೆ ರೂ. 6,52,948 ( ಆರು ಲಕ್ಷದ ಐವತ್ತೆರಡು ಸಾವಿರ ರೂಪಾಯಿ) ಇದೆ. ಇನ್ನು ಈ ಕಾರಿನ ಆನ್ ರೋಡ್ ಬೆಲೆ 7,94,579 ರೂಪಾಯಿ (ಏಳು ಲಕ್ಷದ ತೊಂಬತ್ನಾಲ್ಕು ಸಾವಿರ) ಇದೆ.
ಸುದ್ದಿಯ ಶೀರ್ಷಿಕೆಯಲ್ಲಿ ಎಂಟು ಆಸನದ ಕಾರು ಎಂದಿದೆ. ಆದರೆ ಇಕೋ ಕಾರಿನಲ್ಲಿ ಇರುವುದು ಐದು ಅಥವಾ ಏಳು ಆಸನಗಳು ಮಾತ್ರ. ಈ ಮಾಹಿತಿಯನ್ನು ಮಾರುತಿ ಸುಝಕಿ ಇಂಡಿಯಾ ವೆಬ್ ಸೈಟ್ ನಲ್ಲಿ ನೋಡಬಹುದು.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಂತೆ ಮಾರುತಿ ಸುಝುಕಿ ಇಕೋ ಕಾರಿನ ಯಾವ ವೇರಿಯಂಟ್ ಎಕ್ಸ್ ಶೋ ರೂಮ್ ಬೆಲೆ ಕೂಡ ಐದು ಲಕ್ಷ ಇಲ್ಲ. ಇನ್ನು ಇಪ್ಪತ್ತಾರು ಕಿಲೋಮೀಟರ್ ಮೈಲೇಜ್ ನೀಡುವ ಸಿಎನ್ ಜಿ ಕಾರಿನ ಎಕ್ಸ್ ಶೋ ರೂಮ್ ಬೆಲೆಯೇ 6,52,948 ರೂಪಾಯಿ ಇದೆ. ಎಂಟು ಆಸನದ ಕಾರು ಇಕೋದಲ್ಲಿ ಇಲ್ಲ.
Conclusion
ಅಲ್ಲಿಗೆ 26 Km ಮೈಲೇಜ್ ಮತ್ತು ಬೆಲೆ ಕೇವಲ 5 ಲಕ್ಷ ಮಾತ್ರ, 8 ಆಸನಗಳ ಈ ಕಾರಿಗೆ ಭರ್ಜರಿ ಡಿಮ್ಯಾಂಡ್- ಎಂಬ ವೈರಲ್ ಆದ ಸುದ್ದಿಯು ಅಪೂರ್ಣ ಮಾಹಿತಿ, ದಾರಿ ತಪ್ಪಿಸುವಂಥ ವಿವರಗಳನ್ನು ಒಳಗೊಂಡಿದೆ.