3 ಲಕ್ಷಕ್ಕೆ 35 ಕಿಲೋಮೀಟರ್ ಮೈಲೇಜ್ ಬರುವಂಥ ಕಾರು ಸಿಗುತ್ತದೆ ಎಂಬುದು ತಪ್ಪು ಮಾಹಿತಿ
ಮೂರು ಲಕ್ಷ ರೂಪಾಯಿಗೆ ಮೂವತ್ತೈದು ಕಿಲೋಮೀಟರ್ ಮೈಲೇಜ್ ನೀಡುವ ಕಾರು ಸಿಗುತ್ತದೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ ಅದರಲ್ಲಿರುವ ಬಹುತೇಕ ಮಾಹಿತಿ ಉತ್ಪ್ರೇಕ್ಷೆಯಿಂದ ಕೂಡಿದೆ ಹಾಗೂ ಅಷ್ಟು ಮೊತ್ತಕ್ಕೆ ಸುದ್ದಿಯಲ್ಲಿ ಪ್ರಸ್ತಾವ ಮಾಡಿರುವ ಕಾರಿನ ಮಾಡೆಲ್ ಸಿಗುವುದೇ ಇಲ್ಲ.
By Srinivasa Mata Published on 29 Aug 2023 12:49 PM ISTಹೈದರಾಬಾದ್: 3 ಲಕ್ಷಕ್ಕೆ 35 Km ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಮಾರುತಿ, ಒಂದೇ ದಿನದಲ್ಲಿ 1 ಲಕ್ಷ ಬುಕಿಂಗ್- ಹೀಗೊಂದು ಶೀರ್ಷಿಕೆ ನೀಡಿ, ಸುದ್ದಿಯೊಂದು ಮಾಡಲಾಗಿದೆ. ಅದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನ್ಯೂಸ್ ಮೀಟರ್ ‘ಫ್ಯಾಕ್ಟ್ ಚೆಕ್’ ಮಾಡಿದ್ದು, ಇದರಲ್ಲಿನ ಮಾಹಿತಿ ಅಪೂರ್ಣವಾಗಿದೆ ಹಾಗೂ ತಪ್ಪಾಗಿದೆ ಎಂದು ಕಂಡುಬಂದಿದೆ. ವಾಹನಗಳ ಬೆಲೆಯ ವಿವರ, ಅದಕ್ಕೆ ಸಂಬಂಧಿಸಿದ ಮಾಹಿತಿ ತಪ್ಪಾಗಿ ನೀಡಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Fact Check
ಸುದ್ದಿಯಲ್ಲಿ ಪ್ರಸ್ತಾವ ಮಾಡಿರುವುದು ಮಾರುತಿ ಆಲ್ಟೋ 800 ಕಾರಿನ ಬಗ್ಗೆ. ಈ ಕಾರಿನ ಕುರಿತು ಮಾರುತಿ ಸುಝಕಿ ಇಂಡಿಯಾ ಲಿಮಿಟೆಡ್ ನ ಅಧಿಕೃತ ವೆಬ್ ಸೈಟ್ ನಲ್ಲೇ ಲಭ್ಯ ಇರುವಂಥ ಬೆಲೆಯ ಬಗೆಗಿನ ಮಾಹಿತಿ ಈ ಕೆಳಕಂಡಂತೆ ಇದೆ:
ಆಲ್ಟೋ ಎಸ್ ಟಿಡಿ (ಒ) ದೆಹಲಿಯಲ್ಲಿನ ಎಕ್ಸ್ ಶೋ ರೂಮ್ ಬೆಲೆ - 3,54,000 ರೂ.
ಆಲ್ಟೋ ಎಲ್ ಎಕ್ಸ್ ಐ (ಒ) ದೆಹಲಿಯಲ್ಲಿನ ಎಕ್ಸ್ ಶೋ ರೂಮ್ ಬೆಲೆ - 4,23,000 ರೂ.
ಆಲ್ಟೋ ವಿಎಕ್ಸ್ (ಐ) ದೆಹಲಿಯಲ್ಲಿನ ಎಕ್ಸ್ ಶೋ ರೂಮ್ ಬೆಲೆ - 4,43,000 ರೂ.
ಆಲ್ಟೋ ವಿಎಕ್ಸ್ ಐ + ದೆಹಲಿಯಲ್ಲಿನ ಎಕ್ಸ್ ಶೋ ರೂಮ್ ಬೆಲೆ - 4,56,000 ರೂ.
ಆಲ್ಟೋ ಎಲ್ ಎಕ್ಸ್ ಐ (ಒ) ಸಿಎನ್ ಜಿ ದೆಹಲಿಯಲ್ಲಿನ ಎಕ್ಸ್ ಶೋ ರೂಮ್ ಬೆಲೆ - 5,13,000 ರೂ.
ಇನ್ನು ಈ ಲೇಖನದಲ್ಲಿ ಪ್ರಸ್ತಾವ ಮಾಡಿದಂತೆ 35 ಕಿಲೋಮೀಟರ್ ಮೈಲೇಜ್ ನೀಡುವ ಆಲ್ಟೋ ಕಾರಿನ ಮಾಡೆಲ್ ಯಾವುದೂ ಇಲ್ಲ. ಅಧಿಕೃತವಾಗಿ ಅದರ ವೆಬ್ ಸೈಟ್ ನಲ್ಲಿ ಸಿಎನ್ ಜಿ ಮಾಡೆಲ್ ಬಗ್ಗೆ ತಿಳಿಸಿದ್ದು, ಮೈಲೇಜ್ 31.59km/kg# (ಕಿಲೋಮೀಟರ್ ಕೇಜಿಗೆ) ಎಂದು ತಿಳಿಸಲಾಗಿದೆ. ಪೆಟ್ರೋಲ್ 22.05km/l* (ಕಿಲೋಮೀಟರ್ ಲೀಟರ್ ಗೆ) ಎಂದು ತಿಳಿಸಲಾಗಿದೆ. ಇನ್ನು ಇಷ್ಟು ಗರಿಷ್ಠ ಮೈಲೇಜ್ ಬರುವುದಕ್ಕೇ ಕೆಲವು ಷರತ್ತುಗಳು ಅಥವಾ ನಿರ್ದಿಷ್ಟ ಸನ್ನಿವೇಶಗಳಲ್ಲಿ ಮಾತ್ರ ಎಂಬುದನ್ನು ಕಂಪನಿ ಹೇಳುತ್ತದೆ.
ಇನ್ನು ಒಂದೇ ದಿನದಲ್ಲಿ ಒಂದು ಲಕ್ಷ ಕಾರು ಬುಕ್ಕಿಂಗ್ ಆದ ಬಗ್ಗೆ ಯಾವುದೇ ನಿರ್ದಿಷ್ಟ ಮೂಲದಿಂದ ಮಾಹಿತಿ ಸಿಗುತ್ತಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಸುದ್ದಿಯಲ್ಲೂ ಒಂದು ಲಕ್ಷ ಬುಕ್ಕಿಂಗ್ ಆದ ಮಾಹಿತಿಯನ್ನು ಯಾವ ಮೂಲದಿಂದ ತಿಳಿದುಬಂದಿದೆ ಎಂದು ಸಹ ತಿಳಿಸಿಲ್ಲ. ಉದಾಹರಣೆಗೆ ಸ್ವತಃ ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ ತಿಳಿಸಬೇಕು ಅಥವಾ ಬೇರೆ ಯಾವುದಾದರೂ ಅಧಿಕೃತ ಮೂಲಗಳು ತಿಳಿಸಬೇಕು. ಅಂಥದ್ದು ಯಾವುದೂ ಮಾಹಿತಿ ಮೂಲ ಉಲ್ಲೇಖಿಸಿಲ್ಲ.
ಇಲ್ಲಿ ನೀಡಲಾಗಿರುವ ಬೆಲೆ ಎಕ್ಸ್ ಶೋ ರೂಮ್ ಆಗಿರುತ್ತದೆ. ಇದರ ಜತೆಗೆ ಇನ್ನೂ ಹೆಚ್ಚಿಗೆ ದರಕ್ಕೆ ಸೇರ್ಪಡೆ ಆಗುವುದು ಏನೇನು ಎಂಬ ಬಗ್ಗೆ ಕಾರ್ ದೇಖೋ.ಕಾಮ್ ನಲ್ಲಿ ಮಾಹಿತಿ ಇದೆ. ಬೆಂಗಳೂರಿಗೆ ಅನ್ವಯ ಆಗುವಂತೆ ಸಿಎನ್ ಜಿ ಮಾದರಿಯ ಆಲ್ಟೋ 800 ಕಾರಿನ ಬೆಲೆ ಈ ಕೆಳಕಂಡಂತೆ ಇದೆ.
ಆಲ್ಟೋ ಎಲ್ ಎಕ್ಸ್ ಐ (ಒ) ಸಿಎನ್ ಜಿ ದೆಹಲಿಯಲ್ಲಿನ ಎಕ್ಸ್ ಶೋ ರೂಮ್ ಬೆಲೆ - 5,13,000 ರೂ.
ಆರ್ ಟಿಒ 79,721
ಇನ್ಷೂರೆನ್ಸ್ 26,761
ಇತರೆ 600
ಆಪ್ಷನಲ್ 29,739
ಆನ್ ರೋಡ್ ದರ 6,20,082*
ಇಲ್ಲಿ ತಿಳಿಸಿರುವ ದರ ಕೂಡ ಒಂದು ಶೋ ರೂಮ್ ನಿಂದ ಮತ್ತೊಂದಕ್ಕೆ ಬೇರೆ ಆಗುತ್ತದೆ. ಬಣ್ಣ ಹಾಗೂ ಇತರ ಫೀಚರ್ ಅಥವಾ ಇತರ ಕಾರಣಗಳಿಂದಾಗಿ ಬದಲಾವಣೆ ಆಗುತ್ತದೆ. ಇನ್ನು ಆಫರ್ ಗಳನ್ನು ನೀಡಿದಲ್ಲಿ ಆಗ ಸಹ ದರ ಬದಲಾವಣೆ ಆಗುತ್ತದೆ.
Conclusion
ಒಟ್ಟಾರೆ ನೋಡಿದಾಗ ಮೂರು ಲಕ್ಷ ರೂಪಾಯಿಗೆ ಮೂವತ್ತೈದು ಕಿಲೋಮೀಟರ್ ಮೈಲೇಜ್ ನೀಡುವ ಕಾರು ದೊರೆಯುತ್ತದೆ ಎಂಬುದು ತಪ್ಪು ಮಾಹಿತಿ ಹಾಗೂ ದಾರಿ ತಪ್ಪಿಸುವಂಥದ್ದು. ಅಪೂರ್ಣ ಮಾಹಿತಿಯನ್ನು ನೀಡಿ, ಜನರ ದಾರಿ ತಪ್ಪಿಸಲಾಗುತ್ತಿದೆ ಎಂಬುದು ತಿಳಿದುಬರುತ್ತದೆ.