ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ಭರವಸೆ ಈಡೇರಿಸಲು ಹಣವಿಲ್ಲ ಎಂದು ಹೇಳಿದರೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಈಡೇರಿಸಲು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ.

By Kumar S  Published on  19 Dec 2023 7:04 AM GMT
ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ಭರವಸೆ ಈಡೇರಿಸಲು ಹಣವಿಲ್ಲ ಎಂದು ಹೇಳಿದರೆ?

ವಾದ

ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಹಣವನ್ನು ಎಲ್ಲಿಂದ ತರಲಿ? ಚುನಾವಣೆ ಸಂದರ್ಭದಲ್ಲಿ ಹೇಳಿದ್ದಷ್ಟೆ ಎಂದು ಹೇಳಿದ್ದಾರೆ.

ವಾಸ್ತವ

ವೈರಲ್ ವಿಡಿಯೋದಲ್ಲಿ ಯಡಿಯೂರಪ್ಪನವರ ಮಾತುಗಳನ್ನು ಅಣಕ ಮಾಡಿ, ಉಲ್ಲೇಖಿಸಿದ್ದು, ತಪ್ಪಾಗಿ ಬಿಂಬಿಸಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಸರ್ಕಾರದಲ್ಲಿ ಹಣವಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಸಿದ್ದರಾಮಯ್ಯನವರು," ಎಲ್ಲಿಂದ ತರಲಿ ದುಡ್ಡು, ಎಲ್ಲಿಂದ ತರೋದು ದುಡ್ಡನ್ನ. ಏನೋ ಚುನಾವಣೆಯಲ್ಲಿ ಹೇಳಿರ್ತೀವಪ್ಪ, ಹೇಳಿದಂತೆ ನಡೆದುಕೊಳ್ಳೋಕೆ ಆಗುತ್ತಾ?" ಎಂದು ಪ್ರಶ್ನಿಸಿದ್ದಾರೆ.

ಶಕುಂತಲಾ ನಟರಾಜ್ ಅವರು ಈ ವಿಡಿಯೋ ತುಣುಕನ್ನು , "ಮತ್ತೆ ಅದೇನೋ " ನುಡಿದಂತೆ ನಡೆದಿದ್ದೇವೆ" ಅಂತ ಉದ್ದುದ್ದ ಡೈಲಾಗ್ ಹೊಡಿತಿರಲ್ಲ. ಅದೇನು ಕತೆ?" ಎಂಬ ಸಾಲುಗಳೊಂದಿಗೆ ಟ್ವೀಟ್ ಮಾಡಿದ್ದಾರೆ.


ಮೋದಿ ಗೆಲ್ಲಿಸಿ ದೇಶ ಉಳಿಸಿ ಎಂಬ ಫೇಸ್‌ಬುಕ್‌ ಕೂಡ ಈ ವಿಡಿಯೋ ಹಂಚಿಕೊಂಡಿದೆ. " ಮುಗ್ಧ ಜನಗಳಿಗೆ ಐದು ಗ್ಯಾರಂಟಿಗಳ ಆಸೆ ತೋರಿಸಿ ಈಗ ಎಲ್ಲಿಂದ ತರ್ಲೆ ದುಡ್ಡು ಅಂತ ಕೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಏನು ಹೇಳಬೇಕು. ಇದು ಜನಗಳಿಗೆ ಮಾಡಿರುವ ಮೋಸ ಅಲ್ಲವೇ. ನಾನು ಐದು ಗ್ಯಾರಂಟಿ ಕೊಡದೆ ಇದ್ರೆ ಒಂದು ನಿಮಿಷಕೂಡಾ ಅಧಿಕಾರದಲ್ಲಿ ಇರುವುದಿಲ್ಲ ಅಂತ ಜನಗಳಿಗೆ ವಚನ ಕೊಟ್ಟಿದ್ದು ಏನಾಯ್ತು?" ಎಂದು ಪ್ರಶ್ನಿಸಲಾಗಿದೆ.

ಯಾದಗಿರಿ ಬಿಜೆಪಿ ಯುವ ಮುಖಂಡ ಮಹೇಶ್‌ ರೆಡ್ಡಿ ಮುದ್ನಾಳ್ ಅವರು ಈ ವಿಡಿಯೋ ಹಂಚಿಕೊಂಡಿದ್ದು, ನುಡಿದಂತೆ‌ ನಡೆದುಕೊಳ್ಳುವುದಕ್ಕೆ ಆಗುತ್ತಾ?' ಎಂದು ಹೇಳುವ ಮೂಲಕ ಕಾಂಗ್ರೆಸ್‌ ಹೇಳುವುದೆಲ್ಲ ಪ್ರಚಾರಕ್ಕಾಗಿ ಎಂದು ಸಿದ್ದರಾಮಯ್ಯ ಅವರು ಸಾಬೀತು ಪಡಿಸಿದ್ದಾರೆ. 'ನುಡಿದಂತೆ ನಡೆಯುವ ಸರ್ಕಾರ ನಮ್ಮದು' ಎಂದು ಬೊಬ್ಬೆ ಹೊಡೆಯುವ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಹೇಳುವ ಮೂಲಕ ತಮ್ಮ ನಿಜ ಬಣ್ಣ ಬಯಲು ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡುವ ವಿಚಾರವಾಗಿ ಅಧಿವೇಶನದಲ್ಲಿ ಮಾತನಾಡುವ ವೇಳೆ ಚುನಾವಣೆ ಸಂದರ್ಭದಲ್ಲಿ ಏನೋ ಹೇಳಿರುತ್ತೇವೆ. ಹೇಳಿದಂತೆ ನಡೆದುಕೊಳ್ಳುವುದಕ್ಕೆ ಆಗುತ್ತಾ? ಸಾಲ ಮನ್ನಾ ಮಾಡಲು ದುಡ್ಡು ಎಲ್ಲಿಂದ ತರಲಿ? ಎಂದು ಹೇಳುವ ಮೂಲಕ ಕಾಂಗ್ರೆಸ್ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಸುಳ್ಳು ಆಶ್ವಾಸನೆ ನೀಡುತ್ತದೆ ಎಂದು ಸಿದ್ದರಾಮಯ್ಯ ಅವರೇ ಬಯಲು ಮಾಡಿದ್ದಾರೆ" ಎಂಬ ದೀರ್ಘ ಟಿಪ್ಪಣಿ ಬರೆದಿದ್ದಾರೆ.


ಈ ವಿಡಿಯೋವನ್ನು ತೆಲಂಗಾಣದ ಮಾಜಿ ಸಚಿವ ಬಿಆರ್‍ಎಸ್‌ ನಾಯಕ ಕೆ ಟಿ ರಾಮರಾವ್ ಕೂಡ ಟ್ವೀಟ್ ಮಾಡಿದ್ದಾರೆ.

"ಚುನಾವಣಾ ಆಶ್ವಾಸನೆ/ ಗ್ಯಾರಂಟಿಗಳನ್ನು ನೀಡಲು ಹಣವಿಲ್ಲ ಎಂದ ಕರ್ನಾಟಕ ಮುಖ್ಯಮಂತ್ರಿ. ಇದು, ಚುನಾವಣೆಯಲ್ಲಿ ಯಶಸ್ವಿಯಾಗಿ ಜನರಿಗೆ ಮಂಕುಬೂದಿ ಎರಚಿಸಿದ ಮೇಲೆ ತೆಲಂಗಾಣ ಎದುರಿಸುವ ಭವಿಷ್ಯವೆ?" ಇಂತಹ ವಿಲಕ್ಷಣ ಹೇಳಿಕೆ ನೀಡುವ ಮೊದಲು ಪ್ರಾಥಮಿಕ ಸಂಶೋಧನೆ ಮತ್ತು ಯೋಜನೆಯನ್ನು ಮಾಡಬೇಕಿತ್ತಲ್ಲವೆ?" ಎಂದು ಪ್ರಶ್ನಿಸಿ ವಿಡಿಯೋ ಹಂಚಿಕೊಂಡಿದ್ದಾರೆ.


ತೆಲುಗಿನ ಟಿಪ್ಪಣಿಗಳೊಂದಿಗೆ 12 ಸೆಕೆಂಡ್‌ನ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

ಫ್ಯಾಕ್ಟ್ ಚೆಕ್

ವೈರಲ್ ಆಗಿರುವ ಸಿದ್ದರಾಮಯ್ಯನವರ ವಿಡಿಯೋ ವಾಸ್ತವದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತುಗಳನ್ನು ಅಣಕವಾಡಿದ್ದು.

ಪ್ರಾಥಮಿಕ ಪರಿಶೀಲಿನೆಯಿಂದ ನಮಗೆ ಈ ವೈರಲ್ ವಿಡಿಯೋ, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಆಡಿದ ಮಾತುಗಳು ಎಂಬುದು ತಿಳಿಯಿತು. ಪೂರ್ಣ ವಿಡಿಯೋಕ್ಕಾಗಿ ಹುಡುಕಾಟ ನಡೆಸಿದಾಗ ನಮಗೆ ಈ ಕೆಳಗಿನ ಲಿಂಕ್ ದೊರೆಯಿತು.

ಡಿಸೆಂಬರ್ 15ರ ಅಧಿವೇಶನದ ನೇರ ಪ್ರಸಾರದ ಈ ವಿಡಿಯೋ ಆರುಗಂಟೆಗಳದ್ದಾಗಿದ್ದು, ಇದರಲ್ಲಿ 4.57.50 ರಿಂದ 4.59.40ರ ರ ನಡುವಿನಿಂದ ವೈರಲ್ ಆಗಿರುವ ವಿಡಿಯೋ ತುಣುಕನ್ನು ಆಯ್ದುಕೊಳ್ಳಲಾಗಿದೆ. ಇದರಲ್ಲಿ ಸಿದ್ದರಾಮಯ್ಯನವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವ ಮುನ್ನಾ ಸಾಲ ಮನ್ನಾದ ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿಯಾದ ಮೇಲೆ ಉಗ್ರಪ್ಪನವರು ಸಾಲಮನ್ನಾ ಪ್ರಶ್ನೆಯನ್ನು ಎತ್ತಿದಾಗ, "ಎಲ್ಲಿಂದ ತರ್ಲಿ ದುಡ್ಡು" ಎಂದು ಕೇಳಿದ್ದರು ಎಂದು ಯಡಿಯೂರಪ್ಪನವರ ಅಣಕ ಮಾಡಿ ಆಡಿದ ಮಾತುಗಳು ಎಂಬುದು ತಿಳಿಯುತ್ತದೆ.

ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸ್ವತಃ ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದು, " ನೀವು ಶೇರ್ ಮಾಡಿರುವ ತಿರುಚಿದ ವಿಡಿಯೋಗಳನ್ನು ನಂಬುವಷ್ಟು ರಾಜ್ಯದ ಜನ ಮೂರ್ಖರಲ್ಲ. ನಿಮ್ಮ ಗಮನಕ್ಕೆ ಇರಲಿ ಎಂದು ಪೂರ್ತಿ ವಿಡಿಯೋವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ?" ಎಂದು 1 ನಿಮಿಷ 48 ಸೆಕೆಂಡ್‌ಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ವೈರಲ್ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಡಿಯೋ ತಿರುಚಿದ್ದು, ತಪ್ಪು ಅಭಿಪ್ರಾಯ ರೂಪಿಸುವ ಉದ್ದೇಶದೊಂದಿಗೆ ವೈರಲ್ ಮಾಡಲಾಗಿದೆ ಎಂಬುದು ದೃಢಪಡುತ್ತದೆ.


Claim Review:Karnataka Cm Says no money to deliver guarantees assured during election
Claimed By:Social Media User
Claim Reviewed By:News Meter
Claim Source:Social Media
Claim Fact Check:False
Next Story