ಮೈಸೂರಿನ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಯ ಮೇಲೆ ಜಿಹಾದಿಗಳು ನೀರು ಎರಚಿದರೆ?

ಅಂಧಕಾಸುರ ಸಂಹಾರದ ದಿನಾಚರಣೆ ವೇಳೆ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಜಿಹಾದಿಗಳು ನೀರು ಎರಚಿದರು ಎನ್ನುವ ವಿಡಿಯೋ ವೈರಲ್ ಆಗಿದೆ.

By Kumar S  Published on  30 Dec 2023 11:37 AM GMT
ಮೈಸೂರಿನ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವ ಮೂರ್ತಿಯ ಮೇಲೆ ಜಿಹಾದಿಗಳು ನೀರು ಎರಚಿದರೆ?

ವಾದ

ಅಂಧಕಾಸುರ ಸಂಹಾರದ ದಿನದ ಆಚರಣೆಯ ಸಂದರ್ಭದಲ್ಲಿ ಪಾರ್ವತಿ-ಶಿವನ ಉತ್ಸವ ಮೂರ್ತಿ ಮೆರವಣಿಗೆಯ ವೇಳೆ ಜಿಹಾದಿಗಳು ಮೂರ್ತಿಗೆ ನೀರು ಎರಚಿ ಅವಮಾನಿಸಿದರು.

ವಾಸ್ತವ

ಅಂಧಕಾಸುರ ದಿನದ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದ ದಲಿತ ಸಂಘರ್ಷ ಸಮಿತಿ ಸದಸ್ಯರು ಉತ್ಸವ ಮೂರ್ತಿಯ ಮೇಲೆ ನೀರು ಎರಚಿದ್ದರು. ಎಫ್‌ಐಆರ್‍‌ ದಾಖಲಾಗಿದೆ.


ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಮಂಗಳವಾರ ಅಂಧಕಾಸುರ ಸಂಹಾರ ದಿನ ಆಚರಣೆ ನಡೆಯಿತು. ಈ ವೇಳೆ ತಾಂಡೇಶ್ವರ ಉತ್ಸವ ಮೂರ್ತಿಗಳ ಮೆರವಣಿಗೆ ನಂಜುಂಡೇಶ್ವರ ದೇವಸ್ಥಾನದ ಬಳಿ ಇರುವ ರಾಕ್ಷಸ ಮಂಟಪದ ಮುಂದೆ ಸಾಗುವಾಗ ಮೂರ್ತಿಯ ಮೇಲೆ ಜಿಹಾದಿಗಳು ಎಂಜುಲು ಮಾಡಿದ ನೀರನ್ನು ಎರಚಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೋ ವೈರಲ್ ಆಗಿದೆ.

ರಘುಮೂರ್ತಿ ಎಂಬುವರು ತಮ್ಮ ಎಕ್ಸ್‌ ಖಾತೆಯಿಂದ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಬಾಟಲಿಯಿಂದ ನೀರನ್ನು ಉತ್ಸವ ಮೂರ್ತಿ ಮೇಲೆ ಎರಚುತ್ತಿರುವುದು ಕಾಣಿಸುತ್ತಿದೆ. ರಘುಮೂರ್ತಿ ವಿಡಿಯೋದೊಂದಿಗೆ, "ನಂಜನಗೂಡು ಶ್ರೀ ಕಂಟೇಶ್ವರಿನಿಗೆ ಅವಮಾನ. ಕೆಲ ಜಿಹಾದಿಗಳು ಎಂಜಲು ನೀರು ಎರಚಿ ಅಪಮಾನಿಸಿದ್ದಾರೆ, ಅಲ್ಲಿನ ಹಿಂದೂಗಳು ಇನ್ನಾ ಬದುಕಿದ್ದೀರಾ?" ಎಂದು ಬರೆದಿದ್ದಾರೆ.

ನಿರ್ಭಾವುಕ ಎಂಬ ಖಾತೆಯಿಂದ ಇಂಗ್ಲಿಷ್‌ನಲ್ಲಿ ಈ ಕುರಿತು ವಿಡಿಯೋದೊಂದಿಗೆ ಟ್ವೀಟ್ ಮಾಡಲಾಗಿದ್ದು, "ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ಉತ್ಸವಮೂರ್ತಿಯ ಮೇಲೆ ದುಷ್ಕರ್ಮಿಗಳು ಎಂಜಲು ನೀರು ಎರಚಿದರು "ಎಂದು ಬರೆದಿದ್ದಾರೆ.

ಇದನ್ನು ರೀ ಟ್ವೀಟ್‌ ಮಾಡಿರುವ ಶಾಸಕ, ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, " ಉತ್ಸವ ಮೂರ್ತಿಯ ಮೇಲೆ ದ್ವೇಷ ತೋರುವ ಕ್ರಿಯೆ ಅಸಹ್ಯಕರ ಹಾಗೂ ಒಪ್ಪಿಕೊಳ್ಳುವಂತಹದ್ದಲ್ಲ. ಈ ನಡವಳಿಕೆಯನ್ನು ಪ್ರಬಲವಾಗಿ ವಿರೋಧಿಸಬೇಕು. ಹಿಂದೂ ಧರ್ಮ ಮತ್ತು ಭಕ್ತರಪಾಲಿಗೆ ಅಪಾರ ಮಹತ್ವವನ್ನು ಹೊಂದಿರುವ ಪೂಜ್ಯ ನಂಜುಂಡೇಶ್ವರ ಸ್ವಾಮಿಯನ್ನು ಅಗೌರವಗೊಳಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು" ಎಂದು ಬರೆದಿದ್ದಾರೆ.

ಫ್ಯಾಕ್ಟ್‌ಚೆಕ್‌

ಮಂಗಳವಾರ ಡಿಸೆಂಬರ್ 26ರಂದು ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಾಗಿ ಮೊದಲು ಹುಡುಕಾಟ ನಡೆಸಿದೆವು. ಈ ವರದಿಗಳಲ್ಲಿ ನೀರು ಎರಚಿದ ಪ್ರಕರಣದಲ್ಲಿ ಅನ್ಯಧರ್ಮೀಯರ ಭಾಗಿಯಾಗಿರುವ ಯಾವುದೇ ಉಲ್ಲೇಖಗಳಿರಲಿಲ್ಲ. ಬದಲಿಗೆ ಇದು ದಲಿತ ಸಂಘರ್ಷ ಸಮಿತಿ ಸದಸ್ಯರ ಕೃತ್ಯ ಎನ್ನಲಾಗಿದ್ದು, ಐವರ ವಿರುದ್ಧ ಪ್ರಕರಣ ದಾಖಲಾಗಿದ್ದಾಗಿ ವರದಿಯಾಗಿತ್ತು.

ಟಿವಿ9 ವರದಿಯ ಪ್ರಕಾರ, ಅಂಧಕಾಸುರ ಸಂಹಾರ ದಿನದ ಅಂಗವಾಗಿ ನಂಜುಂಡೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ಆಯೋಜಿಸಲಾಗಿತ್ತು. ಅಂದು ನಂಜುಂಡೇಶ್ವರ ದೇವಸ್ಥಾನದ ಬಳಿ ಇರುವ ರಾಕ್ಷಸ ಮಂಟಪದ ಮುಂದೆ ಅಂಧಕಾಸುರ ಚಿತ್ರವಿರುವ ರಂಗೋಲಿಯನ್ನು ಬರೆಯಲಾಗಿತ್ತು.


ಅಂಧಕಾಸುರ ದಿನಾಚರಣೆಗೆ ದಲಿತ ಸಂಘರ್ಷ ಸಮಿತಿ ಸದಸ್ಯರು ವಿರೋಧ ವ್ಯಕ್ತ ಪಡಿಸಿ, ಈ ರಂಗೋಲಿಯನ್ನು ಅಳಿಸಿ ಹಾಕಲು ಯತ್ನಿಸಿದ್ದರು. ಇದು ನಂಜುಂಡೇಶ್ವರ ಭಕ್ತರು ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯರ ನಡುವೆ ಇದು ವಾಗ್ವಾದಕ್ಕೆ ಕಾರಣವಾಯಿತು. ಮೆರವಣಿಗೆಯ ವೇಳೆ ಇಬ್ಬರು ವ್ಯಕ್ತಿಗಳು ಉತ್ಸವ ಮೂರ್ತಿಯ ಮೇಲೆ ಬಾಟಲಿಯಿಂದ ನೀರು ಎರಚಿದರು. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಉತ್ಸವಮೂರ್ತಿಗೆ ನೀರು ಎರಚಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಅವರು ಬುಧವಾರ ನಂಜನಗೂಡು ಪೊಲೀಸ್‌ ಠಾಣೆಯಲ್ಲಿ, ಬಾಲರಾಜು, ನಾರಾಯಣ, ಅಭಿ, ನಾಗಭೂಷಣ ಮತ್ತು ನಟೇಶ್‌ ಎಂಬುವವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ ಎಂದು ವರದಿ ಹೇಳುತ್ತದೆ.

ನ್ಯೂಸ್‌ ಮೀಟರ್‍‌ ಜೊತೆಗೆ ಮಾತನಾಡಿದ ಶ್ರೀಕಂಠೇಶ್ವರ ದೇವಸ್ಥಾನದ ಕಾರ್ಯನಿರ್ವಹಾಕ ಅಧಿಕಾರಿ ಜಗದೀಶ್, ” ದುಷ್ಕೃತ್ಯ ಎಸಗಿದವರು ಯಾವ ಸಂಘಟನೆ, ಯಾವ ಹಿನ್ನೆಲೆಯವರು ಎಂಬುದು ತಿಳಿದಿಲ್ಲ. ಸ್ಥಳೀಯರ ಮೂಲಕ ಹೆಸರು ತಿಳಿದು ಅವರ ದೂರು ನೀಡಿದ್ದೇವೆ” ಎಂದು ದೂರಿನ ಪ್ರತಿಯನ್ನು ಹಂಚಿಕೊಂಡರು.

ಕನ್ನಡ ಪ್ರಭ ವರದಿಯ ಪ್ರಕಾರ, ಅಂಧಕಾಸುರ ಸಂಹಾರ ದಿನದಂದು ರಾಕ್ಷಸನ ಫ್ಲೆಕ್ಸ್‌ ಹಾಕುತ್ತಿದ್ದರು. ಈ ಬಾರಿ ರಂಗೋಲಿ ಬಿಡಿಸಲಾಗಿತ್ತು. ಉತ್ಸವಮೂರ್ತಿ ಹೊತ್ತವರು ರಂಗೋಲಿಯನ್ನು ತುಳಿದು ರಾಕ್ಷಸನ ಸಂಹಾರ ಮಾಡಿದ್ದಾಗಿ ಘೋಷಿಸುವುದು ಉದ್ದೇಶವಾಗಿತ್ತು. ಆದರೆ ಈ ಬಾರಿ ಅಂಧಕಾಸುರನ ಬದಲು ಮಹಿಷಾಸುರನ ರಂಗೋಲಿ ಬಿಡಿಸಿದ್ದಕ್ಕೆ ದಲಿತ ಸಂಘರ್ಷ ಸಮಿತಿ ಸದಸ್ಯರು ವಿರೋಧಿಸಿದ್ದರು. ತೆರವುಗೊಳಿಸುವುದಕ್ಕೆ ದೇವಸ್ಥಾನ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಒಪ್ಪದ ದೇವಸ್ಥಾನದ ಸಿಬ್ಬಂದಿ ಮೆರವಣಿಗೆ ಮುಂದುವರೆಸಿದ್ದರು. ಆಗ ಡಿಎಸ್‌ಎಸ್‌ ಸದಸ್ಯರು ನೀರಿನ ಎರಚಿದ್ದರು. ರಂಗೋಲಿಯನ್ನು ಅಳಿಸುವುದಕ್ಕಾಗಿ ನೀರು ಎರಚಿದ್ದೇ, ಹೊರತು ಮೂರ್ತಿಯನ್ನು ಅವಮಾನಿಸುವುದಕ್ಕಲ್ಲ ಎಂದು ಡಿಎಸ್‌ಎಸ್‌ ಸದಸ್ಯರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ದಾಖಲಾದ ಹೆಸರುಗಳು, ಸ್ಥಳೀಯ ವರದಿಗಳಲ್ಲಿ ಯಾವುದೇ ಮುಸ್ಲಿಮ್‌ ವ್ಯಕ್ತಿಯ ಹೆಸರು ಉಲ್ಲೇಖವಾಗದ ಹಿನ್ನೆಲೆಯಲ್ಲಿ ವೈರಲ್ ವಿಡಿಯೋ ಪ್ರತಿಪಾದಿಸಿದಂತೆ, ನೀರು ಎರಚಿದವರು ಮುಸ್ಲಿಮರಲ್ಲ, ಹಿಂದುಗಳೇ ಎಂಬುದು ದೃಢಪಡುತ್ತದೆ. ಹಾಗಾಗಿ ವೈರಲ್ ವಿಡಿಯೋ ಪ್ರತಿಪಾದನೆ ಸುಳ್ಳು.

Claim Review:Jihadists threw water on Srikantheswaraswamy Utsav Murthy in Nanjangud
Claimed By:Social Media User
Claim Reviewed By:News Meter
Claim Source:Social Media
Claim Fact Check:False
Next Story