ಕರ್ನಾಟಕ ಸರ್ಕಾರ ಆಯುಧಪೂಜೆಯಂದು ವಿಕಾಸಸೌಧದಲ್ಲಿ ಅರಿಶಿನ-ಕುಂಕುಮ ಬಳಸದಂತೆ ಆದೇಶಿಸಿದೆಯೇ?

ಕರ್ನಾಟಕ ಸರ್ಕಾರ ಆಯುಧ ಪೂಜೆಯ ದಿನ ವಿಧಾನಸೌಧದಲ್ಲಿ ಅರಿಶಿನ, ಕುಂಕುಮ ಬಳಸದಂತೆ ಆದೇಶಿಸಿರುವುದು ನಿಜವೆ? ಇಲ್ಲಿ ಫ್ಯಾಕ್ಟ್‌ಚೆಕ್‌

By Kumar S  Published on  19 Oct 2023 5:02 AM GMT
ಕರ್ನಾಟಕ ಸರ್ಕಾರ ಆಯುಧಪೂಜೆಯಂದು ವಿಕಾಸಸೌಧದಲ್ಲಿ ಅರಿಶಿನ-ಕುಂಕುಮ ಬಳಸದಂತೆ ಆದೇಶಿಸಿದೆಯೇ?

ವಾದ

ಕರ್ನಾಟಕ ಸರ್ಕಾರ ಆಯುಧ ಪೂಜೆಯ ದಿನ ಸರ್ಕಾರಿ ಕಚೇರಿಗಳಲ್ಲಿ ಅರಿಶಿನ-ಕುಂಕುಮ ಬಳಕೆ ನಿಷೇಧಿಸಿ ಆದೇಶ

ವಾಸ್ತವ

ಇದು ರಾಸಾಯನಿಕ ಮಿಶ್ರಿತ ಅರಿಶಿನ-ಕುಂಕುಮ ಬಳಸದಿರಲು ಹಿಂದಿನ ಸರ್ಕಾರದ ಆದೇಶವನ್ನೇ ಪುನಾವರ್ತಿಸಲಾಗಿದೆ.

ಬುಧವಾರ ಟ್ವೀಟ್‌ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳು ಆಯುಧಪೂಜೆಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶ ಕುರಿತು, ಇಂಡಿಯಾ ಮೈತ್ರಿಯಲ್ಲಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿರಬಹುದು. ಆದರೆ ಈ ನೆಲದ ಸಂಸ್ಕೃತಿ ದ್ವೇಷಿಸುವ ವಿಷಯದಲ್ಲಿ ಅವರು ಒಂದು ಎಂದು ಪ್ರತಿಪಾದಿಸಿ, ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರ ಆಯುಧ ಪೂಜೆಯ ಸಂದರ್ಭದಲ್ಲಿ ವಿಕಾಸಸೌಧ-ವಿಧಾನಸೌಧಗಳಲ್ಲಿ ಅರಿಶಿನ-ಕುಂಕುಮ ಕಡ್ಡಾಯವಾಗಿ ಬಳಸದಂತೆ ಆದೇಶಿಸಿದೆ ಎಂದು ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ.

ತೇಜಸ್ವಿಯವರ ಟ್ವೀಟ್‌ ಬಳಿಕ ಅನೇಕರು ಎಕ್ಸ್‌ (ಈ ಹಿಂದೆ ಟ್ವಿಟರ್‍‌) ಮತ್ತು ಫೇಸ್‌ಬುಕ್‌ ತಾಣಗಳಲ್ಲಿ ಈ ಕುರಿತು ಪೋಸ್ಟ್‌ ಮಾಡಿದ್ದಾರೆ.





ಫ್ಯಾಕ್ಟ್‌ಚೆಕ್‌

'ನ್ಯೂಸ್‌ ಮೀಟರ್‍‌' ಆದೇಶದಲ್ಲಿ ಉಲ್ಲೇಖವಾಗಿರುವ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ ಸರ್ಚ್ ಮಾಡಿದಾಗ, 2021ರ ಅಕ್ಟೋಬರ್‍‌ 12ರಂದು, 2022ರ ಸೆಪ್ಟೆಂಬರ್‍‌ 30ರಂದು, ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಆದೇಶ ಹೊರಡಿಸಿದ್ದು ತಿಳಿದು ಬಂತು.

2021ರ ಆದೇಶ ಪ್ರತಿ


2022ರ ಆದೇಶ ಪ್ರತಿ


ಎರಡೂ ಆದೇಶಗಳಲ್ಲಿ, "ವಿಧಾನಸೌಧ ಮತ್ತು ವಿಕಾಸ ಸೌಧ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ಆಯುಧ ಪೂಜೆ ನೆರವೇರಿಸುವಾಗ ಕಛೇರಿಯ ಒಳಗೆ/ಕಾರಿಡಾರ್‍‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿಯಾವುದೇ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಶಿನ/ಸುಣ್ಣ ಹಾಗೂ ಇನ್ನಿತರೆ ವಸ್ತುಗಳನ್ನು ಕಡ್ಡಾಯವಾಗಿ ಬಳಸದೆ ಈ ಮೂಲಕ ತಿಳಿಸಲಾಗಿದೆ" ಎಂಬ ಸಾಲಗಳು ಯಥಾವತ್ತಾಗಿ ಬರೆಯಲಾಗಿದೆ. ಇದೇ ಸಾಲುಗಳು ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಸರ್ಕಾರ ಹೊರಡಿಸಿರುವ ಆದೇಶದಲ್ಲೂ ಕಾಣಬಹುದು.

ಈ ಕುರಿತು 2022 ಆದೇಶವನ್ನು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಆಂದೋಲನ ಸುದ್ದಿ ತಾಣದಲ್ಲಿ ಪ್ರಕಟವಾದ ವರದಿ.

ಆಂದೋಲನ ಪತ್ರಿಕೆ



ಕನ್ನಡ ಪ್ರಭ ವರದಿ2020ರಲ್ಲಿ ಹೊರಡಿಸಿದ ಆದೇಶವನ್ನ ಕುರಿತು ಕನ್ನಡ ಪ್ರಭದಲ್ಲಿ ಪ್ರಕಟವಾದ ವರದಿ.


ಮುಖ್ಯಮಂತ್ರಿಯ ಸಿದ್ದರಾಮಯ್ಯನವರ ಅಧಿಕೃತ ಫೇಸ್‌ಬುಕ್‌ ತಾಣದಲ್ಲಿ 2021ರ ಬಿಜೆಪಿಯ ಆದೇಶ ಪತ್ರವನ್ನು ಪೋಸ್ಟ್‌ ಮಾಡಿದ್ದು, ಜೊತೆಗಿರುವ ಟಿಪ್ಪಣಿಯಲ್ಲಿ, " ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ.

ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ." ಎಂದು ಸ್ಪಷ್ಟಪಡಿಸಿದ್ದಾರೆ.


ಹಾಗಾಗಿ ಆಯುಧ ಪೂಜೆಯಂದು ವಿಧಾನಸೌಧ-ವಿಕಾಸಸೌಧಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಬಳಸಬಾರದು ಎಂಬ ಆದೇಶ ಕಾಂಗ್ರೆಸ್‌ ಸರ್ಕಾರದ್ದು ಎಂಬ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಪಾದನೆ ಸುಳ್ಳು.

Claim Review:Karnataka Government prohibited using Kumkum in Vidhanasoudha during Ayudha pooja
Claimed By:Social Media User
Claim Reviewed By:News Meter
Claim Source:Social Media
Claim Fact Check:False
Next Story