Fact Check: ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿ ಬಂದು ಬಿಡಿಸಿದ್ದು ನಿಜವೇ?: ಇಲ್ಲಿದೆ ನಿಜಾಂಶ
ಸ್ವಾತಂತ್ರ್ಯ ದಿನಾಚರಣೆಯ ದಿನ ಕೇರಳದಲ್ಲಿ ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿ ಬಂದು ಬಿಡಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
By Vinay Bhat Published on 18 Aug 2024 4:34 PM ISTClaim: ಕೇರಳದಲ್ಲಿ ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿ ಬಂದು ಬಿಡಿಸಿದೆ.
Fact: ಹಕ್ಕಿ ತ್ರಿವರ್ಣ ಧ್ವಜದ ಬಳಿ ಬಂದಂತೆ ಗೋಚರಿಸುವ ಕೋನದಿಂದ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದ್ದು, ಸಿಲುಕಿಕೊಂಡ ಧ್ವಜ ತೆರೆದುಕೊಳ್ಳುವುದಕ್ಕೂ ಹಕ್ಕಿಗೂ ಯಾವುದೆ ಸಂಬಂಧವಿಲ್ಲ.
ಸ್ವಾತಂತ್ರ್ಯ ದಿನಾಚರಣೆಯ ದಿನ ಕೇರಳದಲ್ಲಿ ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿ ಬಂದು ಬಿಡಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಈ ವೀಡಿಯೊ ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಈ ವೀಡಿಯೊದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಜನರ ಗುಂಪಿದೆ. ಧ್ವಜವನ್ನು ಮೇಲೆತ್ತಿ ಹಾರಿಸಲು ಮುಂದಾದಾಗ ಧ್ವಜವು ಕಂಬದ ಮೇಲ್ಭಾಗದಲ್ಲಿ ಸಿಲುಕಿಕೊಳ್ಳುತ್ತದೆ. ಅದೇ ಸಮಯದಲ್ಲಿ, ಒಂದು ಹಕ್ಕಿ ಧ್ವಜಸ್ತಂಭದ ಕಡೆಗೆ ಹಾರಿ ಬಂದು ಧ್ವಜವನ್ನು ಬಿಡಿಸಿ ಹೂವಿನ ದಳಗಳನ್ನು ಸುರಿಸುವಂತೆ ಕಾಣುತ್ತದೆ.
ಶಿಲ್ಪ ಎಂಬವರು ತನ್ನ ಎಕ್ಸ್ ಖಾತೆಯಲ್ಲಿ ಆಗಸ್ಟ್ 17, 2024 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ‘ಕೇರಳ - ರಾಷ್ಟ್ರಧ್ವಜ ಹಾರಿಸುವಾಗ ಮೇಲ್ಭಾಗದಲ್ಲಿ ಸಿಲುಕಿಕೊಂಡಿತು. ಎಲ್ಲಿಂದಲೋ ಬಂದು ಹಕ್ಕಿ ಇದನ್ನು ಬಿಡಿಸಿತು!!’ ಎಂದು ಬರೆದುಕೊಂಡಿದ್ದಾರೆ.
Kerala - National Flag got stuck at the top while hoisting. A bird came from nowhere and unfurled it!! ✨ pic.twitter.com/lRFR2TeShK
— Shilpa (@shilpa_cn) August 16, 2024
ಹಾಗೆಯೆ ಕನ್ನಡದ ಪ್ರಸಿದ್ಧ ಮಾಧ್ಯಮ ಟಿವಿ ವಿಕ್ರಮ ಕೂಡ ಇದೇ ವೀಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ‘ಕೇರಳದಲ್ಲಿ ನಮ್ಮ ರಾಷ್ಟ್ರ ಧ್ವಜ ತೆರೆಯದೆ ಸಿಕ್ಕಿಕೊಂಡಾಗ ಎಲ್ಲಿಂದಲೋ ಬಂದ ಹಕ್ಕಿಯೊಂದು ಧ್ವಜವನ್ನು ಬಿಡಿಸಿದ ಅತ್ಯಪರೂಪದ ಘಟನೆ...’ ಎಂಬ ಶೀರ್ಷಿಕೆ ನೀಡಿದೆ.
ಕೇರಳದಲ್ಲಿ ನಮ್ಮ ರಾಷ್ಟ್ರ ಧ್ವಜ ತೆರೆಯದೆ ಸಿಕ್ಕಿಕೊಂಡಾಗ ಎಲ್ಲಿಂದಲೋ ಬಂದ ಹಕ್ಕಿಯೊಂದು ಧ್ವಜವನ್ನು ಬಿಡಿಸಿದ ಅತ್ಯಪರೂಪದಘಟನೆ... pic.twitter.com/kqdkL0bnjz
— TV Vikrama (@tv_vikrama) August 17, 2024
ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಈ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದು, ಹಕ್ಕಿ ಬಂದು ಧ್ವಜವನ್ನು ಬಿಡಿಸಿದೆ ಎಂದು ಹೇಳಿಕೊಂಡಿದ್ದಾರೆ. ಇದೇರೀತಿಯ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ವಾಸ್ತವವಾಗಿ ಆ ಹಕ್ಕಿ ಧ್ವಜದ ಸಮೀಪವೂ ಬಂದಿಲ್ಲ. ಧ್ವಜಸ್ತಂಭದಿಂದ ದೂರದಲ್ಲಿರುವ ತೆಂಗಿನ ಮರದ ಗಡಿಯ ಮೇಲೆ ಬಂದು ಕುಳಿತಿದ್ದು ಧ್ವಜಸ್ತಂಭದ ಮೇಲೆ ಕುಳಿತಂತೆ ಕಾಣುತ್ತಿದೆಯಷ್ಟೆ.
ಈ ಕುರಿತು ನಾವು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ‘ಕೇರಳ ಹಕ್ಕಿ’ ಎಂಬ ಕೀವರ್ಡ್ ಮೂಲಕ ಸರ್ಚ್ ಮಾಡಿದೆವು. ಆಗ ಕರುನಾಡಿನ ಮಿನುಗುವ ನಕ್ಷತ್ರ ಎಂಬ ಎಕ್ಸ್ ಖಾತೆಯಲ್ಲಿ ಇದೇ ಘಟನೆಯ ಮತ್ತೊಂದು ಆಯಾಮದ ವೀಡಿಯೊ ಹಂಚಿಕೊಳ್ಳಲಾಗಿದೆ. ಇದಕ್ಕೆ ‘ಕೇರಳ : ಹಕ್ಕಿ & ದ್ವಜದ ಕಥೆಯ ನೈಜ ವಿಡಿಯೋ.’ ಎಂಬ ಶೀರ್ಷಿಕೆ ನೀಡಲಾಗಿದೆ.
ಕೇರಳ : ಹಕ್ಕಿ & ದ್ವಜದ ಕಥೆಯ ನೈಜ ವಿಡಿಯೋ. pic.twitter.com/VV8LJ5OzQC
— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) August 17, 2024
ಇನ್ನಷ್ಟು ಸ್ಪಷ್ಟತೆಗಾಗಿ ನಾವು ಎರಡೂ ವೀಡಿಯೊವನ್ನು ಕೊಲೆಜ್ ಮಾಡಿ ಸೂಕ್ಷ್ಮವಾಗಿ ಗಮನಿಸಿದ್ದೇವೆ. ಮೊದಲಿನ ವೀಡಿಯೊ ಮತ್ತು ಈಗಿನ ವೀಡಿಯೊ ಒಂದೇ ಆಗಿದ್ದು, ಆದರೆ ಎರಡೂ ಬೇರೆ ಬೇರೆ ಕಡೆಗಳಿಂದ ಚಿತ್ರೀಕರಿಸಲಾಗಿದೆ.
ಮೇಲಿರುವ ಮೊದಲ ವೀಡಿಯೊದಲ್ಲಿ ಹಕ್ಕಿಯೇ ಬಂದು ರಾಷ್ಟ್ರ ಧ್ವಜವನ್ನು ಸರಿಪಡಿಸುವ ರೀತಿಯಲ್ಲಿಕಾಣುತ್ತಿದೆ. ಬಲ ಭಾಗದಲ್ಲಿರುವ ಮತ್ತೊಂದು ವಿಡಿಯೋದಲ್ಲಿ ಧ್ವಜಾರೋಹಣ ನಡೆಯುವ ವೇಳೆ ರಾಷ್ಟ್ರಧ್ವಜ ತೆರೆಯಲು ಸ್ವಲ್ಪ ಹೊತ್ತು ತೆಗೆದುಕೊಂಡಿದೆ. ಆ ಸಂದರ್ಭದಲ್ಲಿ ಹಕ್ಕಿಯೊಂದು ಹಾರಿ ಬಂದು ಅಲ್ಲೇ ಇರುವ ತೆಂಗಿನ ಮರದ ಮೇಲೆ ಕೂರುತ್ತದೆ. ಅದೇ ವೇಳೆಗೆ ಧ್ವಜವೂ ತೆರೆದುಕೊಂಡಿದೆ. ಬಾವುಟ ಹಾರುತ್ತಿದ್ದಂತೆಯೇ ಹಕ್ಕಿಯೂ ತೆಂಗಿನ ಗರಿಯಿಂದ ಹಾರಿ ನಿರ್ಗರ್ಮಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಕುರಿತು ಖಚಿತಪಡಿಸಿಕೊಳ್ಳಲು ಧ್ವಜಾರೋಹಣ ವೇಳೆ ಇದ್ದವರನ್ನು ನೇರವಾಗಿ ಸಂಪರ್ಕಿಸಲು ಪ್ರಯತ್ನಿಸಿದೆವು. ಮಲಪ್ಪುರಂ ಜಿಲ್ಲೆಯ ಮಂಪತ್ ಮಾರಮಂಗಲಂ ಅಂಗನವಾಡಿಯ ಶಿಕ್ಷಕಿ ಉಮ್ಮುಕುಲಸು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅವರು ಹೇಳಿದ್ದು ಹೀಗೆ:
''ಸ್ವಾತಂತ್ರ್ಯ ದಿನದಂದು ಮಂಪಾಡ್ ಪಂಚಾಯತ್ ನ 7ನೇ ವಾರ್ಡ್ ಸದಸ್ಯೆ ಧ್ವಜಾರೋಹಣ ಮಾಡಿದರು. ಆ ಸಮಯದಲ್ಲಿ ನಾವು ಯಾರೂ ಹಕ್ಕಿ ಬಂದಿರುವುದನ್ನು ನೋಡಿರಲಿಲ್ಲ. ಧ್ವಜಾರೋಹಣಕ್ಕೆ ಬೇರೆ ಯಾವುದೇ ಅಡೆತಡೆಗಳು ಇರಲಿಲ್ಲ. ನಂತರ, ಸಮಾರಂಭದ ವೀಡಿಯೊವನ್ನು ಗುಂಪಿನೊಂದಿಗೆ ಹಂಚಿಕೊಳ್ಳಲು ಪೋಷಕರನ್ನು ಕೇಳಲಾಯಿತು. ಮೊದಮೊದಲು ಕಾಗೆ ಧ್ವಜಸ್ತಂಭದೆಡೆಗೆ ಬರುತ್ತಿರುವಂತೆ ಕಂಡರೂ ಇತರರು ಶೇರ್ ಮಾಡಿರುವ ವೀಡಿಯೋ ನೋಡಿದ ಮೇಲೆ ಅದು ಹಾಗಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಾಸ್ತವವಾಗಿ ಕಾಗೆ ತೆಂಗಿನ ಗರಿಯ ಮೇಲಿದೆ. ಈ ತೆಂಗಿನ ಮರವು ಅಂಗನವಾಡಿ ಆವರಣದ ಹೊರಗಿದೆ’’.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆ ಧ್ವಜಸ್ತಂಭದಲ್ಲಿ ಸಿಲುಕಿದ್ದ ರಾಷ್ಟ್ರಧ್ವಜವನ್ನು ಹಕ್ಕಿ ಬಂದು ಬಿಡಿಸಿಲ್ಲ. ಬದಲಾಗಿ ಹಕ್ಕಿ ತ್ರಿವರ್ಣ ಧ್ವಜದ ಬಳಿ ಬಂದಂತೆ ಗೋಚರಿಸುವ ಕೋನದಿಂದ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಸಿಲುಕಿಕೊಂಡ ಧ್ವಜ ತೆರೆದುಕೊಳ್ಳುವುದಕ್ಕೂ ಹಕ್ಕಿಗೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.