ಕೆಲ ಜನರು ಜ್ಯುವೆಲ್ಲರಿ ಅಂಗಡಿಯಿಂದ ಗಾಯಗೊಂಡ ವ್ಯಕ್ತಿಯೋರ್ವನನ್ನು ಎತ್ತಿಕೊಂಡು ಹೋಗುತ್ತಿರುವ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇದು ಕರ್ನಾಟಕದ ಬಳ್ಳಾರಿಯ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಬಾಂಬ್ ಸ್ಫೋಟ ನಡೆದ ಬಳಿಕದ ಘಟನೆ ಎಂದು ವ್ಯಾಪಕವಾಗಿ ಹೇಳಿಕೊಳ್ಳಲಾಗಿದೆ.
"ಕರ್ನಾಟಕದ ಬಳ್ಳಾರಿಯಲ್ಲಿನ ಕಲ್ಯಾಣ್ ಜುವೆಲ್ಲರ್ಸ್ ನಲ್ಲಿ ಬಾಂಬ್ ಸ್ಫೋಟ ನಡೆದಿದೆ. ತುಂಬಾ ಜನರಿಗೆ ಗಾಯವಾಗಿದೆ ಮತ್ತು ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಹಿಂದೂಗಳೇ ನೀವು ಮಲಗುತ್ತಲೇ ಇರು, ಮುಂದೆ ನೀವೇ ಇವರ ಗುರಿ ಎಂದು ಸಾಮಾಜಿಕ ತಾಣದ ಬಳಕೆದಾರರೋರ್ವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇಂತಹದ್ದೆ ಇನ್ನಿತರ ಪೋಸ್ಟ್ ಗಳನ್ನು ನಿಮಗೆ ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಫ್ಯಾಕ್ಟ್‌ಚೆಕ್:
ಈ ವೀಡಿಯೊವನ್ನು ನ್ಯೂಸ್ ಮೀಟರ್ ಸತ್ಯಶೋಧನೆಗೊಳಪಡಿಸಿದಾಗ, ಇದು ಭಯೋತ್ಪಾದಕ ಕೃತ್ಯವಲ್ಲ ಮತ್ತು ಸುಳ್ಳು ತಲೆಬರಹದೊಂದಿಗೆ ವೀಡಿಯೊವನ್ನು ಹರಿಯಬಿಡಲಾಗುತ್ತಿದೆ ಎಂದು ಪತ್ತೆಹಚ್ಚಿದೆ.
ಅವಶ್ಯಕ ಕೀವರ್ಡ್ ಗಳನ್ನು ಬಳಸಿ ಈ ವೀಡಿಯೋವನ್ನು ಹುಡುಕಿದಾಗ ಇದನ್ನು ಮೇ 3, 2024 ರಂದು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅಪ್ಲೋಡ್ ಮಾಡಿದ್ದು ನಮಗೆ ಕಂಡುಬಂದಿದೆ. "ಬಳ್ಳಾರಿಯ ಕಲ್ಯಾಣ್ ಜ್ಯುವೆಲರ್ಸ್‌ನ ಶೋರೂಮ್‌ನ ಎಸಿಯಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಸ್ಫೋಟ ನಡೆದಿದೆ" ಎಂಬ ಶೀರ್ಷಿಕೆಯಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ.
ಈ ಘಟನೆಯನ್ನು ನ್ಯೂಸ್ ನೈನ್ ಕೂಡಾ ವರದಿ ಮಾಡಿದ್ದು, ಕಲ್ಯಾಣ್ ಜ್ಯುವೆಲರ್ ಶೋ ರೂಂನಲ್ಲಿ ಗ್ಯಾಸ್ ರೀಫಿಲ್ಲಿಂಗ್ ಪ್ರಕ್ರಿಯೆಯಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡಿದೆ ಮತ್ತು ಇದರಲ್ಲಿ ಮೂವರು ಗಾಯಗೊಂಡಿದ್ದಾರೆ" ಏಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸರು ಕೂಡ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದು, ಜ್ಯುವೆಲ್ಲರಿಯಲ್ಲಿ ಯಾವುದೇ ಬಾಂಬ್ ಸ್ಫೋಟ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾಂತ್ರಿಕ ದೋಷದ ಕಾರಣದಿಂದ ಎಸಿ ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಎಕ್ಸ್‌ನಲ್ಲಿ ಬರೆದುಕೊಂಡ ಪೊಲೀಸರು, “ಏರ್ ಕಂಡಿಷನರ್ ಗ್ಯಾಸ್ ಈ ಸ್ಫೋಟಕ್ಕೆ ಕಾರಣ. ಬಳ್ಳಾರಿ ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ. ವದಂತಿಗಳನ್ನು ಹರಡಬೇಡಿ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ." ಎಂದು ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಎಸಿಯಲ್ಲಿ ತಾಂತ್ರಿಕ ದೋಷವುಂಟಾಗಿ ನಡೆದ ಸ್ಫೋಟವನ್ನು ಭಯೋತ್ಪಾದಕ ದಾಳಿ ಎಂಬ ಸುಳ್ಳು ಶೀರ್ಷಿಕೆಯಲ್ಲಿ ಹರಡಲಾಗುತ್ತಿದೆ ಎನ್ನುವುದು ಸತ್ಯಶೋಧನೆಯಲ್ಲಿ ಸ್ಪಷ್ಟವಾಗಿದೆ.