ಭಾಷಣ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರ ಸಮ್ಮುಖದಲ್ಲಿ ʼಸಂವಿಧಾನವನ್ನು ಬದಲಾವಣೆ ಮಾಡಿ, ಮನುಸ್ಮೃತಿಯನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆಯೇ? ಇದು ಮಾತ್ರವಲ್ಲದೇ, "ಭೀಮರಾವ್ ಅಂಬೇಡ್ಕರ್‌ಗೂ ಸ್ವತಃ ಸಂವಿಧಾನವನ್ನು ಇಲ್ಲವಾಗಿಸಲು ಸಾಧ್ಯವಾಗಿಲ್ಲ" ಎಂಬ ಹೇಳಿಕೆ ನೀಡಿದ್ದಾರೆಯೇ?. ಇಂತಹದ್ದೊಂದು ವೀಡಿಯೊ ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೊದಲ್ಲಿ ಪ್ರಧಾನಿ ಮೋದಿಯವರು "ಸಂವಿಧಾನಕ್ಕೆ ಸಂಬಂಧಿಸಿದಂತೆ ಮೋದಿ ಹೇಳುವ ಈ ಮಾತುಗಳನ್ನು ನೀವು ನಂಬಬೇಕು ಮತ್ತು ಬರೆದಿಟ್ಟುಕೊಳ್ಳಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಬಂದರೂ ಸಂವಿಧಾನವನ್ನು ಮುಗಿಸಲು ಸಾಧ್ಯವಿಲ್ಲ" ಎಂದು ಪ್ರಧಾನಿ ಹೇಳುತ್ತಿರುವ ಪೋಸ್ಟ್ ಇಲ್ಲಿ(Archive Link) ನಿಮಗೆ ನೋಡಬಹುದು.
ಮನುಸ್ಮೃತಿ ಹಿಂದೂ ಧರ್ಮದ ಒಂದು ವಿವಾದಾತ್ಮಕ ಕೃತಿಯಾಗಿದೆ. ಈ ಕೃತಿಯಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚಿಸಲಾಗಿದ್ದು, ಈ ಕೃತಿಯು ಜಾತಿಪದ್ಧತಿಯನ್ನು ಪ್ರೋತ್ಸಾಹಿಸುತ್ತದೆ ಎನ್ನಲಾಗಿದೆ. ಇಲ್ಲಿ ದಲಿತರ ಕುರಿತ ಉಲ್ಲೇಖಗಳೂ ವಿವಾದಕ್ಕೀಡಾಗಿದ್ದು, 1927ರಲ್ಲಿ ಬಿ.ಆರ್. ಅಂಬೇಡ್ಕರ್‌ರವರು ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು.
ಫ್ಯಾಕ್ಟ್ ಚೆಕ್:
ಈ ವೀಡಿಯೊವನ್ನು ಸತ್ಯಶೋಧನೆಗೆ ಒಳಪಡಿಸಿದಾಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಆಯಾಮವು ಸುಳ್ಳು ಎಂದು ʼನ್ಯೂಸ್ ಮೀಟರ್ʼಗೆ ಸ್ಪಷ್ಟವಾಗಿದೆ. ಕೀವರ್ಡ್ ಸರ್ಚ್ ಮೂಲಕ ಹುಡುಕಾಡಿದಾಗ ಪ್ರಧಾನಿಯವರ ಈ ಭಾಷಣದ ನ್ಯೂಸ್ ಲಿಂಕ್ ದೊರಕಿತು. ಇದರಲ್ಲಿ, ಈ ಭಾಷಣವು ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದ ಬರ್ಮರ್ ನಲ್ಲಿ ಎಪ್ರಿಲ್ 12, 2024ರಂದು ಮಾಡಿದ್ದರು. ಕೈಲಾಶ್ ಚೌಧರಿ ಎಂಬ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದರು.
ಭಾಷಣದಲ್ಲಿ ಪ್ರಧಾನಿ ಮೋದಿಯವರು "ಬಿಜೆಪಿಯು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಗೌರವಿಸುತ್ತದೆ. ಸಂವಿಧಾನದ ಹೆಸರಿನಲ್ಲಿ ಕಾಂಗ್ರೆಸ್ ನಮ್ಮ ಮೇಳೆ ಅನಗತ್ಯ ದಾಳಿಗಳನ್ನು ನಡೆಸುತ್ತಿದೆ. ಇನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಬಂದರೂ ಸಂವಿಧಾನವನ್ನು ಇಲ್ಲವಾಗಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದರು.
ಇಂಟರ್‌ನೆಟ್‌ನಲ್ಲಿ ಇನ್ನೂ ಈ ಕುರಿತು ಹುಡುಕಾಟ ನಡೆಸಿದಾಗ ಏಪ್ರಿಲ್ 12, 2024 ರಂದು ಎಬಿಪಿ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಸುಮಾರು 32 ನಿಮಿಷಗಳ ವೀಡಿಯೊ ದೊರಕಿತು. ಇದನ್ನು ಸಂಪೂರ್ಣವಾಗಿ ವೀಕ್ಷಿಸುವ ವೇಳೆ 19:34 ನಿಮಿಷದಲ್ಲಿ ಪ್ರಧಾನಿಯವರ ಈ ಉಲ್ಲೇಖ ಕಂಡು ಬಂದಿದೆ. ಇಲ್ಲಿ ಪ್ರಧಾನಿ ಮೋದಿ "ಭಾಬಾ ಸಾಹೇಬರೇ ಬಂದರೂ ದೇಶದ ಸಂವಿಧಾನ ರದ್ದು ಮಾಡಲು ಸಾಧ್ಯವಿಲ್ಲ. ಸರಕಾರಕ್ಕೆ ನಮ್ಮ ಸಂವಿಧಾನವೇ ಗೀತೆ, ರಾಮಾಯಣ, ಬೈಬಲ್, ಕುರ್‌ಆನ್ ಎಲ್ಲವೂ" ಎಂದು ಹೇಳಿದ್ದರು. ಜೊತೆಗೆ ಪ್ರತಿಪಕ್ಷಗಳ ಪ್ರಣಾಳಿಕೆಯನ್ನೂ ಟೀಕಿಸಿದರು.
ಸಂಪೂರ್ಣ ವೀಡಿಯೊವನ್ನು ಆಲಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಎಲ್ಲೂ ಮನುಸ್ಮೃತಿಯ ಉಲ್ಲೇಖವೇ ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ದೇಶದ ಸಂವಿಧಾನ ಬದಲಿಸಿ ಮನುಸ್ಮೃತಿಯನ್ನು ತರುತ್ತೇವೆ ಎಂದೂ ಅವರು ಹೇಳಲಿಲ್ಲ. ಇದೇ ವೀಡಿಯೊವನ್ನು ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ನಲ್ಲೂ ಪ್ರಕಟಿಸಲಾಗಿದೆ.
ಆದ್ದರಿಂದ ದೇಶದ ಸಂವಿಧಾನ ಬದಲಿಸಿ ಮನುಸ್ಮೃತಿಯನ್ನು ತರುತ್ತೇವೆ ಎಂದು ಪ್ರಧಾನಿ ಎಲ್ಲೂ ಮಾತನಾಡಿಲ್ಲ ಮತ್ತು ಅಪೂರ್ಣ ವೀಡಿಯೊವನ್ನು ಸಾಮಾಜಿಕ ತಾಣದಲ್ಲಿ ಪ್ರಕಟಿಸಿ ಸುಳ್ಳು ಹೇಳಿಕೆಗಳೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.