ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಲವಾರು ನಕಲಿ ನ್ಯೂಸ್ ಗಳು ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಿನಲ್ಲಿ ನ್ಯೂಸ್‌ಪೇಪರ್ ನ ಕ್ಲಿಪ್ ಒಂದು ವೈರಲ್ ಆಗಿದೆ. "ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು: ಸಿದ್ರಾಮಯ್ಯ" ಎಂಬ ಶೀರ್ಷಿಕೆಯಿರುವ ಸುದ್ದಿತುಣುಕನ್ನು ಹಂಚಿಕೊಳ್ಳಲಾಗಿದೆ. ಮುಂದುವರಿದು, "ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ, ಮುಸ್ಲಿಮರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ" ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಹಲವಾರು ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯ ಖಾತೆಗಳು ಈ ಸುದ್ದಿ ತುಣುಕನ್ನು ಹಂಚಿಕೊಂಡಿದೆ. ಅದರ ಆರ್ಕೈವ್ ಲಿಂಕ್ ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.
ಫ್ಯಾಕ್ಟ್ ಚೆಕ್: ಈ ಸುದ್ದಿಯನ್ನು ʼನ್ಯೂಸ್ ಮೀಟರ್ʼ ಸತ್ಯಶೋಧನೆ ಮಾಡಿದಾಗ, ಇದು ಎಡಿಟ್ ಮಾಡಲ್ಪಟ್ಟ ಸುದ್ದಿ ತುಣುಕು ಎಂದು ತಿಳಿದು ಬಂದಿದೆ.
ಇಂತಹಾ ತಲೆಬರಹ ಇರುವ ಯಾವುದೇ ಪತ್ರಿಕೆಗಳ ಸುದ್ದಿಯೂ ನಮಗೆ ದೊರೆತಿಲ್ಲ. ಆದರೆ ಇದರಲ್ಲಿ ಬಳಸಿರುವ ಚಿತ್ರವು ಹಲವು ಪತ್ರಿಕೆಗಳಲ್ಲಿ ದೊರಕಿದೆ. ಆ ಚಿತ್ರದೊಂದಿಗೆ, ಸಿದ್ದರಾಮಯ್ಯ ನೀಡಿದ ಗ್ಯಾರಂಟಿಗಳು, ಅವರು ಅಧಿಕಾರಿಗಳನ್ನು ಭೇಟಿಯಾದ ಕುರಿತು ಉಲ್ಲೇಖವಿದೆಯೇ ಹೊರತು ಇಂತಹಾ ಯಾವುದೇ ಹೇಳಿಕೆಗಳು ಕಂಡು ಬಂದಿಲ್ಲ.
ಮೊದಲು ಕೀವರ್ಡ್‌ಗಳನ್ನು ಬಳಸಿ ಪರಿಶೀಲನೆ ನಡೆಸಿದಾಗ ಈ ತಲೆಬರಹ ಇರುವ ಯಾವುದೇ ಸುದ್ದಿ ಪತ್ತೆಯಾಗಿಲ್ಲ. ಬಳಿಕ ಕೆಲವು ಸುದ್ದಿಗಳಲ್ಲಿ ಈ ಚಿತ್ರ ಬಳಸಿರುವುದು ನಮ್ಮ ಗಮನಕ್ಕೆ ಬಂತು. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸ್ವತಃ ಸಿದ್ದರಾಮಯ್ಯ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, "ಇದು ಬಿಜೆಪಿ-ಜೆಡಿಎಸ್ ನ ಅಪವಿತ್ರ ಮೈತ್ರಿಕೂಟವು ನಡೆಸಿರುವ ಹುನ್ನಾರವಾಗಿದೆ. ಇಲ್ಲಿ ಸುದ್ದಿಯನ್ನು ತಿರುಚಲಾಗಿದೆ. ಇದೊಂದು ನಕಲಿ ಸುದ್ದಿ ತುಣುಕು ಆಗಿದ್ದು, ಕರ್ನಾಟಕದಾದ್ಯಂತ ಸಾಮಾಜಿಕ ತಾಣದಲ್ಲಿ ಕೋಮುದ್ವೇಷ ಹರಡಲು ಹೂಡಿರುವ ಉಪಾಯ ಇದು ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪೊಲೀಸ್ ಪ್ರಕರಣವನ್ನೂ ದಾಖಲಿಸಿದ್ದಾರೆ.
ಆದ್ದರಿಂದ ಇದು ನೈಜ ಸುದ್ದಿಯಾಗಿರದೇ, ಪತ್ರಿಕೆಯಲ್ಲಿ ಪ್ರಕಟವಾದಂತೆ ಸುಳ್ಳು ಸುದ್ದಿಯನ್ನು ಎಡಿಟ್ ಮಾಡಲಾಗಿದೆ ಮತ್ತು ಸಿದ್ದರಾಮಯ್ಯ ಈ ರೀತಿಯ ಯಾವ ಹೇಳಿಕೆಯನ್ನೂ ನೀಡಿಲ್ಲ ಎಂದು ಸತ್ಯಶೋಧನೆಯಲ್ಲಿ ತಿಳಿದು ಬಂದಿದೆ.
ಈ ಹಿಂದೆ ನ್ಯೂಸ್ ಮೀಟರ್ "ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಮ್ ಆಗಿ ಹುಟ್ಟುತ್ತೇನೆ" ಎಂದು ಹೇಳಿದ್ದಾರೆ ಎನ್ನಲಾದ ವೀಡಿಯೊವನ್ನು ಸತ್ಯಶೋಧನೆ ಮಾಡಿತ್ತು. ಈ ವೇಳೆ ಅದು ಸಿದ್ದರಾಮಯ್ಯ ಜೆಡಿಎಸ್ ಮುಖಂಡ ದೇವೇಗೌಡರನ್ನು ಉದ್ದೇಶಿಸಿ ಹೇಳಿದ್ದೆನ್ನುವುದು ಸಾಬೀತಾಗಿತ್ತು.ಬಳಿಕ, ಸಿದ್ದರಾಮಯ್ಯ ತಮ್ಮ ಅಧಿಕೃತ ಎಕ್ಸ್ ಅಕೌಂಟ್ ನಲ್ಲಿ ಇದು ತಿರುಚಲ್ಪಟ್ಟಿದೆ ಎಂದು ಹೇಳಿಕೆ ನೀಡಿದ್ದರು.