ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸುಳ್ಳುಸುದ್ದಿಗಳ ಆರ್ಭಟ ಹೆಚ್ಚಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವೊಂದು ವೈರಲ್ ಆಗಿದ್ದು, ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳ ಆರಾಧ್ಯದೈವ ಗಣೇಶನ ಮೂರ್ತಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ತೋರಿಸುವ ವೀಡಿಯೊವೊಂದು ಸದ್ಯ ವೈರಲ್ ಆಗಿದೆ. ಕಾಂಗ್ರೆಸ್ ನ ಹಲವು ನೇತಾರರು ಈ ವೀಡಿಯೊವನ್ನು ಶೇರ್ ಮಾಡುತ್ತಿದ್ದಾರೆ. ಪೋಸ್ಟ್ ಒಂದರಲ್ಲಿ, "ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಗಣೇಶನ ಮೂತ್ತಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಒಂದು ವೇಳೆ ಇದೇ ರೀತಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾಡಿದ್ದರೆ ಬಿಜೆಪಿ ಬೆಂಬಲಿತ ಮಾಧ್ಯಮಗಳು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದವು ಎಂದು ಊಹಿಸಿ" ಎಂಬ ತಲೆಬರಹದಲ್ಲಿ ಸಾಮಾಜಿಕ ತಾಣದಲ್ಲಿ ವೀಡಿಯೊ ಹರಿಬಿಡಲಾಗುತ್ತದೆ. ಉದಾಹರಣೆಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.
ಫ್ಯಾಕ್ಟ್ ಚೆಕ್:
ಈ ವೀಡಿಯೊವನ್ನು ʼನ್ಯೂಸ್ ಮೀಟರ್ʼ ಪರಿಶೀಲನೆ ನಡೆಸಿದಾಗ ಇದು ಸುಳ್ಳು ಎಂದು ತಿಳಿದು ಬಂದಿದೆ.
ವೀಡಿಯೊದಲ್ಲಿರುವ ವೇದಿಕೆಯ ಹಿಂಬದಿಯನ್ನು ಗಮನಿಸಿದಾಗ ಉತ್ತರ ಕರ್ನಾಟಕದ ಆಂಕೋಲಾದಲ್ಲಿ ನಡೆದಿರುವ ಸಭೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಕಳೆದ ವರ್ಷ 2023ರಲ್ಲಿ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದರು. ಮೇ 3ನೇ ತಾರೀಕಿನಂದು ರಾಜ್ಯದ ಉತ್ತರಕನ್ನಡ ಜಿಲ್ಲೆಯ ಆಂಕೋಲಾದಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿತ್ತು. ಈ ವೀಡಿಯೋ ಇದೇ ಸಭೆಯದ್ದಾಗಿದೆ.
ಇದರ ಪೂರ್ಣ ವೀಡಿಯೊವನ್ನು ʼನ್ಯೂಸ್ ಮೀಟರ್ʼ ಪರಿಶೀಲನೆ ನಡೆಸಿದಾಗ ಈ ವೀಡಿಯೊದ ಕೆಲವು ಭಾಗಕ್ಕೆ ಕತ್ತರಿ ಹಾಕಿದ್ದು ಗಮನಕ್ಕೆ ಬಂದಿದೆ. ಪೂರ್ಣ ವೀಡಿಯೋದಲ್ಲಿನ ಒಟ್ಟು 11 ಸೆಕೆಂಡ್ ಅನ್ನು ಕಟ್ ಮಾಡಿ ಈ ವೀಡಿಯೊದೊಂದಿಗೆ ಜೋಡಿಸಲಾಗಿದ್ದು, ಮೇಲ್ನೋಟಕ್ಕೆ ಪ್ರಧಾನಿ ಮೋದಿಯವರು ಗಣೇಶನ ವಿಗ್ರಹ ಪಡೆದುಕೊಳ್ಳಲು ನಿರಾಕರಿಸಿದಂತೆ ಕಾಣುತ್ತದೆ.
ಇದೇ ವೀಡಿಯೊವನ್ನು ಬಿಜೆಪಿ ಬೆಂಬಲಿಗರು ಮತ್ತು ಬಿಜೆಪಿಯ ಅಧಿಕೃತ ಪೇಜ್ ನಲ್ಲೂ ಪೋಸ್ಟ್ ಮಾಡಲಾಗಿದೆ ಮತ್ತು ವಿಜಯವಾಣಿ ಕನ್ನಡ ಮಾಧ್ಯಮ ಪ್ರಕಟಿಸಿದ ಪೂರ್ತಿ ವೀಡಿಯೋದಲ್ಲಿ ಪ್ರಧಾನಿ ಮೋದಿ ಗಣೇಶ ವಿಗ್ರಹವನ್ನು ಸ್ವೀಕರಿಸುವುದು ಕಾಣಬಹುದಾಗಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ಗಣೇಶ ವಿಗ್ರಹವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎನ್ನುವುದು ಸುಳ್ಳುಸುದ್ದಿಯಾಗಿದೆ.