2023ರಲ್ಲಿ ಸುಳ್ಳು ಸುದ್ದಿ| ಮಣಿಪುರದಿಂದ ಐದು ರಾಜ್ಯಗಳ ಚುನಾವಣೆವರೆಗೆ

ಹೊಸ ವರ್ಷದ ಸ್ವಾಗತಿಸುವ ಹೊಸ್ತಿಲಲ್ಲಿದ್ದೇವೆ. ಈ ವರ್ಷ ನೂರಾರು ಸುಳ್ಳು ಸುದ್ದಿಗಳ ಹರಿದಾಡಿದವು. ಆ ಸುಳ್ಳುಸುದ್ದಿಗಳ ಲೋಕದ ಹಿನ್ನೋಟ ಇಲ್ಲಿದೆ

By Kumar S  Published on  31 Dec 2023 4:42 PM GMT
2023ರಲ್ಲಿ ಸುಳ್ಳು ಸುದ್ದಿ| ಮಣಿಪುರದಿಂದ ಐದು ರಾಜ್ಯಗಳ ಚುನಾವಣೆವರೆಗೆ

ಕೋವಿಡ್‌ 19 ಮತ್ತು ಅದರ ಸುತ್ತಲೂ ಹಬ್ಬಿದ ಸುಳ್ಳುಗಳಿಂದ ಚೇತರಿಸಿಕೊಳ್ಳುತ್ತಿದ್ದ ಭಾರತ 2023ರಲ್ಲಿ ನೋಡಿದ್ದು ಮತ್ತೊಂದು ಅಲೆಯ ಸುಳ್ಳು ಸುದ್ದಿಗಳ ಅಬ್ಬರವನ್ನು.

ಮೂರು ತಿಂಗಳಿಗೂ ಹೆಚ್ಚು ಕಾಲ ಮಣಿಪುರದಲ್ಲಿ ನಡೆದದ್ದು ದೇಶವೇ ಬೆಚ್ಚಿ ಬೀಳಿಸಿದ ಹಿಂಸಾಚಾರ. ಮೈತಿ ಮತ್ತು ಕುಕಿ ಸಮುದಾಯಗಳ ನಡೆದ ಈ ಸಂಘರ್ಷಕ್ಕೆ ತುಪ್ಪ ಸುರಿದಿದ್ದು ಸುಳ್ಳು ಸುದ್ದಿಗಳು. ಮೇ 4ರಂದು ಸಿಡಿದ ಹಿಂಸಾಚಾರದ ಕಿಡಿಗೆ ವಿಡಿಯೋ, ಪೋಸ್ಟರ್‍‌ ರೂಪದ ಸುಳ್ಳು ಸುದ್ದಿಗಳು ತುಪ್ಪ ಸುರಿದವು. ಇದು 160 ಜನರ ಬಲಿ ತೆಗೆದುಕೊಂಡಿತು. ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡವು.

ಎರಡು ಸಮುದಾಯಗಳ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಸುತ್ತ ಹರಿದಾಡಿದ ಸುಳ್ಳು ಸುದ್ದಿಗಳೇ ಹಿಂಸಾಚಾರಕ್ಕೆ ಬಹುದೊಡ್ಡ ಪ್ರೇರಣೆಗಳಾಗಿದ್ದವು.

ಮೈತಿ ಸಮುದಾಯದ ನರ್ಸ್‌ ಮೇಲೆ ಚೂರ್‍ಚಂದಾಪುರ್‍‌ದಲ್ಲಿ ಕುಕಿ ಸಮುದಾಯದವರು ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತು. ಇದಕ್ಕೆ ಪ್ರತಿಕಾರವಾಗಿ ಕುಕಿ ಸಮುದಾಯದ ಮಹಿಳೆಯರ ಬೆತ್ತಲಾಗಿಸಿ, ಸಾರ್ವಜನಿಕವಾಗಿ ಮೆರವಣಿಗೆ ಮಾಡಲಾಯಿತು.



ಕುಕಿ ಯುವತಿಯೊಬ್ಬಳನ್ನು ರಸ್ತೆಯಲ್ಲಿ ಗುಂಡು ಹೊಡೆದು ಕೊಲ್ಲಲಾಯಿತು ಎಂದು ಬರ್ಮಾದ ವಿಡಿಯೋವೊಂದನ್ನು ವೈರಲ್ ಮಾಡಲಾಯಿತು. ಆದರೆ ಈ ಸುಳ್ಳು ವಿಡಿಯೋ ಹಿಂಸಾಚಾರ ಮತ್ತಷ್ಟು ಹೆಚ್ಚುವುದಕ್ಕೆ ಕಾರಣವಾಯಿತು.



ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಮಣಿಪುರದಲ್ಲಿ ನಡೆದದ್ದು ಎಂದು ವಿಡಿಯೋ ಶೇರ್ ಮಾಡಲಾಯಿತು. ಮೈತಿಗಳು ಕುಕಿಗಳ ಮನೆ ಲೂಟಿ ಮಾಡುತ್ತಿದ್ದಾರೆ ಎಂಬ ವಿಡಿಯೋ ವೈರಲ್ ಆಯಿತು. ಹಾಗೇ ಮ್ಯಾನ್ಮಾರ್‍‌ನಿಂದ ಅಲೆಮಾರಿಗಳು ಮಣಿಪುರಅಕ್ಕೆ ಅಕ್ರಮವಾಗಿ ನುಸುಳುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗಳು ಮಣಿಪುರವನ್ನು ಮೂರು ತಿಂಗಳಿಗೂ ಹೆಚ್ಚು ಅಶಾಂತಿ, ಅತಂತ್ರದಿಂದಿರುವಂತೆ ಮಾಡಿದವು.

ರಾಜ್ಯಗಳ ಚುನಾವಣೆ.. ಸುಳ್ಳು ಪ್ರಚಾರದ ಚಿತಾವಣೆ

ಫೆಬ್ರವರಿ ತಿಂಗಳಿಂದ ಆರಂಭವಾಗಿ ಡಿಸೆಂಬರ್ ವರೆಗೆ ಈ ಬಾರಿ 9 ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಿತು.

ತ್ರಿಪುರ, ಮೇಘಾಲಯ ಮತ್ತು ನಾಗಲ್ಯಾಂಡ್‌ ಸಣ್ಣ ರಾಜ್ಯಗಳಾದ್ದರಿಂದ ಹೆಚ್ಚೇನು ಸುಳ್ಳು ಸುದ್ದಿಗಳು ಹಾವಳಿ ಕಾಣಲಿಲ್ಲ. ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಸುದ್ದಿಗಳು ತೀವ್ರಪ್ರಮಾಣದಲ್ಲಿ ವೈರಲ್ ಆದವು.

ಪ್ರಮುಖ ಪಕ್ಷಗಳ ಪ್ರತಿಷ್ಠೆಗೆ ಕಾರಣವಾಗಿದ್ದರಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಸುಳ್ಳು ಸುದ್ದಿಯ ಪ್ರವಾಹಕ್ಕೂ ಸಾಕ್ಷಿಯಾಗಬೇಕಾಯಿತು.

ಎರಡು ರೀತಿಯ ಸುಳ್ಳು ಸುದ್ದಿಗಳು ಕರ್ನಾಟಕದಲ್ಲಿ ವ್ಯಾಪಕವಾಗಿ ಹರಿದಾಡಿದವು.

1. ಕರ್ನಾಟಕದ್ದೇ ರಾಜಕೀಯ ಪಕ್ಷ, ರಾಜಕಾರಣಿಗಳನ್ನು ಕೇಂದ್ರವಾಗಿಸಿಕೊಂಡ ಸುಳ್ಳು ಸುದ್ದಿಗಳು.

2. ಕರ್ನಾಟಕ ಮತದಾರರನ್ನು ಪ್ರಭಾವಿಸಬಹುದಾದ, ರಾಷ್ಟ್ರೀಯ ವಿದ್ಯಮಾನಗಳ ಸುತ್ತ ಹೆಣೆದ ಸುಳ್ಳು ಸುದ್ದಿಗಳು.

ಕರ್ನಾಟಕಕ್ಕೆ ಸಂಬಂಧಿಸಿದ್ದ ಸುಳ್ಳು ಸುದ್ದಿಗಳು ಹೀಗಿವೆ: ಬಿಜೆಪಿ ಶಾಸಕ, ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ಅಮಿತ್‌ ಶಾ ಹೆಸರಿನಲ್ಲಿ ವಜಾ ಮಾಡಿದ ನಕಲಿ ಪತ್ರ. ಸಿದ್ದರಾಮಯ್ಯ ಅವರ ಹಿಂದಿನ ಆಡಳಿತದಲ್ಲಿ ರಾಜ್ಯದ ಸಾಲ ಹೆಚ್ಚಳ, ಮಲ್ಲಿಕಾರ್ಜುನ ಖರ್ಗೆಯವರು, "ಭಾರತದಲ್ಲಿ ಹುಟ್ಟಿದ್ದೇ ಪಾಪ" ಎಂಬ ನಕಲಿ ಪೋಸ್ಟರ್, ನಕಲಿ ಚುನಾವಣಾ ಪೂರ್ವ ಸಮೀಕ್ಷೆಗಳು.. ಹೀಗೆ ಇಪ್ಪತ್ತಕ್ಕೂ ಹೆಚ್ಚು ಸುಳ್ಳು ಸುದ್ದಿಗಳು ಹರಿದಾಡಿದವು.






ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳ ಕುರಿತ ಸುಳ್ಳು ಪೋಸ್ಟರ್‍‌ಗಳು, ವಿಡಿಯೋಗಳು, ವಾಟ್ಸ್‌ಆಪ್‌ ಪೋಸ್ಟ್‌ಗಳು ಹರಿದಾಡಿದವು.

ನೇರವಾಗಿ ಕರ್ನಾಟಕಕ್ಕೆ ಸಂಬಂಧಿಸದೇ ಇದ್ದರೂ, ರಾಜ್ಯ ಮತದಾರರನ್ನು ಪ್ರಭಾವಿಸಬಹುದಾದ, ಧರ್ಮ, ಪಕ್ಷ, ಜಾತಿ, ದೇಶ ಭಕ್ತಿ ಕುರಿತು ಹಲವು ಸುಳ್ಳು ಸುದ್ದಿಗಳು ಕೂಡ ವೈರಲ್ ಆದವು.

ಉದಾಹರಣೆಗೆ; ಕೇರಳದಲ್ಲಿ ಗೋಮಾಂಸ ಸಿಗಬೇಕೆಂದಾದರೆ ಕಾಂಗ್ರೆಸ್‌ಗೆ ಮತ ಹಾಕಿ ಎಂಬ ಪೋಸ್ಟರ್, ಬಲೂಚಿಸ್ತಾನದ ನಾಗರಿಕರು ಮೋದಿಗೆ ಜೈಕಾರ ಹಾಕಿದರು ಎಂಬ ವಿಡಿಯೋ, ನರೇಂದ್ರ ಮೋದಿ ನೊಬೆಲ್‌ ಶಾಂತಿ ಪುರಸ್ಕಾರದ ರೇಸಿನಲ್ಲಿ ಎಂಬ ಸುದ್ದಿ, ಬೋಸ್ಟನ್‌ ಡ್ರಗ್‌ ಪ್ರಕರಣದಲ್ಲಿ ರಾಹುಲ್ ಗಾಂಧಿ ಬಂಧನದ ಸುಳ್ಳು ಸುದ್ದಿಗಳು ಎಲ್ಲಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.



ಕ್ರಿಕೆಟ್‌ ಜೊತೆಗೆ ಸುಳ್ಳುಗಳ ಆಟ

ಹಲವು ಕಾರಣಗಳಿಗೆ ಈ ಬಾರಿ ಐಸಿಸಿ ಏಕ ದಿನ ವಿಶ್ವಕಪ್‌ ಮಹತ್ವ ಪಡೆದುಕೊಂಡಿತ್ತು. ರೋಹಿತ್ ಶರ್ಮಾ ನಾಯಕತ್ವ, ಮೋದಿ ಸ್ಟೇಡಿಯಮ್‌ನಲ್ಲಿ ಫೈನಲ್ ಪಂದ್ಯ, ಪಾಕಿಸ್ತಾನದೊಂದಿಗೆ ಪಂದ್ಯ ಇತ್ಯಾದಿ.

ಹೈದರಾಬಾದಿಗೆ ಬಂದಿಳಿದ ಪಾಕ್ ಆಟಗಾರರಿಗೆ ಕೇಸರಿ ಶಾಲು ತೊಡಿಸಿ ಸ್ವಾಗತಿಸಲಾಯಿತು, ಸಚಿನ್‌ ಕಾಲಿಗೆ ನಮಸ್ಕರಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್, ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿ ಭಾರತ್ ಮಾತಾ ಕಿ ಜೈ ಎಂದು ಕೂಗಿದ್ದು, ಸುನೀಲ್ ಗವಾಸ್ಕರ್ ಹೆಸರಿನಲ್ಲಿ ನಕಲಿ ಪೋಸ್ಟರ್‍‌ ವೈರಲ್ ಆಗಿದ್ದು, ನಮಗೆ ಕಾಶ್ಮೀರ ಬೇಡ, ವಿರಾಟ್‌ ಕೊಹ್ಲಿಕೊಡಿ ಫೋಟೋಶಾಪ್ ಮಾಡಿದ ಫೋಟೋ ಸೇರಿದಂತೆ 50ಕ್ಕೂ ಹೆಚ್ಚು ಸುಳ್ಳು ಸುದ್ದಿಗಳು ಹರಿದಾಡಿದವು.



ಮತ್ತೆ ಚುನಾವಣೆ, ಸುಳ್ಳು ಸುದ್ದಿಗಳ ಹಣಾಹಣಿ

ವರ್ಷಾಂತ್ಯಕ್ಕೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಪ್ರತಿಷ್ಠೆಯ ಕಣಗಳಾಗಿದ್ದ ಈ ಐದು ರಾಜ್ಯಗಳಲ್ಲಿ ಮತದಾರರನ್ನು ಪ್ರಭಾವಿಸುವುದಕ್ಕಾಗಿ ಹರಿದಾಡಿದ ಸುಳ್ಳು ಸುದ್ದಿಗಳು ಆತಂಕ ಹುಟ್ಟಿಸುವಂತಿತ್ತು.

ತೆಲಂಗಾಣದಲ್ಲಿ ಬಿಆರ್‍ಎಸ್ ಮತ್ತು ಕಾಂಗ್ರೆಸ್ ಪಕ್ಷದ ನೇರ ಸ್ಪರ್ಧೆಯಿಂದಾಗಿ ಕರ್ನಾಟಕದ ಕಾಂಗ್ರೆಸ್‌ ಆಡಳಿತ ಸುಳ್ಳು ಸುದ್ದಿಗೆ ಸರಕಾಯಿತು. ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಂದ್ರವಾಗಿರಿಸಿಕೊಂಡು ನಕಲಿ ಪತ್ರ, ಹಳೆಯ ವಿಡಿಯೋ, ನಕಲಿ ಹೇಳಿಕೆಗಳು ವೈರಲ್ ಆದವು.


ಎನ್‌ಡಿಟಿವಿ ಹೆಸರಿನಲ್ಲಿ ನಕಲಿ ಸಮೀಕ್ಷೆ, ವಸುಂಧರ ರಾಜೇ ಹೆಸರಿನಲ್ಲಿ ಹಳೆಯ ವಿಡಿಯೋ, ರಾಜಸ್ಥಾನಕ್ಕೆ ಉತ್ತರ ಪ್ರದೇಶದಿಂದ ಬುಲ್ಡೋಜರ್‍‌ ಉಡುಗೊರೆ, ಪ್ರಧಾನಿ ಮೋದಿ-ವಸುಂಧರರಾಜೇ ಭೇಟಿಯ ಹಳೆಯ ಫೋಟೋ, ಶಿವರಾಜ್‌ ಸಿಂಗ್ ಪರ ಪ್ರಚಾರ ಮಾಡಲು ಸಂತರು ನಿಕಾರಿಸಿದರು ಎಂಬ ವಿಡಿಯೋ, ರಾಹುಲ್‌ ಗಾಂಧಿ ಭಾರತ್‌ ಮಾತೆ ಯಾರೆಂದು ಕೇಳಿದರು ಎಂಬ ವಿಡಿಯೋಗಳು ಚುನಾವಣೆಯ ಸಂದರ್ಭದಲ್ಲಿ ಹರಿದಾಡಿದವು.


ಎಐ, ಡೀಪ್‌ಫೇಕ್‌ ಮತ್ತು ಅನಂತ ಆತಂಕ

ರಶ್ಮಿಕ ಮಂದಣ್ಣ ಬಹುಶಃ ಎಂದಿಗೂ ಇಂತಹದ್ದೊಂದು ಕ್ಷಣವನ್ನು ಎದುರುಗೊಳ್ಳುವ ಊಹೆಯೂ ಮಾಡಿರಲಿಕ್ಕಿಲ್ಲ. ಭಾರತೀಯ ಮಹಿಳೆಯೊಬ್ಬರ ವಿಡಿಯೋವೊಂದಕ್ಕೆ ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ರಶ್ಮಿಕಾ ಮಂದಣ್ಣ ಮುಖವನ್ನು ಜೋಡಿಸಿದ ವಿಡಿಯೋ ವೈರಲ್ ಆಯ್ತು. ಈ ವಿಡಿಯೋ ಕೇವಲ ರಶ್ಮಿಕಾ ಅವರ ನಿದ್ರೆಗಡಿಸಿದ್ದಷ್ಟೇ ಅಲ್ಲ, ಎಲ್ಲ ಮಹಿಳೆಯರಲ್ಲಿ ದೊಡ್ಡ ಆತಂಕ ಹುಟ್ಟುಹಾಕಿತು. ಅಮಿತಾಭ್‌ ಬಚ್ಚನ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಈ ಪ್ರಕರಣದಬಗ್ಗೆ ಆತಂಕ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ಡೀಫ್‌ಫೇಕ್‌ ವಿಡಿಯೋಗಳ ವಿಷಯದಲ್ಲಿ ಎಚ್ಚರವಹಿಸುವಂತೆ, 48 ಗಂಟೆಗಳಲ್ಲಿ ತಾಣದಿಂದು ತೆಗೆದು ಹಾಕುವಂತೆ ತಾಕೀತು ಮಾಡಿತು.




ಆದರೆ ಇದಕ್ಕೂ ಮೊದಲು ಎಐ ಬಳಸಿದ ಫೋಟೋ ವಿಡಿಯೋಗಳು ಹರಿದಾಡಿದ್ದವು. ಕುಸ್ತಿ ಫೆಡರೇಷನ್ ವಿರುದ್ಧ ಹೋರಾಟ ನಡೆಸಿದ್ದ ವಿನೀಶ್‌ ಫೋಗಟ್‌ ಅವರ ಬಂಧನದ ಫೋಟೋವನ್ನು ಎಐ ಟೂಲ್ ಬಳಸಿ ತಿರುಚಲಾಗಿತ್ತು. ಉತ್ತರಕಾಂಡದ ಸುರಂಗದಲ್ಲಿ 17 ದಿನಗಳ ಕಾಲ ಸಿಲುಕಿದವರನ್ನು ರಕ್ಷಿಸಿದ ಮೇಲೆ ಎಐ ಬಳಸಿ ರಚಿಸಿದ ಫೋಟೋ ವೈರಲ್ ಆಯಿತು. ಮಾಧ್ಯಮಗಳೂ ವಿವೇಚನಾರಹಿತವಾಗಿ ಬೇಸ್ತು ಬಿದ್ದು ಈ ಫೋಟೋವನ್ನು ಪ್ರಕಟಿಸಿದ್ದು ಚರ್ಚೆಗೂ ಕಾರಣವಾಯಿತು.



ವರ್ಷಾಂತ್ಯದ ಹೊತ್ತಿಗೆ ಟ್ರೇಡಿಂಗ್, ಬೆಟ್ಟಿಂಗ್‌ನಂತಹ ಜಾಹೀರಾತುಗಳಿಗೆ, ಚುನಾವಣೆಯಲ್ಲಿ ಅಭ್ಯರ್ಥಿ ಪರ ಮತ ಯಾಚಿಸಲು ತಾರೆಯರು, ಗಣ್ಯರ ಡೀಪ್‌ಫೇಕ್‌ ವಿಡಿಯೋಗಳನ್ನು ಬಳಸಲಾಯಿತು.

ಧರ್ಮ ದ್ವೇಷ, ರಾಜಕೀಯ ದ್ವೇಷ, ಸಾಮಾಜಿಕ ಅಶಾಂತಿ, ಅಪಪ್ರಚಾರ, ತಪ್ಪು ಮಾಹಿತಿ ಹೀಗೆ ಹಲವು ಉದ್ದೇಶಗಳಿಗೆ ಹಲವು ಸ್ವರೂಪದ ಸುಳ್ಳು ಸುದ್ದಿಗಳು ಭಾರತದಲ್ಲಿ ವ್ಯಾಪಕವಾಗಿದ್ದವು. ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ಚಾಲ್ತಿಯಲ್ಲಿದ್ದವು.

ಆದರೆ ಈ ಬಾರಿ ಕೇಂದ್ರ ಸರ್ಕಾರ ಸುಳ್ಳು ಸುದ್ದಿ ತಡೆಯುವ ನಿಟ್ಟಿನಲ್ಲಿ ತುಟಿ ಬಿಚ್ಚಿತ್ತು. ಸುಳ್ಳು ಸುದ್ದಿ ಹರಡುತ್ತಿದ್ದ ಹಲವು ಯೂಟ್ಯೂಬ್‌ ಚಾನೆಲ್‌ಗಳ ವಿರುದ್ಧ ಕ್ರಮಕೈಗೊಂಡಿತು. ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿ ತಡೆಯುವಂತೆ ಒತ್ತಡ ಹೇರಿತು. ಆದರೆ ಕೆಲ ರಾಜ್ಯ ಸರ್ಕಾರಗಗಳು ಸುಳ್ಳುಸುದ್ದಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಿಶೇ‍ ಪ್ರಯತ್ನಕ್ಕೆ ಮುಂದಾದವು. ಕರ್ನಾಟಕ ಹಾಗೂ ತಮಿಳು ನಾಡು ಸರ್ಕಾರಗಳು ಸುಳ್ಳುಸುದ್ದಿ ಪತ್ತೆ ಹಚ್ಚುವುದಕ್ಕಾಗಿ ಪ್ರತ್ಯೇಕ ಘಟಕ ಸ್ಥಾಪಿಸಿದವು. ಸುಳ್ಳು ಸುದ್ದಿ ತಡೆಯುವ ಜೊತೆಗೆ ಮಾಹಿತಿ ನೀಡುವ ನಿಟ್ಟಿನಲ್ಲಿಈಗ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ.

Next Story