ವಾದ
ಮೋದಿ ಅಮಿತ್ ಶಾ ಅವರಿಂದ ಆದ ವಿಶ್ವಾಸ ದ್ರೋಹದಿಂದ ನೊಂದು ಕಣ್ಣೀರು ಹಾಕಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್.
ವಾಸ್ತವ
ಶಿವರಾಜ್ ಸಿಂಗ್ ಚೌಹಾನ್ ಅವರ ದತ್ತು ಪುತ್ರಿ ಭಾರತಿ ವರ್ಮಾ ಅವರು ನಿಧನರಾದಾಗ ಕಣ್ಣೀರು ಹಾಕಿದ ವಿಡಿಯೋ.
ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ವಿಡಿಯೋ ವೈರಲ್ ಆಗಿದ್ದು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ವಿಶ್ವಾಸ ದ್ರೋಹದಿಂದಾಗಿ ಸಿಎಂ ಹುದ್ದೆ ತಪ್ಪಿತು ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಪ್ರತಿಪಾದನೆ ಮಾಡಲಾಗಿದೆ.
ಎಕ್ಸ್ ತಾಣದಲ್ಲಿ ಹಲವು ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫಿಝಾ ಎಂಬ ಬಳಕೆದಾರರು, ಶಿವರಾಜ್ ಸಿಂಗ್ ಚೌಹಾನ್, ಮೋದಿ- ಶಾ ಅವರಿಂದ ಆಗಿರುವ ವಿಶ್ವಾಸದ್ರೋಹ ಎಲ್ಲಕ್ಕಿಂತ ದೊಡ್ಡದು. ಇದು ಮಧ್ಯಪ್ರದೇಶಕ್ಕೆ ಆದ ಅವಮಾನ. ಮೋದಿ ಮತ್ತು ಶಶಾ 2024ರ ಎಲೆಕ್ಷನ್‌ನಲ್ಲಿ ಸೋತ ನಂತರ ನೀವೂ ಅಳುತ್ತೀರಾ? ಅತ್ಯಂತ ಹಿರಿಯ ನಾಯಕ ಕಣ್ಣೀರು ಹಾಕುತ್ತಿದ್ದಾರೆ. ನನಗೆ ಬಹಳ ಬೇಸರವಾಗುತ್ತಿದೆ. ಬಿಜೆಪಿ ಯಾರೊಬ್ಬರ ಸ್ವತ್ತಲ್ಲ" ಎಂಬ ಅಡಿ ಟಿಪ್ಪಣಿಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. 17 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಶಿವರಾಜ್ ಸಿಂಗ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸಿಎಂ ಸ್ಥಾನ ತಪ್ಪಿದ್ದಕ್ಕೆ ಕಣ್ಣೀರು ಹಾಕಿಲ್ಲ. ವೈರಲ್ ಆದ ವಿಡಿಯೋ ನಾಲ್ಕು ವರ್ಷ ಹಳೆಯದು.
ಹುಬ್ಬಳ್ಳಿಯ ಸಂಕೇತ್ ನಾಗರಾಜ್ ಶಿವರಾಜ್ ಸಿಂಗ್ ಚೌಹಾನ್ ವಿಡಿಯೋವನ್ನು "ಫ್ಯಾಕ್ಚುವಲಿ ರೈಟ್" ತಂದ ಕೂಡಲೇ ವಿಡಿಯೋದ ಕೀ ಫ್ರೇಮ್‌ಗಳನ್ನು ಆಧರಿಸಿ ಹುಡುಕಾಟ ನಡೆಸಿದೆವು.
2019ರ, ಜುಲೈ 19ರಂದು ಆಜ್‌ತಕ್, ನ್ಯೂಸ್‌ತಕ್ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ಆಗಿರುವ ವಿಡಿಯೋದ ಮೂಲ ಲಭ್ಯವಾಯಿತು. 1.31 ನಿಮಿಷಗಳ ಈ ವಿಡಿಯೋದಲ್ಲಿ ಶಿವರಾಜ್ ಸಿಂಗ್ ಚೌಹಾನ್ ಅವರು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳಿವೆ.
ತಮ್ಮ ದತ್ತು ಪುತ್ರಿ ಭಾರರ್ತ ವರ್ಮ ನಿಧನರಾದ ಸಂದರ್ಭದಲ್ಲಿ ಭಾವುಕರಾಗಿದ್ದ ಶಿವರಾಜ್ ಅವರು ಕಣ್ಣೀರು ಹಾಕಿದ್ದರು. ಈ ವಿಡಿಯೋವನ್ನು ಈಗ ಸಿಎಂ ಪದವಿ ತಪ್ಪಿದ ಹಿನ್ನೆಲೆಯಲ್ಲಿ ವೈರಲ್ ಮಾಡಲಾಗಿದೆ.
ದತ್ತುಪುತ್ರಿ ಸಾವಿನ ಸುದ್ದಿಯನ್ನು ಖಚಿತ ಪಡಿಸಿಕೊಳ್ಳಲು ಕೆಲವು ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಮೂಲಕ ಹುಡುಕಾಟ ನಡೆಸಿದೆವು.
ಭಾರತಿ ವರ್ಮ ಸಾವಿನ ಕುರಿತು ಹಲವು ವರದಿಗಳು ಲಭ್ಯವಾದವು.
ಇಂಡಿಯಾ ಟುಡೆಯಲ್ಲಿ ಸೇವಾಶ್ರಮದ ವಾಸಿಯಾಗಿದ್ದು, 2018ರಲ್ಲಿ ಶಿವರಾಜ್ ಸಿಂಗ್ ಅವರ ನೇತೃತ್ವದಲ್ಲಿ ವಿವಾಹವಾಗಿದ್ದ ಭಾರತಿ ಅವರ ಕುರಿತು ವಿವರಗಳು ಲಭ್ಯವಾದವು. ಸಾವಿನ ಸುದ್ದಿಯೂ ಖಚಿತವಾಯಿತು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾಗಿರುವ ಸುದ್ದಿಯಲ್ಲಿ ಚೌಹಾನ್ ಅವರ ಪತ್ನಿ, ಪುತ್ರ ಕಾರ್ತಿಕೇಯ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ವಿದಿಶಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಚೌಹಾನ್ ಮತ್ತು ಅವರ ಪತ್ನಿ ಕಣ್ಣೀರು ಹಾಕಿದ್ದರು ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕು ಮುಖ್ಯಮಂತ್ರಿ ಹುದ್ದೆ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದು ಎಂಬ ಪ್ರತಿಪಾದನೆ ತಪ್ಪು ಎಂದು ದೃಢಪಡುತ್ತದೆ.