Fact Check: ವಯಾನಾಡ್ ಭೂಕುಸಿತದ ವೇಳೆ ನಾಯಿ, ಮರಿಗಳ ರಕ್ಷಣೆ ಮಾಡುತ್ತಿರುವ ವೀಡಿಯೊ ಹಳೇದು

ನಾಯಿ ಮತ್ತು ಎರಡು ಮರಿಗಳನ್ನು ಮಣ್ಣಿನ ಅಡಿಯಿಂದ ರಕ್ಷಿಸುತ್ತಿರುವ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ. ಇದು ವಯನಾಡಿನಲ್ಲಿ ಭೂಕುಸಿತದ ವೇಳೆ ನಡೆದ ಘಟನೆ ಎನ್ನಲಾಗಿದೆ.

By Vinay Bhat  Published on  2 Aug 2024 3:13 PM IST
Fact Check: ವಯಾನಾಡ್ ಭೂಕುಸಿತದ ವೇಳೆ ನಾಯಿ, ಮರಿಗಳ ರಕ್ಷಣೆ ಮಾಡುತ್ತಿರುವ ವೀಡಿಯೊ ಹಳೇದು
Claim: ಕೇರಳದ ವಯಾನಾಡಿನಲ್ಲಿ ಭೂಕುಸಿತದ ವೇಳೆ ಮಣ್ಣಿನ ಅಡಿಯಲ್ಲಿದ್ದ ಒಂದು ನಾಯಿ ಹಾಗೂ ಎರಡು ಮರಿಗಳನ್ನು ರಕ್ಷಣೆ ಮಾಡಲಾಗಿದೆ.
Fact: ವೈರಲ್ ವೀಡಿಯೊ ಸುಳ್ಳಾಗಿದೆ. ಇದು 2021 ರಲ್ಲಿ ಪಾಲಕ್ಕಾಡ್-ಮಲಪ್ಪುರಂ ಜಿಲ್ಲೆಗಳ ಗಡಿಭಾಗದದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಿಸಿದ್ದು ಎಂದು ನಾವು ಕಂಡುಕೊಂಡಿದ್ದೇವೆ.
ಈ ಬಾರಿ ಕರ್ನಾಟಕದಲ್ಲಿ ಮಳೆಯ ಆರ್ಭಟ ಜೋರಾಗಿದೆ. ನೆರೆಯ ರಾಜ್ಯ ಕೇರಳದಲ್ಲೂ ವರುಣ ರೌದ್ರವತಾರತಾಳಿದ್ದು ಹಲವು ಸಾವು-ನೋವುಗಳು ಸಂಭವಿಸಿವೆ. ಅದರಲ್ಲೂ ವಯನಾಡು ಭೂಕುಸಿತದಲ್ಲಿ ಅನೇಕ ಕುಟುಂಬಸ್ಥರು ಮನೆಯನ್ನು ಕಳೆದುಕೊಂಡು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಇವುಗಳ ನಡುವೆ ಒಂದು ನಾಯಿ ಮತ್ತು ಎರಡು ಮರಿಗಳನ್ನು ಮಣ್ಣಿನ ಅಡಿಯಿಂದ ರಕ್ಷಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಜುಲೈ 30 ರಂದು ವಯನಾಡಿನಲ್ಲಿ ಭೂಕುಸಿತದ ವೇಳೆ ನಡೆದ ಘಟನೆ ಎಂದು ವೀಡಿಯೊ ಶೇರ್ ಆಗುತ್ತಿದೆ.

ಪಬ್ಲಿಕ್ ನೆಕ್ಸ್ಟ್ ಎಂಬ ಎಕ್ಸ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಕೇರಳದ ವಯಾನಾಡಿನಲ್ಲಿ ಭೂಕುಸಿತದ ವೇಳೆ ಮಣ್ಣಿನ ಅಡಿಯಲ್ಲಿದ್ದ ಒಂದು ನಾಯಿ ಹಾಗೂ ಎರಡು ಮರಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಇದರಲ್ಲಿ ಹೇಳಲಾಗಿದೆ. ಈ ವೀಡಿಯೊಕ್ಕೆ 'ಬೆಟ್ಟದ ಜೀವಗಳ ಆಕ್ರಂದನ : ಮಣ್ಣಿನ ಅವಶೇಷದಲ್ಲಿ ಬೊಗಳುತ್ತಿದ್ದ ನಾಯಿ ರಕ್ಷಣೆ', ಎಂಬ ಟೈಟರ್ ನೀಡಲಾಗಿದೆ.

ಹಾಗೆಯೆ ಕನ್ನಡ ಪ್ರಸಿದ್ಧ ಡಿಜಿಟಲ್ ಮಾಧ್ಯಮ ನ್ಯೂಸ್ ಫಸ್ಟ್ ಕೂಡ ಈ ಬಗ್ಗೆ ಸುದ್ದಿ ಪ್ರಕಟ ಮಾಡಿದ್ದು, 'ಮಣ್ಣಿನ ಅವಶೇಷದಲ್ಲಿ ಬೊಗಳುತ್ತಿದ್ದ ನಾಯಿ.. ಕೇರಳದಲ್ಲಿ ಸಾಕು ಪ್ರಾಣಿಗಳ ಪಾಡು ಘನಘೋರ' ಎಂದು ಬರೆದುಕೊಂಡಿದೆ.

ಇದೇರೀತಿಯ ಪೋಸ್ಟ್ ಅನ್ನು ನೀವು ಇಲ್ಲಿ, ಇಲ್ಲಿ ಕಾಣಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಸದ್ಯ ಹರಿದಾಡುತ್ತಿರುವ ವೀಡಿಯೊ 2021 ರಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಿಸಿದ್ದು ಎಂದು ನಾವು ಕಂಡುಕೊಂಡಿದ್ದೇವೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಇದೇ ವೀಡಿಯೊ ಅಕ್ಟೋಬರ್ 17, 2021 ರಂದು Clareview Casselman Pet Clinic ಎಂಬ
ಫೇಸ್‌ಬುಕ್ ಪೇಜ್​ನಿಂದ ಅಪ್‌ಲೋಡ್ ಆಗಿರುವುದು ಕಂಡುಬಂತು. ಇವರು ಮನೊರಮಾ ನ್ಯೂಸ್ ಲೋಗೋ ಇರುವ ವೀಡಿಯೊವನ್ನ ಹಂಚಿಕೊಂಡಿದ್ದಾರೆ.

ಇದೇ ಪೋಸ್ಟ್​ನಲ್ಲಿ 'ಕೇರಳದಲ್ಲಿ ಭೂಕುಸಿತದಿಂದ ನಾಯಿ ಮತ್ತು ಆರು ಮರಿಗಳನ್ನು ರಕ್ಷಿಸಲಾಗಿದೆ' ಎಂದು ಸೂಚಿಸುವ ಶೀರ್ಷಿಕೆಯೊಂದಿಗೆ ಈ ಘಟನೆ ಬಗ್ಗೆ ವಿಸ್ತಾರವಾಗಿ ಬರೆಯಲಾಗಿದೆ. ನಾಯಿಯು ನಿರಂತರವಾಗಿ ಬೊಗಳುತ್ತಿರುವುದನ್ನು ಕೇಳಿದ ರಕ್ಷಕರು ಬಳಿ ಬಂದು ನೋಡಿದಾಗ, ನಾಯಿಯ ಕತ್ತಿನ ಹಂತದವರೆಗೆ ಮಣ್ಣು ಬಂದು ಅದರ ಅಡಿಯಲ್ಲಿ ಸಿಲುಕಿತ್ತು ಎಂದು ವರದಿಯು ಸೂಚಿಸಿದೆ. ಆದಾಗ್ಯೂ, ರಕ್ಷಕರು ಕೇವಲ ಎರಡು ಮರಿಗಳ ಜೀವವನ್ನು ಮಾತ್ರ ಉಳಿಸಲು ಸಾಧ್ಯವಾಯಿತು ಎಂದು ವರದಿಯಲ್ಲಿದೆ.

ಹಾಗೆಯೆ ದಿ ನ್ಯೂಸ್ ಮಿನಿಟ್ ಅಕ್ಟೋಬರ್ 14, 2021 ರಂದು ಈ ಘಟನೆಯ ಬಗ್ಗೆ ವರದಿ ಮಾಡಿದೆ. ಕೇರಳದ ಪಾಲಕ್ಕಾಡ್-ಮಲಪ್ಪುರಂ ಜಿಲ್ಲೆಗಳ ಗಡಿಭಾಗದ ಸಬಿತಾ ಮತ್ತು ಅಶ್ರಫ್ ದಂಪತಿಗಳು ನಾಯಿಯ ಕಿರುಚಾಟಟವನ್ನು ಕೇಳಿದ್ದಾರೆ ಎಂದು ವರದಿಯಲ್ಲಿದೆ. ದಂಪತಿಗಳು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಪಾಲಕ್ಕಾಡ್​ನಲ್ಲಿ ಭೂಕುಸಿತದ ನಂತರ ಮಣ್ಣಿನೊಳಗಿದ್ದ ನಾಯಿ ಮತ್ತು ಅದರ ನಾಯಿಮರಿಗಳನ್ನು ಕಂಡುಕೊಂಡರು. ನಂತರ ನಾಯಿ ಮತ್ತು ಅದರ ನಾಯಿಮರಿಗಳನ್ನು ರಕ್ಷಿಸಲಾಯಿತು ಎಂದು ಬರೆಯಲಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಈ ಘಟನೆಯ ಬಗ್ಗೆ ವರದಿ ಮಾಡಿರುವುದು ನಮಗೆ ಸಿಕ್ಕಿದೆ.

ಹೀಗಾಗಿ 2024 ರಲ್ಲಿ ವಯನಾಡ್ ಭೂಕುಸಿತದ ವೇಳೆ ನಾಯಿ, ಮರಿಗಳ ರಕ್ಷಣೆ ಮಾಡಲಾಗಿದೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಹಳೇಯದ್ದಾಗಿದೆ ಎಂದು ನಾವು ಖಚಿತಪಡಿಸುತ್ತೇವೆ.

Claim Review:ಕೇರಳದ ವಯಾನಾಡಿನಲ್ಲಿ ಭೂಕುಸಿತದ ವೇಳೆ ಮಣ್ಣಿನ ಅಡಿಯಲ್ಲಿದ್ದ ಒಂದು ನಾಯಿ ಹಾಗೂ ಎರಡು ಮರಿಗಳನ್ನು ರಕ್ಷಣೆ ಮಾಡಲಾಗಿದೆ.
Claimed By:X User
Claim Reviewed By:News Meter
Claim Source:X
Claim Fact Check:False
Fact:ವೈರಲ್ ವೀಡಿಯೊ ಸುಳ್ಳಾಗಿದೆ. ಇದು 2021 ರಲ್ಲಿ ಪಾಲಕ್ಕಾಡ್-ಮಲಪ್ಪುರಂ ಜಿಲ್ಲೆಗಳ ಗಡಿಭಾಗದದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಿಸಿದ್ದು ಎಂದು ನಾವು ಕಂಡುಕೊಂಡಿದ್ದೇವೆ.
Next Story