ಮೆಟಾದಲ್ಲಿ ಜಾಹೀರಾತು ನೀಡಲು ಕರ್ನಾಟಕದಲ್ಲಿ ಹಣದ ಹೊಳೆ ಹರಿಸಿದ ರಾಜಕೀಯ ಪಕ್ಷಗಳು

ಲೋಕಸಭಾ ಚುನಾವಣೆಯಲ್ಲಿ ಮೆಟಾದಲ್ಲಿ ಜಾಹೀರಾತು ನೀಡಲು ಹಲವು ರಾಜಕೀಯ ಪಕ್ಷಗಳು ಲಕ್ಷಾಂತರ ರೂ. ಹಣವನ್ನು ಖರ್ಚು ಮಾಡಿದೆ. ಯಾವೆಲ್ಲಾ ಹೆಸರಿನಲ್ಲಿ ಪಕ್ಷಗಳು ಯಾವ ರೀತಿಯ ಕಂಟೆಂಟ್‌ ಗಳನ್ನು ಶೇರ್‌ ಮಾಡಿದೆ ಎನ್ನುವುದಕ್ಕೆ ಈ ಅಧ್ಯಯನಾತ್ಮಕ ಲೇಖನ ಬೆಳಕು ಚೆಲ್ಲುತ್ತದೆ.

By -  Dheeshma & Mahammad Muaad |  Published on  13 Jun 2024 5:00 PM IST
ಮೆಟಾದಲ್ಲಿ ಜಾಹೀರಾತು ನೀಡಲು ಕರ್ನಾಟಕದಲ್ಲಿ ಹಣದ ಹೊಳೆ ಹರಿಸಿದ ರಾಜಕೀಯ ಪಕ್ಷಗಳು

ಈ ಲೇಖನವನ್ನು ICFJ (ಪತ್ರಕರ್ತರ ಅಂತಾರಾಷ್ಟ್ರೀಯ ಕೇಂದ್ರ) ಇದರ ತಪ್ಪು ಮಾಹಿತಿಗಳನ್ನು ತಡೆಯುವ ಕಾರ್ಯಕ್ರಮದ ಭಾಗವಾಗಿ ಪ್ರಕಟಿಸಲಾಗಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಲವಾರು ರಾಜಕೀಯ ಪಕ್ಷಗಳು ಹಲವು ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿತ್ತು. ಸದ್ಯ ಜನರಿರುವಲ್ಲಿ ತೆರಳಿ ನಡೆಸುವ ಪ್ರಚಾರಕ್ಕಿಂತಲೂ ಸಾಮಾಜಿಕ ತಾಣದಲ್ಲಿನ ಪ್ರಚಾರಗಳು ಹೆಚ್ಚಿನ ಫಲಿತಾಂಶವನ್ನು ನೀಡುತ್ತಿವೆ. ಮನೆಮನೆಗೆ ಭೇಟಿ ನೀಡಿ ನೋಟೀಸುಗಳನ್ನು ವಿತರಿಸುವುದು, ವಾಹನಗಳನ್ನು ಅಲಂಕರಿಸಿ ಜಾಥಾ ತೆರಳುವುದು ಮುಂತಾದ ಕಾರ್ಯಗಳಿಗೆ ಲಕ್ಷಾಂತರ ರೂ.ಯನ್ನು ರಾಜಕೀಯ ಪಕ್ಷಗಳು ವ್ಯಯಿಸುತ್ತವೆ. ಹಾಗೆಯೇ, ಸಾಮಾಜಿಕ ತಾಣದಲ್ಲಿನ ಪ್ರಚಾರಕ್ಕೂ ವಿವಿಧ ಪಕ್ಷಗಳು ಹಣ ಖರ್ಚು ಮಾಡಿವೆ.

ಸರಿಯಾದ ಮಾಹಿತಿಯಿರುವ ಅಥವಾ ವಿರೋಧ ಪಕ್ಷಗಳ ಕುಂದುಕೊರತೆಗಳ ಕುರಿತಾದ ಪೋಸ್ಟ್‌ಗಳನ್ನು ಪ್ರಕಟಿಸಿರುವುದಕ್ಕಿಂತ ಹೆಚ್ಚಾಗಿ ಜನರ ನಡುವೆ ದ್ವೇಷ ಮೂಡಿಸುವ ಹಲವು ಪೋಸ್ಟ್‌ಗಳನ್ನೂ ಫೇಸ್‌ಬುಕ್‌ನ ಜಾಹೀರಾತುಗಳ ಮೂಲಕ ಹಲವು ಪಕ್ಷಗಳು ಪ್ರಕಟ ಮಾಡಿದೆ. ಈ ವರದಿಯಲ್ಲಿ ಜನವರಿ ತಿಂಗಳಿನಿಂದ ಮಾರ್ಚ್‌ವರೆಗೆ ವಿವಿಧ ರಾಜಕೀಯ ಪಕ್ಷಗಳು ವ್ಯಯಿಸಿರುವ ಹಣಕಾಸು ಲೆಕ್ಕಾಚಾರಗಳು ಮತ್ತು ದ್ವೇಷಪೂರಿತ ಅಭಿಯಾನಗಳ ಕುರಿತು ಬೆಳಕು ಚೆಲ್ಲುತ್ತದೆ.

ಪ್ರಮುಖವಾಗಿ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಇನ್ನಿತರ ಪ್ರಾದೇಶಿಕ ಪಕ್ಷಗಳು ಸಾಮಾಜಿಕ ತಾಣದಲ್ಲಿ ಪಕ್ಷದ ಪ್ರಚಾರಕ್ಕೆಂದು ವ್ಯಯಿಸಿರುವ ಮೊತ್ತವನ್ನು ಅಂದಾಜು ಮಾಡಿದರೆ, ಎಲ್ಲ ಪಕ್ಷಗಳಿಗಿಂತ ಬಿಜೆಪಿಯು ಅತೀಹೆಚ್ಚು ಮೊತ್ತವನ್ನು ವ್ಯಯಿಸಿದೆ. ಬಿಜೆಪಿಯ ಅಧಿಕೃತ ಖಾತೆಗಳಲ್ಲದೇ ಹಲವು ಇನ್ನಿತರ ಖಾತೆಗಳ ಮೂಲಕವೂ ಪ್ರಚಾರ ಎಗ್ಗಿಲ್ಲದೇ ನಡೆದಿದೆ.

ಮೀಮ್‌ ಎಕ್ಸ್‌ಪ್ರೆಸ್‌ (MemeXpress)

ಈ ಪೇಜ್‌ ಒಂದರಲ್ಲೇ ಖರ್ಚು ಮಾಡಿದ ಹಣ ಹಲವು ಲಕ್ಷಗಳನ್ನು ದಾಟಿದೆ. ಇದರಲ್ಲಿ ಕೇವಲ ಒಂದು ಪೋಸ್ಟ್‌ ಗೆ ಒಂದು ಮಿಲಿಯನ್‌ ರೂ. ಅಂದರೆ ಹತ್ತು ಲಕ್ಷ ರೂ.ಗಿಂತಲೂ ಹೆಚ್ಚು ವ್ಯಯ ಮಾಡಲಾಗಿದೆ. ಉದಾಹರಣೆಗೆ ಈ ಕೆಳಗಿನ ಪೋಸ್ಟ್‌ ನೋಡಬಹುದಾಗಿದೆ.




ಇಲ್ಲಿ ಕಾಂಗ್ರಸ್‌ ನ ಲಾಂಛನವಾದ ಕೈಯನ್ನು ಪಾಕಿಸ್ತಾನದ ಬಾವುಟಕ್ಕೆ ಅಳವಡಿಸಲಾಗಿದೆ. ʼಪ್ರೋ ಮ್ಯಾಕ್ಸ್‌ ಪಾಕಿಸ್ತಾನಿ-ಕಾಂಗ್ರೆಸ್ʼ ಎಂದು ತಲೆಬರಹ ನೀಡಲಾಗಿದೆ. ಈ ಒಂದು ಪೋಸ್ಟ್‌ ಅನ್ನು ವಿವಿಧ ಸಮಯಕ್ಕನುಗುಣವಾಗಿ ಪೋಸ್ಟ್‌ ಮಾಡಲಾಗಿದೆ. ಒಟ್ಟು ಹತ್ತು ಬಾರಿ ಇದನ್ನು ಪೋಸ್ಟ್‌ ಮಾಡಿದ್ದು, ಮಿಲಿಯನ್‌ ಗೂ ಹೆಚ್ಚಿನ ಜನರಿಗೆ ಫೇಸ್‌ಬುಕ್‌ ಇದನ್ನು ತಲುಪಿಸಿದೆ. ಒಟ್ಟು ಹತ್ತು ಲಕ್ಷ ರೂ.ಗಿಂತಲೂ ಹೆಚ್ಚಿನ ಮೊತ್ತವನ್ನು ಈ ಒಂದು ಪೋಸ್ಟ್‌ ಗೆ ಖರ್ಚು ಮಾಡಲಾಗಿದೆ.





ಒಂದು ಮಿಲಿಯನ್‌ ಗಿಂತೂ ಹೆಚ್ಚು ಹಣವನ್ನು ಈ ಒಂದು ಪೋಸ್ಟ್‌ ಗೆ ಖರ್ಚು ಮಾಡಿರುವುದನ್ನು ಮೇಲೆ ನೋಡಬಹುದಾಗಿದೆ. ಜೊತೆಗೆ, ಈ ಜಾಹೀರಾತನ್ನು ಮುಖ್ಯವಾಗಿ 24% ಕರ್ನಾಟಕದಲ್ಲೇ ತೋರಿಸಲಾಗಿದೆ ಎಂದು ಮೆಟಾ ದ ಅಧಿಕೃತ ಅಂಕಿಅಂಶಗಳು ನಮಗೆ ತಿಳಿಸುತ್ತವೆ.

ಕಾಂಗ್ರೆಸ್‌ ಹಿಂದೂಗಳಿಗಿಂತ ಮುಸ್ಲಿಮರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿದೆ ಎನ್ನುವುದನ್ನು ಪರೋಕ್ಷವಾಗಿ ಬಿಂಬಿಸುವ ಕಾರ್ಟೂನ್‌ ಒಂದು ಇದೇ ಪೇಜ್‌ ಶೇರ್‌ ಮಾಡಿದ್ದು, ಈ ಕಾರ್ಟೂನ್‌ ಗಾಗಿ 2,50,000ರೂ. ವರೆಗೆ ಖರ್ಚು ಮಾಡಲಾಗಿದೆ. ಒಟ್ಟು ನಾಲ್ಕು ಬಾರಿ ಈ ಕಾರ್ಟೂನ್‌ ಅನ್ನು ಪ್ರಕಟಿಸಲಾಗಿದೆ.



ಕೇವಲ ಕಾಂಗ್ರೆಸ್‌ ವಿರೋಧಿ ಪೋಸ್ಟ್‌ ಗಳು ಮಾತ್ರವಲ್ಲದೇ ವಿರೋಧ ಪಕ್ಷಗಳ ಹಲವು ನಾಯಕರನ್ನು ಕೀಳುಮಟ್ಟದಲ್ಲಿ ಚಿತ್ರಿಸುವ ಹಲವು ಪೋಸ್ಟ್‌ ಗಳನ್ನು ಜಾಹೀರಾತು ನೀಡಲಾಗಿದೆ.



MemeXpress ಎಂಬ ಪೇಜ್‌ಗೆ ಕೇವಲ ಮೂರು ಸಾವಿರ ಲೈಕ್‌ಗಳಿದ್ದು, ಆದರೆ ಜನವರಿಯಿಂದ ಮಾರ್ಚ್‌ವರೆಗೆ ಕೇವಲ ಮೂರು ತಿಂಗಳಿನಲ್ಲಿ ಈ ಪೇಜ್‌ಫೇಸ್‌ಬುಕ್‌ಜಾಹೀರಾತಿಗಾಗಿ 18,18,354ರೂ. ಖರ್ಚು ಮಾಡಿದೆ. ಇದು ಕರ್ನಾಟಕದಲ್ಲಿ ಈ ಪೇಜ್‌ವ್ಯಯಿಸಿದ ಲೆಕ್ಕಾಚಾರ ಮಾತ್ರವಾಗಿದೆ. ಇನ್ನು ಫೆಬ್ರವರಿಯಿಂದ ಮೇ ತಿಂಗಳವರೆಗೆ ಈ ಪೇಜ್‌ದೇಶದಲ್ಲಿ ಫೇಸ್‌ಬುಕ್‌ಜಾಹೀರಾತಿಗಾಗಿ ಖರ್ಚು ಮಾಡಿರುವ ವೆಚ್ಚ ಒಂದು ಕೋಟಿ ರೂ. ದಾಟುತ್ತದೆ.

ಈ ಪೇಜ್‌ ದ್ವೇಷ ಹರಡಿರುವುದರ ಕೆಲವು ಉದಾಹರಣೆಗಳು ಇಲ್ಲಿವೆ:






MemeXpress ಒಂದು ಸ್ವತಂತ್ರವಾದ ಪೇಜ್‌ ಏನಲ್ಲ. ಇದು ನವೆಂಬರ್‌ 2023 ಮತ್ತು ಮೇ 2024ರ ನಡುವೆ ಸೃಷ್ಟಿಸಲಾದ ಕನಿಷ್ಠ 14 ಪೇಜ್‌ ಗಳಲ್ಲಿ ಒಂದಾಗಿದೆ. ಈ ಸರಣಿಯಲ್ಲಿ ಸೃಷ್ಟಿಸಲಾದ ಮೊದಲ ಫೇಸ್‌ಬುಕ್‌ ಪೇಜ್‌ ʼಉಲ್ಟಾ ಚಷ್ಮಾʼ ಆಗಿದೆ. ಈ ಪೇಜ್‌ ಬಿಜೆಪಿ ಪರ ಹಿಂದಿ ಭಾಷೆಯಲ್ಲಿ ಕಂಟೆಂಟ್‌ ಗಳನ್ನು ಪ್ರಕಟಿಸುತ್ತದೆ. ನವೆಂಬರ್ 6, 2023 ರಂದು ರಚಿಸಲಾದ ಈ ಪೇಜ್‌, ತನ್ನ ನೆಟ್‌ವರ್ಕ್‌ನ ಎಲ್ಲಾ 12 ಪೇಜ್‌ ಗಳಲ್ಲಿ ಒಟ್ಟು ₹94,600,000 ಮೌಲ್ಯದ ರಾಜಕೀಯ ಜಾಹೀರಾತುಗಳನ್ನು ಪ್ರದರ್ಶಿಸಿದೆ. ಈ ಜಾಹೀರಾತುಗಳನ್ನು ನವೆಂಬರ್ 2023 ರಿಂದ ಜೂನ್ 1 ರವರೆಗೆ ಅಂದರೆ ಲೋಕಸಭಾ ಚುನಾವಣೆಯ ಕೊನೆಯ ಹಂತದವರೆಗೆ ರನ್‌ ಮಾಡಲಾಗಿದೆ. ಇವುಗಳಲ್ಲಿ, ತಮಿಳಗಂ, ಕನ್ನಡ ಸಂಗಮಂ, ತೆಲಂಗಾಣ ಸೆಂಟ್ರಲ್, ಮತ್ತು ಮಲಬಾರ್ ಸೆಂಟ್ರಲ್ ಪುಟಗಳು ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಿದವು. ಈ ಎಲ್ಲಾ ಪೇಜ್‌ ಗಳೂ ಸಂಬಂಧಪಟ್ಟ ರಾಜ್ಯಗಳಲ್ಲಿ ರಾಜಕೀಯ ಪೋಸ್ಟ್‌ ಗಳಿಗಾಗಿ ಹೆಚ್ಚು ಖರ್ಚು ಮಾಡಿದೆ. MemesXpress ಮತ್ತು ಪೊಲಿಟಿಕಲ್ ಎಕ್ಸ್-ರೇ ಇದೇ ನೆಟ್‌ವರ್ಕ್‌ನಲ್ಲಿನ ಇತರ ಎರಡು ಪೇಜ್‌ಗಳಾಗಿವೆ. ಇವುಗಳ ದಕ್ಷಿಣ ಭಾಗದಲ್ಲಿ ಹೆಚ್ಚು ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿವೆ. ಈ ಪೇಜ್‌ ಗಳು ಉಲ್ಟಾ ಚಶ್ಮಾದ ಹೊರತಾಗಿ ತಮ್ಮ ಸ್ವಂತ ಹೆಸರಿನಲ್ಲಿ ಜಾಹೀರಾತುಗಳನ್ನು ನಡೆಸುತ್ತವೆ. ವಿಶೇಷವೆಂದರೆ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಪೇಜ್‌ಗಳು ಪತ್ತೆಹಚ್ಚಲಾಗದ ಮೊಬೈಲ್ ಸಂಖ್ಯೆಗಳು ಮತ್ತು ವಿಳಾಸಗಳನ್ನು ಹೊಂದಿದ್ದು, ಪ್ರಾಕ್ಸಿ ಪೇಜ್‌ಗಳಂತೆ ತಮ್ಮ ಗುರುತನ್ನು ಮರೆಮಾಡಲು ಸಾಮಾನ್ಯ ಮಾದರಿಯನ್ನು ಅನುಸರಿಸುತ್ತವೆ.

Kannada Sangamam

ಇದು ಬಿಜೆಪಿ ಬೆಂಬಲಿತ ಫೇಸ್‌ಬುಕ್‌ ಪೇಜ್.‌ ಈ ಪೇಜ್‌ಗಳನ್ನು ಉಲ್ಟಾ ಚಶ್ಮಾ ಎಂಬ ಬಿಜೆಪಿ ಬೆಂಬಲಿತ ಕಂಪೆನಿಯು ನಿರ್ವಹಿಸುತ್ತಿದೆ. ಕನ್ನಡದಲ್ಲಿ ಕನ್ನಡ ಸಂಗಮಂ ಇದ್ದ ಹಾಗೆ ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲೂ ವಿವಿಧ ಪೇಜ್‌ ಗಳಿವೆ. ಇವರಲ್ಲಿ ಸಾಮಾನ್ಯವಾದ ಅಂಶವೇನೆಂದರೆ, ಈ ಪೇಜ್‌ಗಳಲ್ಲಿ ಬರುವ ಹಲವು ಕಂಟೆಂಟ್‌ ಗಳು ಒಂದೇ ತೆರನಾಗಿರುತ್ತವೆ. ಭಾಷೆಗಳಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಹೆಚ್ಚಾಗಿ ಗೂಗಲ್‌ ಟ್ರಾನ್ಸ್‌ಲೇಟರ್‌ ನಲ್ಲಿ ಅನುವಾದ ಮಾಡಿದ ಪೋಸ್ಟ್‌ ಗಳೇ ಇರುತ್ತದೆ ಮತ್ತು ಅದು ಅಪಭ್ರಂಶಗೊಂಡು ಓದುಗನಿಗೆ ಅರ್ಥವಾಗದಂತಿರುತ್ತದೆ.

ಈ ಪೇಜ್‌ ನಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದು ಈ ಕೆಳಗಿನ ಪೋಸ್ಟ್‌ ಗೆ ಆಗಿದೆ.








ಕರ್ನಾಟಕದಲ್ಲಿ ಕಾಂಗ್ರೆಸ್‌ ಮತಯಾಚನೆಯ ಸಂದರ್ಭ ಸದಸ್ಯರು ಪಾಕಿಸ್ತಾನ್‌ ಝಿಂದಾಬಾದ್‌ ಕೂಗುತ್ತಿದ್ದಾರೆಂದ ಆರೋಪದ ವೀಡಿಯೊವೊಂದನ್ನು ಪೋಸ್ಟ್‌ ಮಾಡಲಾಗಿದೆ. “ಪಾಕಿಸ್ತಾನದ ಘೋಷಣೆ, ತಕ್ಕಣ ಪಾಕಿಸ್ತಾನದಂತಹ ಪರಿಸ್ಥಿತಿ” ಎಂದು ಇದಕ್ಕೆ ತಲೆಬರಹ ನೀಡಲಾಗಿದೆ. ವೀಡಿಯೊದಲ್ಲಿ ʼಕಾಂಗ್ರೆಸ್‌ ಪಾಕಿಸ್ತಾನವನ್ನು ಪ್ರೀತಿಸುತ್ತಲೇ ಇರುತ್ತದೆʼ ಮತ್ತು ʼನಮ್ಮ ನಗರದಲ್ಲಿ ಸ್ಫೋಟಗಳು ನಡೆಯುತ್ತಲೇ ಇರುತ್ತವೆʼ ಎಂದು ಬರೆಯಲಾಗಿದ್ದು, ಕಾಂಗ್ರೆಸ್‌ ನಾಯಕರ ಫೋಟೊಗಳನ್ನು ಹಾಕಲಾಗಿದೆ. ಈ ಪೋಸ್ಟ್‌ ಅನ್ನು ಕೇವಲ ಕರ್ನಾಟಕದಲ್ಲಿ ಮಾತ್ರವೇ ಫೇಸ್‌ಬುಕ್‌ ಪ್ರಸರಿಸುವಂತೆ ನೋಡಿಕೊಳ್ಳಲಾಗಿದೆ. ಈ ಜಾಹೀರಾತಿಗಾಗಿ 5 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ ಮತ್ತು ಇದು ಒಂದು ಮಿಲಿಯನ್‌ ಗಿಂತಲೂ ಹೆಚ್ಚಿನ ಜನರಿಗೆ ತಲುಪಿದೆ ಎಂದು ಅಂಕಿಅಂಶಗಳು ತಿಳಿಸಿವೆ.

ಎರಡನೆಯದಾಗಿ, ಈ ಕೆಳಗಿನ ಕಾರ್ಟೂನ್‌ಅನ್ನು ಫೇಸ್‌ಬುಕ್‌ಜಾಹೀರಾತಿನಲ್ಲಿ ನಾಲ್ಕು ಬಾರಿ ಪ್ರಕಟಿಸಲಾಗಿದೆ. ರಾಹುಲ್‌ಗಾಂಧಿಯನ್ನು ದೆವ್ವದಂತೆ ಚಿತ್ರಿಸಲಾಗಿದ್ದು, ಸಮಾಜದ ವಿವಿಧ ಸ್ಥರದ ಜನರು ದೇವಿಯ ರೂಪದಲ್ಲಿ ರಾಹುಲ್‌ಗಾಂಧಿಯನ್ನು ಬೆದರಿಸುತ್ತಿರುವ ಕಾರ್ಟೂನ್‌ಪ್ರಚಾರಕ್ಕೆ 80,000+80,000ದಂತೆ ಒಟ್ಟು 1.60 ಲಕ್ಷ ರೂ.ಯನ್ನು ಬಳಸಲಾಗಿದೆ.




ಈ ಚಿತ್ರದಲ್ಲಿ, ಭಾರತದ ಪ್ರತಿ ಮಹಿಳೆ ಶಕ್ತಿಯನ್ನು ಪ್ರತಿನಿಧಿಸುತ್ತದೆ ನೀವು ಯಾರೊಂದಿಗೆ ಹೋರಾಡಲು ಬಯಸುತ್ತೀರಿ? ಎಂದು ರಾಹುಲ್‌ ಗಾಂಧಿಯನ್ನು ದೇವಿ ಪ್ರಶ್ನಿಸುತ್ತಿದ್ದು, ದೇವಿಯ ವಿವಿಧ ಕೈಗಳಲ್ಲಿ ಸಮಾಜದ ವಿವಿಧ ಸ್ಥರದ ಜನರನ್ನು ಹೆಸರಿಸಲಾಗಿದೆ.



ಇದೇ ರೀತಿಯ ಇನ್ನೊಂದು ಕಾರ್ಟೂನ್‌ ಅನ್ನೂ ಪ್ರಕಟಿಸಲಾಗಿದ್ದು, ಅದಕ್ಕೆ ಒಟ್ಟು 1,25,000ರೂ.ಯನ್ನು ವ್ಯಯಿಸಲಾಗಿದೆ.



ಈ ಚಿತ್ರದಲ್ಲಿ ರಾಹುಲ್‌ ಗಾಂಧಿಯ ಸೊಂಟದ ಕೆಳಗಡೆ ಕಾಂಗ್ರೆಸ್‌ ನ ಲೋಗೋ ಇಟ್ಟಿದ್ದು, ಪಕ್ಕದಲ್ಲೇ ಇರುವ ಅಂಗಡಿಗೆ ಮೊಹೋಬತ್‌ ಕಿ ದುಕನ್‌ ಕರ್ನಾಟಕ ಎಂದು ಹೆಸರಿಸಲಾಗಿದೆ. ಅದರಲ್ಲಿ ವ್ಯಕ್ತಿಯೋರ್ವನನ್ನು ಟೋಪಿಧಾರಿ ವ್ಯಕ್ತಿ ಥಳಿಸುವಂತೆ ಚಿತ್ರಿಸಲಾಗಿದೆ. ಈ ವೇಳೆ ಮಾಧ್ಯಮಗಳ ಮುಂದೆ ರಾಹುಲ್‌ “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತಿದ್ದೇವೆ” ಎಂದು ಹೇಳುವಂತೆ ಈ ಉಲ್ಲೇಖಿಸಲಾಗಿದೆ.




ಇಂತಹ ಅರ್ಥವಿಲ್ಲದ ಪೋಸ್ಟ್‌ ಗಳಿಗಾಗಿ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಹಣವನ್ನು ಫೇಸ್‌ಬುಕ್‌ ಗೆ ನೀಡಲಾಗಿದೆ. ಈ ಕನ್ನಡ ಸಂಗಮಂ ಪೇಜ್‌ ಕರ್ನಾಟಕದಲ್ಲಿ ಜನವರಿಯಿಂದ ಮಾರ್ಚ್‌ ತಿಂಗಳ ನಡುವೆ ಬರೋಬ್ಬರಿ 13,41,014 ರೂ.ಗಳನ್ನು ಖರ್ಚು ಮಾಡಿದೆ.

ಎಪ್ರಿಲ್‌ ತಿಂಗಳಿನಲ್ಲಿ ಇದೇ ಪೇಜ್‌ ಒಟ್ಟು 4,37,024ರೂ.ಗಳನ್ನು ಖರ್ಚು ಮಾಡಿದೆ. ಡಿ.ಕೆ. ಸುರೇಶ್‌ ವಿರುದ್ಧದ ಪೋಸ್ಟ್‌ ಒಂದಕ್ಕೆ ಒಂದರಿಂದ ಒಂದೂವರೆ ಲಕ್ಷ ರೂಗಳಷ್ಟು ವ್ಯಯಿಸಲಾಗಿದೆ. ಮೊದಲು ಪ್ರಕಟ ಮಾಡಿದ ಕಂಟೆಂಟ್‌ ಗಳಿಗಿಂತ ವಿಭಿನ್ನವಾದ ಮತ್ತು ಹೆಚ್ಚು ಪರಿಣಾಮಕಾರಿ ವಿಚಾರಗಳನ್ನು ಪ್ರಕಟಿಸಲಾಗಿದೆ.

ಎಲ್ಲಾ ರಾಜಕೀಯ ಜಾಹೀರಾತುಗಳು, ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ ವೆಬ್‌ಸೈಟ್‌ಗಳಲ್ಲಿ ಸಹ ಪೂರ್ವ-ಪ್ರಮಾಣೀಕರಣವನ್ನು ಹೊಂದಿರಬೇಕು ಎಂಬುವುದು ಚುನಾವಣಾ ಆಯೋಗದ ಶರತ್ತಾಗಿತ್ತು. ಅಲ್ಲದೇ ರಾಜಕೀಯ ಜಾಹೀರಾತುಗಳ ಮೇಲಿನ ಎಲ್ಲಾ ನಿಷೇಧಗಳು ಸಾಮಾಜಿಕ ಮಾಧ್ಯಮಕ್ಕೂ ಅನ್ವಯಿಸುತ್ತದೆ. ಆದರೂ, MemeXpress ಮತ್ತು ಕನ್ನಡ ಸಂಗಮಮ್‌ನಂತಹ ಪೇಜ್‌ ಗಳು ಈ ಎಲ್ಲಾ ಶರತ್ತುಗಳನ್ನು ಉಲ್ಲಂಘಿಸುವಂತೆ ಕಂಡುಬರುತ್ತಿದೆ.

Ekō, ಇಂಡಿಯಾ ಸಿವಿಲ್ ವಾಚ್ ಇಂಟರ್‌ನ್ಯಾಶನಲ್ (ICWI) ಮತ್ತು ಫೌಂಡೇಶನ್ ದಿ ಲಂಡನ್ ಸ್ಟೋರಿ (TLS) ಎಂಬ ಮೂರು ಸಂಸ್ಥೆಗಳ ಸಂಶೋಧಕರು 90 ದಿನಗಳ ಅವಧಿಯಲ್ಲಿ ಇಂತಹಾ ಜಾಹೀರಾತುದಾರರ ಹಿನ್ನೆಲೆಯನ್ನು ಪರಿಶೀಲಿಸುವ ಸಲುವಾಗಿ ಮೆಟಾ ಆಡ್ ಲೈಬ್ರರಿ, ವಿಶೇಷವಾಗಿ ಉಲ್ಟಾ ಚಶ್ಮಾ ನೆಟ್‌ವರ್ಕ್ ಕುರಿತು ತನಿಖೆ ನಡೆಸಿದರು. ಮಾರ್ಚ್ 25 ರಂದು ಈ ತೊಂಬತ್ತು ದಿನಗಳ ಅವಧಿ ಮುಕ್ತಾಯವಾಗಿತ್ತು.

ರಾಜಕೀಯ ಪಕ್ಷಗಳು ಚುನಾವಣೆಗೆ ಮುಂಚೆಯೇ ಹೊಸ ಪೇಜ್‌ಗಳನ್ನು ಏಕೆ ಸ್ಥಾಪಿಸುತ್ತವೆ ಮತ್ತು ಅವುಗಳ ಮೂಲಕ ಜಾಹೀರಾತುಗಳನ್ನು ಚಲಾಯಿಸುತ್ತವೆ ಎಂದು ಕೇಳಿದಾಗ, ಎಕೋದ ಸಂಶೋಧಕರಾದ ಮಾಯಿನ್ ಹಮ್ಮದ್, “ಚುನಾವಣೆಗಿಂತ ಮುಂಚಿನ ಅವಧಿಯು ಮತದಾನದ ಮೇಲೆ ಪ್ರಭಾವ ಬೀರಲು ಸುಲಭವಾಗುತ್ತದೆ ಮತ್ತು ಅಲ್ಗಾರಿದಮ್ ಗಳು ಈ ಜಾಹೀರಾತುಗಳ ಪ್ರಕಾಶಕರಿಗೆ ನಗರಗಳು, ರಾಜ್ಯಗಳು ಮತ್ತು ದೇಶದ ವಿಭಾಗಗಳಿಗೆ ಜಾಹೀರಾತುಗಳನ್ನು ಹೈಪರ್-ಟಾರ್ಗೆಟ್ ಮಾಡಲು ಅನುಮತಿಸುತ್ತದೆ. ನಾವು ಬಹಿರಂಗಪಡಿಸಿದ ಜಾಹೀರಾತುಗಳ ಲೈಬ್ರರಿಯಲ್ಲಿನ ಹಲವು ಜಾಹೀರಾತುಗಳು ಕೆಲವು ಮಟ್ಟದ ಗುರಿಯನ್ನು ಹೊಂದಿವೆ. ಇದು ಪ್ರಕಾಶಕರಿಗೆ ಮೆಟಾದ ಸಾಮಾನ್ಯ ನೀತಿ ನಿಯಮಗಳನ್ನು ಉಲ್ಲಂಘಿಸಿ ತಮಗೆ ಬೇಕಾದ ಸಂದೇಶಗಳನ್ನು ಚುನಾವಣೆಗೆ ಮುಂಚೆಯೇ ಹಂಚಿಕೊಳ್ಳಲು ಅನುಮತಿಸುತ್ತದೆ" ಎಂದು ಹೇಳುತ್ತಾರೆ.

2024 ರ ಚುನಾವಣೆಯ ಸಂದರ್ಭದಲ್ಲಿ ದ್ರಾವಿಡ ಮುನ್ನೇಟ್ರ ಕಳಗಂನ ಜಾಹೀರಾತು ಪ್ರಚಾರದ ಉಸ್ತುವಾರಿ ವಹಿಸಿದ್ದ ಪಾಪ್ಯುಲಸ್ ಎಂಪವರ್‌ಮೆಂಟ್ ನೆಟ್‌ವರ್ಕ್‌ನ ವಿಜಯ್ ಎಂ ಅವರೊಂದಿಗೆ ಮಾತನಾಡಿದಾಗ, ಮೆಟಾದಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗಾಗಿ ಚುನಾವಣಾ ಆಯೋಗಕ್ಕೆ (EC) ರಾಜಕೀಯ ಪಕ್ಷಗಳ ಹೊಣೆಗಾರಿಕೆಯ ಬಗ್ಗೆ ಅವರು ಮಾತನಾಡಿದರು. “ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸುವಾಗ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. ಇತರ ಪುಟಗಳನ್ನು EC ಗೆ ವರದಿ ಮಾಡಲಾಗುವುದಿಲ್ಲ. Google ನಲ್ಲಿನ ಪ್ರತಿ ಚುನಾವಣಾ ಜಾಹೀರಾತಿಗೆ, EC ಯಿಂದ ಮಾನ್ಯವಾದ ಪೂರ್ವ-ಪ್ರಮಾಣಪತ್ರದ ಅಗತ್ಯವಿದೆ, ಇದು ಸೃಜನಶೀಲ ಐಡಿಯನ್ನು ಒಳಗೊಂಡಿರುತ್ತದೆ. ಪೂರ್ವ-ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಿದ ನಂತರ ಈ ಐಡಿಯನ್ನು ನಮೂದಿಸಬೇಕು. ಹೀಗಿದ್ದರೂ, ಮೆಟಾದಲ್ಲಿ ಜಾಹೀರಾತುಗಳನ್ನು ಚಲಾಯಿಸಲು ಅಂತಹ ಯಾವುದೇ ಅವಶ್ಯಕತೆಗಳಿಲ್ಲ" ಎಂದು ಅವರು ಹೇಳುತ್ತಾರೆ.

ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ (Fir Ek bar Modi Sarkar)

ಇದು ಉತ್ತರಪ್ರದೇಶವನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾಚಾರಿಸುತ್ತಿದೆ. ಕೇವಲ ಉತ್ತರಪ್ರದೇಶ ಮಾತ್ರವಲ್ಲದೇ ಉತ್ತರ ಭಾರತದ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಈ ಪೇಜ್‌ ಮೂಲಕ ವಿವಿಧ ಕಂಟೆಂಟ್‌ ಗಳನ್ನು ಹರಿಯಬಿಡಲಾಗಿದೆ. ಇದರಲ್ಲಿ ಬಹುತೇಕ ಜಾಹೀರಾತುಗಳನ್ನು ಫೇಸ್‌ಬುಕ್‌ ರಿಮೂವ್‌ ಮಾಡಿದ್ದರೆ, ಕೆಲವನ್ನು ಅಳಿಸಿ ಹಾಕಲಾಗಿದೆ.




ಮೋದೀಜಿಗೆ ಮತ ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡಿ ಎಂದು ಹೇಳುವ ಈ ಪೋಸ್ಟ್‌ ಅನ್ನು ಹಲವು ಬಾರಿ ಜಾಹೀರಾತಿನಲ್ಲಿ ಶೇರ್‌ ಮಾಡಲಾಗಿದ್ದು, ಇದಕ್ಕಾಗಿ ಒಟ್ಟು 1,25,000 ರೂ. ಯಿಂದ ಒಂದೂವರೆ ಲಕ್ಷ ರೂ.ವರೆಗೆ ವ್ಯಯಿಸಲಾಗಿದೆ.

ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ ಫೇಸ್‌ಬುಕ್‌ ಪೇಜ್‌ 2016ರಲ್ಲಿ ಪ್ರಾರಂಭವಾಯಿತು. ರಾಜಕೀಯವಾಗಿ ಹೆಚ್ಚಿನ ಖರ್ಚು ಮಾಡಿದ ಪೇಜ್‌ಗಳಲ್ಲಿ ಇದೂ ಒಂದು. ಕೇವಲ ಎಪ್ರಿಲ್‌ ತಿಂಗಳಿನಲ್ಲಿ ಈ ಪೇಜ್‌ 69 ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ವ್ಯಯಿಸಿದ್ದು, ಟಾಪ್‌ ರಾಜಕೀಯ ಖರ್ಚುದಾರರದಲ್ಲಿ ಏಳನೇ ಸ್ಥಾನದಲ್ಲಿದೆ. ಜನವರಿ ಮತ್ತು ಮಾರ್ಚ್‌ ತಿಂಗಳ ನಡುವೆ ಈ ಪೇಜ್‌ ಕರ್ನಾಟಕವೊಂದರಲ್ಲೇ 6.59 ಲಕ್ಷ ರೂ. ವ್ಯಯಿಸಿದೆ. ಇದು ಬಿಜೆಪಿ ಪರವಾಗಿರುವ ಪೇಜ್‌ ಆಗಿದ್ದು, ಸದಾ ವಿರೋಧ ಪಕ್ಷಗಳ ವಿರುದ್ಧ ದಾಳಿ ನಡೆಸುತ್ತಿರುತ್ತದೆ. ಆಗಾಗ್ಗೆ ಮೆಟಾ ಆಡ್ ಲೈಬ್ರರಿ ನೀತಿಗಳನ್ನು ಉಲ್ಲಂಘಿಸುತ್ತದೆ. ಜನವರಿಯಿಂದ ಮಾರ್ಚ್ ವರೆಗೆ, ಕರ್ನಾಟಕದಲ್ಲಿ ಮೆಟಾ ಜಾಹೀರಾತು ಮಾನದಂಡಗಳಿಗೆ ಬದ್ಧವಾಗಿಲ್ಲದ ಕಾರಣಕ್ಕಾಗಿ 74 ಜಾಹೀರಾತುಗಳನ್ನು ಡಿಲೀಟ್‌ ಮಾಡಲಾಗಿದೆ.

ಜನವರಿ ಮತ್ತು ಮಾರ್ಚ್ ನಡುವಿನ ಹೆಚ್ಚಿನ ಜಾಹೀರಾತುಗಳು ಮೋದಿ ಮತ್ತು ಅಯೋಧ್ಯೆ ರಾಮಮಂದಿರದ ಕುರಿತು ರಸಪ್ರಶ್ನೆಗಳನ್ನು ಒಳಗೊಂಡಿವೆ. ಪ್ರಧಾನಿ ಮೋದಿ ಮತ್ತೆ ಆಯ್ಕೆ ಆಗಲು ಬೆಂಬಲಿಸಿ ಎಂದು ಬಳಕೆದಾರರನ್ನು ಒತ್ತಾಯಿಸುವ ಪೋಸ್ಟ್‌ ಗಳೂ ಇವೆ. ಈ ಜಾಹೀರಾತುಗಳು, ಆಗಾಗ್ಗೆ ಮೋದಿಯನ್ನು ಧಾರ್ಮಿಕ ವ್ಯಕ್ತಿಯಂತೆ ಹೆಚ್ಚಾಗಿ ಬಿಂಬಿಸುತ್ತದೆ. ಹಿಂದಿ, ಇಂಗ್ಲಿಷ್, ಮಲಯಾಳಂ, ತಮಿಳು ಮತ್ತು ಬಂಗಾಳಿ ಭಾಷೆಗಳಲ್ಲಿ ಪೋಸ್ಟ್‌ ಗಳನ್ನು ಪ್ರಕಟಿಸಲಾಗಿದೆ. ಈ ಜಾಹೀರಾತುಗಳ ಮುಖಾಂತರ ಬಳಕೆದಾರರನ್ನು ವೆಬ್‌ಸೈಟ್‌ ಒಂದಕ್ಕೆ ಲಾಗಿನ್‌ ಆಗುವಂತೆಯೂ ಸೂಚಿಸಲಾಗಿದ್ದು, ಅಲ್ಲಿ ಅವರು ಬಿಜೆಪಿಗೆ ವೋಟು ನೀಡುವ ಕುರಿತ ಪ್ರತಿಜ್ಞಾ ಪ್ರಮಾಣಪತ್ರವನ್ನು ಡೌನ್ಲೋಡ್‌ ಮಾಡಬಹುದಾಗಿದೆ. ಈ ವೇಳೆ ಹೆಸರು ಮತ್ತು ಮೊಬೈಲ್‌ ಸಂಖ್ಯೆಯನ್ನೂ ನಮೂದಿಸಬೇಕಾಗಿದ್ದು, ಇದರಿಂದಾಗಿ ಬಿಜೆಪಿಗೆ ಸುಲಭದಲ್ಲಿ ಡೇಟಾಗಳು ಲಭ್ಯವಾಗುತ್ತದೆ.




ಜೆ-ಎಫ್‌ಎಸಿ ಎಂಬ ರಾಜಕೀಯ ಸಲಹಾ ಸಂಸ್ಥೆಯನ್ನು ನಡೆಸುತ್ತಿರುವ ಮುಹಮ್ಮದ್‌ ಇರ್ಫಾನ್‌ ಬಾಷಾ ಈ ಕುರಿತು ವಿವರಿಸಿದ್ದು, "ಈ ವಿಧಾನವು ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಹಿಂಬಾಕರೊಂದಿಗೆ ಸಂಪರ್ಕ ಸಾಧಿಸಲು ಸುಲಭ ಮಾರ್ಗವಾಗಿದೆ. ಇಲ್ಲಿ, ಮತದಾರರ ಫೋನ್‌ ನಂಬರ್‌ ಪಡೆದುಕೊಳ್ಳುವುದರಲ್ಲಿ ವಿಶೇಷವೇನೂ ಇಲ್ಲ ಆದರೆ ತಮ್ಮ ಪಕ್ಷ ಅಥವಾ ಸಿದ್ಧಾಂತದಲ್ಲಿ ಪ್ರಬಲವಾದ ನಂಬಿಕೆ ಹೊಂದಿರುವವರು ಮಾತ್ರ ಪ್ರತಿಜ್ಞಾ ಪತ್ರವನನು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ನೈಜ ಬೆಂಬಲಿಗರ ಪತ್ತೆಗೆ ಸಹಾಯವಾಗುತ್ತದೆ" ಎಂದು ಇರ್ಫಾನ್‌ ಹೇಳುತ್ತಾರೆ.









ಮುಂದುವರಿದು, “ಇಂದಿನ ಕಾಲದಲ್ಲಿ ಒಂದು ಕ್ಷೇತ್ರದ ಮತದಾರರ ದೂರವಾಣಿ ಸಂಖ್ಯೆಗಳನ್ನು ಪಡೆಯುವುದು ಕಷ್ಟವೇನಲ್ಲ. ನೀವು ಒಂದು ಕ್ಷೇತ್ರದ ಎಲ್ಲಾ 20 ಲಕ್ಷ ಜನರಿಗೆ ಪ್ರಚಾರದ ಸಂದೇಶಗಳನ್ನು ಕಳುಹಿಸಬಹುದು ಮತ್ತು ಕರೆ ಮಾಡಬಹುದು. ಆದಾಗ್ಯೂ, ಅವರೆಲ್ಲರೂ ನಿಮ್ಮ ಪಕ್ಷ ಅಥವಾ ಸಿದ್ಧಾಂತದಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಮತ್ತೊಂದೆಡೆ, ಬೆಂಬಲವನ್ನು ವಾಗ್ದಾನ ಮಾಡುವ ಪ್ರಮಾಣಪತ್ರವನ್ನು ಪಡೆಯುವವರು ಖಂಡಿತಾ, ಪ್ರಧಾನಿ ಮೋದಿಯ, ಬಿಜೆಪಿಯ ಸಮರ್ಪಿತ ಬೆಂಬಲಿಗರು. ಅಂತಹ ಆನ್‌ಲೈನ್ ಅಭಿಯಾನಗಳ ಮೂಲಕ, ಪಕ್ಷಗಳು ತಮ್ಮ ನಿಜವಾದ ಬೆಂಬಲಿಗರನ್ನು ಗುರುತಿಸಬಹುದು ಮತ್ತು ಅವರಿಗೆ ಬೇಕಾದಂತಹ ವಿಷಯವನ್ನು ಕಳುಹಿಸಬಹುದು" ಎಂದು ಹೇಳುತ್ತಾರೆ.




ತಮಿಳು ಮತ್ತು ಮಳಯಾಲಂ ಭಾಷೆಗಳಲ್ಲಿ ಈ ಪೇಜ್‌ ಒಟ್ಟು 183 ಜಾಹೀರಾತುಗಳನ್ನು ಪ್ರಕಟಿಸಿದೆ. ಪ್ರತಿಜ್ಷೆಗೆ ಸಂಬಂಧಿಸಿದ ಒಟ್ಟು ಇಪ್ಪತ್ತು ಜಾಹೀರಾತುಗಳನ್ನು ನೀತಿ ಉಲ್ಲಂಘನೆಯ ಹೆಸರಿನಲ್ಲಿ ಡಿಲೀಟ್‌ ಮಾಡಲಾಗಿದೆ.

ಎಪ್ರಿಲ್‌ ನಿಂದ ಪ್ರಾರಂಭವಾಗಿ, ಈ ಪೇಜ್‌ ಮತದಾರರ ಮೇಲೆ ಪ್ರಭಾವ ಬೀರಲು ಅಭಿವೃದ್ಧೀ ವಿರೋಧಿ, ರಾಷ್ಟ್ರ ವಿರೋಧಿಗಳೆಂದು ವಿರೋಧ ಪಕ್ಷಗಳನ್ನು ಬಿಂಬಿಸಿ ಹಲವು ವೀಡಿಯೊಗಳನ್ನು ಪ್ರಕಟಿಸಿದೆ. ಮೂಲತಃ ಹಿಂದಿಯಲ್ಲಿ ಈ ಜಾಹೀರಾತುಗಳನ್ನು ರಚಿಸಲಾಗಿದ್ದು, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಡಬ್‌ ಮಾಡಲಾಗಿದೆ.



ಉದಾಹರಣೆಗೆ, ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಾ ನಿಂತಿರುವ ಎಡಪಂಥೀಯ ಬೆಂಬಲಿಗ ವಿದ್ಯಾರ್ಥಿಗಳನ್ನು ವೀಡಿಯೊವೊಂದು ಅಪಹಾಸ್ಯ ಮಾಡುತ್ತದೆ. GNU ಎಂದು ಬರೆದಿರುವ ಪ್ಲೇಕಾರ್ಡ್‌ ಅನ್ನು ಅವರು ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ಇದು ಜವಹರಲಾಲ್‌ ನೆಹರೂ ಯುನಿವರ್ಸಿಟಿ ಅಂದರೆ JNU ವನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ವೀಡಿಯೊದಲ್ಲಿ ವಿದ್ಯಾರ್ಥಿಗಳು, ನಮಗೆ ಇನ್ನುಮುಂದೆ ಈ ದೇಶವನ್ನು ನಾಷ ಮಾಡಲು ಸಾಧ್ಯವಿಲ್ಲ ಎಂಬ ನಿರಾಶೆಯನ್ನು ವ್ಯಕ್ತಪಡಿಸುತ್ತಾರೆ. ಈ ಹಿಂದೆ ನಾವು ರಾಷ್ಟ್ರ ಮತ್ತು ಧರ್ಮವನ್ನು ಅಪಹಾಸ್ಯ ಮತ್ತು ಅವಮಾನ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುತ್ತಿದ್ದು, ಮೋದಿ ಸರಕಾರದಿಂದಾಗಿ ಮುಂದೆ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ವೀಡಿಯೊದಲ್ಲಿ ಅವರು ಹೇಳುತ್ತಾರೆ. ಇದೇ ವೇಳೆ ವೀಡಿಯೊದಲ್ಲಿ ಬಿಜೆಪಿ ಸರಕಾರ ಮತ್ತು ಅಯೋಧ್ಯೆ ರಾಮಮಂದಿರ ನಿರ್ಮಾಣವನ್ನೂ ಹೊಗಳಲಾಗುತ್ತದೆ.

ಕೇವಲ ತಮಿಳುನಾಡಿನಲ್ಲಿ ಈ ವೀಡಿಯೊವನ್ನು ಹದಿನಾರು ಬಾರಿ ರನ್‌ ಮಾಡಲಾಗಿದೆ. ಇದಕ್ಕಾಗಿ 1.25 ಲಕ್ಷ ರೂ.ಯನ್ನು ವೆಚ್ಚ ಮಾಡಲಾಗಿದೆ. ಏಳು ಬಾರಿ ಮಲಯಾಳಂನಲ್ಲೂ ರನ್‌ ಮಾಡಲಾಗಿದ್ದು, ಲಕ್ಷದ್ವೀಪದಲ್ಲೂ ವಿಶೇಷವಾಗಿ ತೋರಿಸಲಾಗಿದೆ. ಇನ್ನೊಂದು ವೀಡಿಯೋದಲ್ಲಿ ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಭಾರತಕ್ಕೆ ದಾಳಿ ಮಾಡಲಾಗದೇ ನಿರಾಶೆಯಲ್ಲಿರುವ ಭಯೋತ್ಪಾದಕನನ್ನು ತೋರಿಸಲಾಗಿದೆ.



ʼಮೋದಿ ನಮ್ಮ ಅವಶ್ಯಕತೆʼ ಅಂದರೆ ಮೋದಿ ಝರೂರೀ ಹೇ ಎಂಬ ಸರಣಿಯಲ್ಲಿ ಹಲವಾರು ಸಣ್ಣ ವೀಡಿಯೋಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಬಿಜೆಪಿ ಸರಕಾರದ ವಿವಿಧ ಯೋಜನೆಗಳನ್ನು, ಆಶ್ವಾಸನೆಗಳನ್ನು ತೋರಿಸಲಾಗಿದೆ. ವಿವಿಧ ನಟರನ್ನು ಬಳಸಿ ಈ ಯೋಜನೆಗಳ ಫಲಾನುಭವಿಗಳಂತೆ ಬಿಂಬಿಸಲಾಗಿದೆ ಮತ್ತು ಯಾಕೆ ಪ್ರಧಾನಿ ಮೋದಿಯನ್ನು ಆರಿಸುವ ಅಗತ್ಯವಿದೆ ಎನ್ನುವುದನ್ನೂ ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ.


ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೇಂದ್ರದಲ್ಲಿ ಮೂರನೇ ಬಾರಿಗೆ ಪುನರಾಯ್ಕೆಯಾದರೆ, "2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಬಿಡ್ ಮಾಡಲು ಅನುಕೂಲವಾಗುತ್ತದೆ" ಎಂದು ಹೇಳಿದೆ. ಈ ಭರವಸೆಯ ಮೇಲೆ ಒಟ್ಟು ಹದಿನಾರು ಜಾಹೀರಾತುಗಳನ್ನು ರನ್‌ ಮಾಡಲಾಗಿದೆ.

"ನನಗೆ ದೊರಕಿರುವ ಮೆಡಲ್‌ ಗಳು, ಪ್ರಶಸ್ತಿಗಳು, ಜೋರ್ಡನ್‌ ಸೈನ್‌ ಮಾಡಿರುವ ಬಾಸ್ಕೆಟ್‌ ಬಾಲ್‌ ಗಳು ಇವೆಲ್ಲವನ್ನೂ ಬೇಕಾದರೆ ಮಾರುತ್ತೇನೆ. ಆದರೆ ಭಾರತದ ಕುರಿತು ಅಂತಾರಾಷ್ಟ್ರೀಯವಾಗಿ ಯಾವುದೇ ಅಸಂಬದ್ಧ ಮಾತುಗಳನ್ನಾಡುವುದಿಲ್ಲ" ಎಂದು ಬಾಸ್ಕೆಟ್‌ ಬಾಲ್‌ ಆಟಗಾರ್ತಿಯ ಪಾತ್ರ ಮಾಡಿರುವ ಯುವತಿ ಹೇಳುತ್ತಿರುವುದು ಈ ಜಾಹೀರಾತಿನಲ್ಲಿದೆ. ಈ ಜಾಹೀರಾತಿನಲ್ಲೂ ಪ್ರಧಾನಿ ಒಲಿಂಪಿಕ್ಸ್‌ ಆಯೋಜಿಸುತ್ತಾರೆ ಎಂಬ ಭರವಸೆಯನ್ನೂ ನೀಡಲಾಗಿದೆ ಮತ್ತು ಹಲವು ಭಾರತೀಯ ಕ್ರೀಡಾಪಟುಗಳನ್ನು ಪರೋಕ್ಷವಾಗಿ ಅವಮಾನಿಸಲಾಗಿದೆ.



ಇನ್ನು ಕೇರಳದಲ್ಲಿ ಕಮ್ಯೂನಿಸ್ಟ್‌ ಮತ್ತು ಕಾಂಗ್ರೆಸ್‌ ಸರಕಾರಗಳು ದೇವಸ್ಥಾನಗಳ ಹಣವನ್ನು ಲೂಟಿ ಮಾಡುತ್ತಿವೆ ಎಂಬರ್ಥದ ವೀಡಿಯೊವೊಂದನ್ನು ಪ್ರಕಟಿಸಲಾಗಿದೆ. ಈ ವೀಡಿಯೋದಲ್ಲಿ ಕಾಂಗ್ರೆಸ್‌ ಮತ್ತು ಕಮ್ಯೂನಿಸ್ಟರು ಕೇರಳದ ಎರಡು ಪ್ರಮುಖ ದೇವಳಗಳನ್ನು ನಿರ್ನಾಮ ಮಾಡಲು ಸಂಚು ಹೂಡಿದ್ದಾರೆಂದು ಆರೋಪಿಸಲಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದೇವಸ್ಥಾನಗಳನ್ನು ಕಬಳಿಸುತ್ತಿರುವ ರೀತಿಯಲ್ಲಿ ಜಾಹೀರಾತಿನಲ್ಲಿ ಚಿತ್ರಿಸಲಾಗಿದೆ.

ಎಪ್ರಿಲ್‌ ತಿಂಗಳಿನಲ್ಲಿ ಈ ಪೇಜ್‌ ಕೆಲವು ವಿಭಿನ್ನವಾದ ಕಂಟೆಂಟ್‌ ಗಳನ್ನು ಪ್ರಕಟಿಸಿದೆ.

Mahathugbandhan - महाठगबंधन

ಈ ವರದಿಯಲ್ಲಿ ಮೇಲೆ ಉಲ್ಲೇಖಿಸಿರುವ ಹಲವು ಪೇಜ್‌ ಗಳಂತೆಯೇ ಈ ಪೇಜ್‌ ಕೂಡಾ ಬಿಜೆಪಿ ಪರವಾದ ಪೋಸ್ಟ್‌ ಗಳನ್ನು ಮತ್ತು ವಿರೋಧ ಪಕ್ಷಗಳ ವಿರುದ್ಧ ದಾಳಿ ನಡೆಸುವಂತಹ ವಿಚಾರಗಳನ್ನು ಹೆಚ್ಚಾಗಿ ಪೋಸ್ಟ್‌ ಮಾಡುತ್ತದೆ. ಇದು ಭಾರತಾದ್ಯಂತ ಹಲವು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಉಳಿದೆಲ್ಲಾ ಪೇಜ್‌ ಗಳಿಗಿಂತ ವಿಭಿನ್ನವಾಗಿ ಈ ಪೇಜ್‌ ನಲ್ಲಿ ವ್ಯಂಗ್ಯ ಮತ್ತು ಅಪಪ್ರಚಾರಗಳನ್ನು ನಡೆಸಲಾಗುತ್ತದೆ.


ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ್‌ ಕೇಜ್ರಿವಾಲ್‌ ರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಅವರ ವಿರುದ್ಧ ಕೆಟ್ಟದಾದ ಕಾರ್ಟೂನ್‌ ಗಳ ಮೂಲಕ ಮಾಡಿರುವ ವೀಡಿಯೋವೊಂದಕ್ಕೆ ಒಟ್ಟು 2.5-3 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಕೇವಲ 15 ಸೆಕೆಂಡ್‌ ಳಿರುವ ವೀಡಿಯೊವನ್ನು ಒಟ್ಟು ನಾಲ್ಕು ಬಾರಿ ಜಾಹೀರಾತಾಗಿ ರನ್‌ ಮಾಡಲಾಗಿದೆ.




ಈ ಪೇಜ್‌ ನಲ್ಲಿ ಹದಿನೈದು ಸೆಕೆಂಡ್‌ ಗಳ ಸಣ್ಣ ವೀಡಿಯೊಗಳನ್ನು ಹೆಚ್ಚಾಗಿ ಪ್ರಕಟಿಸಲಾಗಿದೆ. ಅರವಿಂದ್‌ ಕೇಜ್ರಿವಾಲ್ ರ ಬಳಿಕ ರಾಹುಲ್‌ ಗಾಂಧಿಯನ್ನು ಅಪಹಾಸ್ಯಗೈಯುವ ಮತ್ತು ಸುಳ್ಳು ಆರೋಪಗಳನ್ನು ಹೊರಿಸುವ ವೀಡಿಯೊವನ್ನ ಪ್ರಕಟಿಸಲಾಗಿದೆ. ರಾಹುಲ್‌ ಗಾಂಧಿ, ದೇವಸ್ಥಾನಕ್ಕೆ ತೆರಳುವವರು ಹೆಣ್ಣುಬಾಕರು ಎಂದು ಹೇಳಿದ್ದಾರೆಂದು ಇದರಲ್ಲಿ ಆರೋಪಿಸಲಾಗಿದೆ. ಈ ವೀಡಿಯೊವನ್ನು ಪ್ರಚಾರ ಮಾಡಲಿಕ್ಕಾಗಿ ಎರಡರಿಂದ ಎರಡೂವರೆ ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಒಂದು ಮಿಲಿಯನ್‌ ಗೂ ಹೆಚ್ಚಿನ ಜನರಿಗೆ ಇದನ್ನು ತಲುಪಿಸಲಾಗಿದೆ ಎಂದು ಮೆಟಾ ಮಾಹಿತಿ ನೀಡುತ್ತದೆ.



ಈ ಪೇಜ್‌ ಕೇವಲ ಕಾಂಗ್ರೆಸ್‌, ಆಮ್‌ ಆದ್ಮಿ ಮಾತ್ರವಲ್ಲದೇ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳ ನಾಯಕರುಗಳನ್ನು ಗುರಿಪಡಿಸಿದೆ. ಉದ್ಧವ್‌ ಠಾಕ್ರೆ, ಅಖಿಲೇಶ್‌ ಯಾದವ್‌, ಮಮತಾ ಬ್ಯಾನರ್ಜಿ ಸೇರಿದಂತೆ ಹಲವರನ್ನು ಗುರಿಪಡಿಸಿ ಸಣ್ಣ ವೀಡಿಯೊಗಳನ್ನು ಪ್ರಕಟಿಸಲಾಗಿದೆ. ಸರಿಸುಮಾರು ಇಂತಹಾ ವೀಡಿಯೊಗಳಿಗಾಗಿ ಒಂದು ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ವ್ಯಯಿಸಲಾಗಿದೆ. ಯಾವುದೇ ನಾಯಕರುಗಳ ಹೆಸರನ್ನು ಸರಿಯಾಗಿ ಹೇಳದೇ, ನಕಲಿ ಹೆಸರುಗಳ ಮೂಲಕ ಅವರನ್ನು ಬಿಂಬಿಸಲಾಗಿದೆ. ಉದಾಹರಣೆಗೆ ಕೇಜ್ರಿವಾಲ್‌ ರನ್ನು ಫೇಜ್ರಿವಾಲ್‌ ಎಂದೂ ಮಮತಾ ಬ್ಯಾನರ್ಜಿಯನ್ನ ನಿರ್ಮಮತಾ ದೀದಿ ಎಂದು ಉಲ್ಲೇಖಿಸಲಾಗಿದೆ.






ಬಹುತೇಕ ಒಂದೇ ರೀತಿಯ ವೀಡಿಯೊಗಳನ್ನು ಈ ಪೇಜ್‌ ನಲ್ಲಿ ಪ್ರಕಟಿಸಲಾಗಿದ್ದು, ವೀಡಿಯೊದಲ್ಲಿನ ಪ್ರಮುಖ ಪಾತ್ರಗಳನ್ನು ಮಾತ್ರ ಬದಲಾವಣೆ ಮಾಡಲಾಗುತ್ತದೆ.‌ ಒಂದು ವೀಡಿಯೋದಲ್ಲಿ ಅರವಿಂದ್‌ ಕೇಜ್ರಿವಾಲ್‌ ರನ್ನು ಭ್ರಷ್ಟಾಚಾರಿ ಎಂದು ಬಿಂಬಿಸಿದರೆ, ಇನ್ನಿತರ ವೀಡಿಯೋಗಳಲ್ಲಿ ಪ್ರಮುಖ ಪಾತ್ರಗಳನ್ನು ಬದಲಾವಣೆ ಮಾಡಿ ಇದೇ ಆರೋಪವನ್ನು ರಾಹುಲ್‌ ಗಾಂಧಿ, ಮಮತಾ ಬ್ಯಾನರ್ಜಿ ಮುಂತಾದವರ ಮೇಲೆ ಹೊರಿಸಲಾಗುತ್ತದೆ. ಈ ಪೇಜ್‌ ಕರ್ನಾಟಕವೊಂದರಲ್ಲೇ ಜನವರಿ ಮತ್ತು ಎಪ್ರಿಲ್‌ ತಿಂಗಳ ನಡುವೆ ಒಟ್ಟು 4,21,726 ರೂ.ಯನ್ನು ಖರ್ಚು ಮಾಡಿದೆ.

ಎಪ್ರಿಲ್‌ ತಿಂಗಳಿನಲ್ಲಿ ಇಂತಹದ್ದೇ ಶಾರ್ಟ್‌ ವೀಡಿಯೊಗಳನ್ನು ಈ ಪೇಜ್‌ ಪ್ರಕಟಿಸಿದೆ. ಎಪ್ರಿಲ್‌ ತಿಂಗಳೊಂದರಲ್ಲೇ ಒಟ್ಟು 2,05,153 ರೂ.ಯನ್ನು ವ್ಯಯಿಸಿದೆ. ಇನ್ನು ದೇಶಾದ್ಯಂತ ಪ್ರಕಟಿಸಿದ ಕಂಟೆಂಟ್‌ ಗಳಲ್ಲಿ ವಿರೋಧ ಪಕ್ಷಗಳನ್ನು ಅಣಕಿಸುವ ಮತ್ತು ಅವಹೇಳಿಸುವ ಪರೋಡಿ ಹಾಡೊಂದರ ಜಾಹೀರಾತಿಘಾಗಿ ಹತ್ತು ಲಕ್ಷ ರೂ.ಗೂ ಹೆಚ್ಚು ವ್ಯಯಿಸಲಾಗಿದೆ.


ಜನವರಿ-ಮಾರ್ಚ್‌ ಮತ್ತು ಎಪ್ರಿಲ್‌ ತಿಂಗಳಲ್ಲಿನ ಬದಲಾವಣೆಗಳು

ಜನವರಿಯಿಂದ ಮಾರ್ಚ್‌ ತಿಂಗಳ ಕೊನೆಯವರೆಗೆ ರಾಜಕೀಯ ಪಕ್ಷಗಳು ವ್ಯಯಿಸಿದ ಹಣ ಮತ್ತು ಶೇರ್‌ ಮಾಡಿದ ಕಂಟೆಂಟ್‌ ಗಳ ನಡುವೆ ಹಲವಾರು ವ್ಯತ್ಯಾಸಗಳಿವೆ. ನಾವು ಈ ಮೇಲೆ ನೀಡಿರುವ ಪೇಜ್‌ ಗಳು ಮಾತ್ರವಲ್ಲದೇ ಎಪ್ರಿಲ್‌ ನ ಸಂದರ್ಭದಲ್ಲಿ ಅಂದರೆ ಮತದಾನ ಹತ್ತಿರವಾಗುವ ಸಂದರ್ಭದಲ್ಲಿ ಹೊಸ ಪೇಜ್‌ ಗಳು ಉದ್ಭವವಾಯಿತು.






Nam Namo - ನಮ್ ನಮೋ

ಈ ಪೇಜ್‌ ಅನ್ನು ಎಪ್ರಿಲ್‌ ನ ಸಂದರ್ಭದಲ್ಲಿ ಹೆಚ್ಚು ಪ್ರಚಾರ ಮಾಡಲಾಯಿತು. ಕನ್ನಡದಲ್ಲೇ ಹಲವು ರೀತಿಯ ರಾಜಕೀಯಕ್ಕೆ ಸಂಬಂಧಿಸಿದ ಪೋಸ್ಟ್‌ ಗಳನ್ನು ಇದರಲ್ಲಿ ಪ್ರಚಾರ ಮಾಡಲಾಗಿದೆ. ಬಿಜೆಪಿ ಪರ ಇರುವ ಪೇಜ್‌ ನಲ್ಲಿ ವಿರೋಧ ಪಕ್ಷದ ನಾಯಕರುಗಳನ್ನು ಅಣಕಿಸುವ ಪೋಸ್ಟ್‌ ಗಳು ಹೆಚ್ಚಾಗಿ ಕಂಡು ಬರುತ್ತದೆ. ಎಪ್ರಿಲ್‌ ತಿಂಗಳೊಂದರಲ್ಲೇ ಈ ಪೇಜ್‌ ಕರ್ನಾಟಕದಲ್ಲಿ ಒಟ್ಟು 6,40,730 ರೂ.ಗಳನ್ನು ವ್ಯಯಿಸಿದೆ. ಇದೀಗ ಈ ಪೇಜ್‌ ಅನ್ನು ಡಿಲೀಟ್‌ ಅಥವಾ ಅನ್‌ಪಬ್ಲಿಶ್‌ ಮಾಡಲಾಗಿದೆ ಎಂದು ಮೆಟಾ ಡಾಟಾಗಳು ತಿಳಿಸಿವೆ.

ಕೆಳಗೆ ನೀಡಿರುವ ಉದಾಹರಣೆಯನ್ನು ನೋಡಿದರೆ, ಈ ಪೇಜ್‌ ಯಾವ ರೀತಿಯ ಕಂಟೆಂಟ್‌ ಗಳನ್ನು ಪ್ರಚಾರ ಮಾಡುತ್ತಿದೆ ಎನ್ನುವುದು ಅರಿವಾಗುತ್ತದೆ. “ಹನುಮನ ಸೈನ್ಯವನ್ನು ನಿಷೇಧಿಸಲು ಹೊರಟ ಕಾಂಗ್ರೆಸ್‌ ಗೆ ತಕ್ಕ ಪಾಠ ಕಲಿಸೋಣʼ ಎಂಬ ರೀತಿಯ ಧಾರ್ಮಿಕ ವಿಚಾರಗಳನ್ನು ರಾಜಕೀಕರಣಗೊಳಿಸುವ ಹಲವು ಪೋಸ್ಟ್‌ ಗಳು ಈ ಪೇಜ್‌ ನಲ್ಲಿ ಕಂಡು ಬರುತ್ತದೆ.

ಇದರ ಜೊತೆಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯವರನ್ನು ಕೀಳುಮಟ್ಟದಲ್ಲಿ ನಿಂದಿಸುವ ಪೋಸ್ಟ್‌ ಗಳೂ ಇವೆ. ಪೋಸ್ಟ್‌ ಒಂದರಲ್ಲಿ ರಾಹುಲ್‌ ಗಾಂಧಿಯನ್ನು ಇದಕ್ಕಾಗಿಯೇ ನಾವು ಪೆದ್ದ ಎಂದು ಕರೆಯುವುದು, ಆತ ಬಸ್‌ ನಲ್ಲಿ ಲೇಡೀಸ್‌ ಸೀಟ್‌ ನಲ್ಲಿ ಕುಳಿತಿದ್ದಾನೆ” ಎಂದು ವ್ಯಂಗ್ಯವಾಡಲಾಗಿದೆ.







ಖದೀಮ ಕಾಂಗ್ರೆಸ್‌

ಈ ಪೇಜ್‌ ಕೂಡಾ ಎಪ್ರಿಲ್‌ ತಿಂಗಳಿನಲ್ಲಿ ಹೆಚ್ಚು ಸಕ್ರಿಯವಾಗಿತ್ತು. ಜನವರಿಯಿಂದ ಮಾರ್ಚ್‌ ವರೆಗೆ ಇರದ ಈ ಪೇಜ್‌ ಎಪ್ರಿಲ್‌ ನಲ್ಲಿ ಉದ್ಭವವಾಯಿತು. ಹೆಚ್ಚಾಗಿ ಬಿಜೆಪಿ ಪರ ಪೋಸ್ಟ್‌ ಗಳನ್ನು ಮಾಡುವ ಈ ಪೇಜ್‌ ವಿರೋಧ ಪಕ್ಷವನ್ನು ಮತ್ತು ಅದರ ನಾಯಕರನ್ನು ಅವಹೇಳಿಸುತ್ತದೆ. ಎಪ್ರಿಲ್‌ ತಿಂಗಳಿನಲ್ಲಿ ಈ ಪೇಜ್‌ ಒಟ್ಟು 3,88,290 ರೂ. ಅನ್ನು ಜಾಹೀರಾತಿಗಾಗಿ ವ್ಯಯಿಸಿದೆ. ಕರ್ನಾಟಕದಲ್ಲಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ನಡೆದ ಕೊಲೆಗಳನ್ನು ರಾಜಕೀಯಕರಣಗೊಳಿಸಿದ ಹಲವು ಪೋಸ್ಟ್‌ ಗಳು ಈ ಪೇಜ್‌ ನಲ್ಲಿವೆ.

ಕರ್ನಾಟಕದಲ್ಲಿ ಚುನಾವಣೆ ನಡೆಯುವುದಕ್ಕಿಂತ ಒಂದು ವಾರ ಮೊದಲು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಮುಖಂಡನ ಪುತ್ರಿಯೋರ್ವಳನ್ನು ಹತ್ಯೆಗೈಯಲಾಗಿತ್ತು. ಪ್ರೇಮ ವಿಚಾರದಲ್ಲಿ ನಡೆದ ಈ ಕೊಲೆಗೆ ಬಳಿಕ ರಾಜಕೀಯ ಮತ್ತು ಧಾರ್ಮಿಕ ಬಣ್ಣ ಹಚ್ಚಲಾಗಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿ, “ನಿಮ್ಮ ಹೆಣ್ಣು ಮಕ್ಕಳ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಿ” ಎಂಬ ಪೋಸ್ಟ್‌ ಗಳನ್ನೂ ಹಂಚಿಕೊಳ್ಳಲಾಗಿದೆ.




Crafto (ಕ್ರಾಫ್ಟೋ)

ಈ ಪೇಜ್‌ ಎಲ್ಲಾ ಪೇಜ್‌ ಗಳಿಗಿಂತಲೂ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಮತದಾರರ ಡೇಟಾಗಳನ್ನು ಸಂಗ್ರಹಿಸುವ ಸಲುವಾಗಿ “ರಾಹುಲ್‌ ಗಾಂಧಿಯ ಫೋಟೊ ಜೊತೆಗೆ ನಿಮ್ಮ ಫೋಟೊವನ್ನು ಹಾಕಿ ಕಾಂಗ್ರೆಸ್‌ ಪಕ್ಷವನ್ನು ಪ್ರಚಾರ ಮಾಡಿ” ಎಂಬ ಶಾರ್ಟ್‌ ವೀಡಿಯೋ, ಅದರ ಜೊತೆಗೆ “ನರೇಂದ್ರ ಮೋದಿಯ ಫೋಟೊ ಜೊತೆಗೆ ನಿಮ್ಮ ಫೋಟೊವನ್ನು ಹಾಕಿ ಬಿಜೆಪಿ ಪಕ್ಷವನ್ನು ಪ್ರಚಾರ ಮಾಡಿ” ಎಂಬ ವೀಡಿಯೊಗಳನ್ನು ಪ್ರಕಟಿಸಲಾಗಿದೆ. ಇಂತಹಾ ವೀಡಿಯೊಗಳಿಗೆ ಸುಮಾರು ಹತ್ತು ಲಕ್ಷ ರೂ.ಗಳಿಗೂ ಹೆಚ್ಚಿನ ಹಣವನ್ನು ಈ ಪೇಜ್‌ ವ್ಯಯಿಸಿದೆ. ಈ ಪೇಜ್‌ ಅನ್ನು ಕುಟುಂಬ್‌ ಆಪ್‌ ನಿರ್ವಹಿಸುತ್ತಿದೆ. ಈ ಪೇಜ್‌ ಕರ್ನಾಟಕದಲ್ಲಿ ಎಪ್ರಿಲ್‌ ತಿಂಗಳಿನಲ್ಲಿ ಒಟ್ಟು 3,59,655 ರೂ. ವ್ಯಯಿಸಿದೆ.


ಜಯಪ್ರಕಾಶ್‌ ಹೆಗ್ಡೆ

ಇದು ಕಾಂಗ್ರೆಸ್‌ ಪಕ್ಷದಿಂದ ಉಡುಪಿ-ಚಿಕ್ಕಮಗಳೂರು ಲೋಸಕಸಭಾ ಚನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಯ ಅಧಿಕೃತ ಪೇಜ್‌ ಆಗಿದೆ. ಈ ಪೇಜ್‌ ನಲ್ಲಿ ಕಾಂಗ್ರೆಸ್‌ ಪಕ್ಷದ ಅಭಿವೃದ್ಧಿ ಕಾರ್ಯಗಳು ಮತ್ತು ಜಯಪ್ರಕಾಶ್‌ ಹೆಗ್ಡೆ ಮಾಡಿದಂತೆ ಅಭಿವೃದ್ಧಿ ಕಾರ್ಯಗಳ ಉಲ್ಲೇಖವಿದೆ. ಹೆಗ್ಡೆಯವರ ಅಧಿಕೃತ ಪೇಜ್ ಜನವರಿ-ಮಾರ್ಚ್‌ 2024 ರ ಸಂದರ್ಭದಲ್ಲಿ ಯಾವುದೇ ಹಣವನ್ನು ಜಾಹೀರಾತಿಗೆ ವ್ಯಯಿಸದಿದ್ದರೂ, ಈ ಪೇಜ್‌ ಜನರಿಯಿಂದ ಕೇವಲ ಎಪ್ರಿಲ್‌ ತಿಂಗಳಲ್ಲಿ ಒಟ್ಟು 3,42,698 ರೂ. ವ್ಯಯಿಸಿದೆ. ಜೆಪಿ ಫಾರ್ ಉಡುಪಿ ಚಿಕಮಗಳೂರು ಎಂಬ ಇನ್ನೊಂದು ಫ್ಯಾನ್‌ ಪೇಜ್‌ ಎಪ್ರಿಲ್‌ ನಲ್ಲಿ ಫೇಸ್‌ಬುಕ್‌ ನಲ್ಲಿ ಜಾಹೀರಾತು ನೀಡಲು 2,17,173ರೂ. ವ್ಯಯಿಸಿದೆ. ಜನವರಿ-ಮಾರ್ಚ್‌ ನಲ್ಲಿ 2,04,339 ರೂ. ಖರ್ಚು ಮಾಡಿದೆ.




ಮನ್ಸೂರ್‌ ಖಾನ್‌ ಫ್ಯಾನ್‌ ಕ್ಲಬ್

ಮನ್ಸೂರ್‌ ಅಲಿ ಖಾನ್‌ ಕಾಂಗ್ರೆಸ್‌ ಪಕ್ಷದಿಂದ ಬೆಂಗಳೂರು ಸೆಂಟ್ರಲ್ ಲೋಸಕಸಭಾ ಚನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಯಾಗಿದ್ದಾರೆ. ಇವರು ಅಧಿಕೃತ ಖಾತೆಯನ್ನು ಬಿಟ್ಟು ಮನ್ಸೂರ್‌ ಖಾನ್‌ ಫ್ಯಾ ಕ್ಲಬ್‌ ಎಂಬ ಫೇಸ್‌ಬುಕ್‌ ಪೇಜ್‌ ನಿಂದ ಜಾಹೀರಾತುಗಳನ್ನು ರನ್ ಮಾಡಿದ್ದಾರೆ. ಎಪ್ರಿಲ್‌ ತಿಂಗಳೊಂದರಲ್ಲಿ ಈ ಪೇಜ್‌ ಜಾಹೀರಾತಿಗಾಗಿ ಒಟ್ಟು 6,76,348 ರೂ. ಖರ್ಚು ಮಾಡಿದೆ. ಈ ಪೇಜ್‌ ನಲ್ಲಿ ಹೆಚ್ಚಾಗಿ ಮನ್ಸೂರ್‌ ಅಲಿ ಖಾನ್‌ ಗೆ ಮತ ನೀಡುವ ಕುರಿತು ಸಣ್ಣ ವೀಡಿಯೊಗಳನ್ನು ಮತ್ತು ಕಾಂಗ್ರೆಸ್‌ ಪಕ್ಷ ಮತ್ತು ರಾಹುಲ್‌ ಗಾಂಧಿಯವರ ಸಾಧನೆಗಳ ಕುರಿತ ವೀಡಿಯೊಗಳನ್ನು ಜಾಹೀರಾತಿಗಾಗಿ ರನ್‌ ಮಾಡಲಾಗಿದೆ.



ಕಾಂಗ್ರೆಸ್‌ ಮತ್ತು ಬಿಜೆಪಿಯ ಅಧಿಕೃತ ಪೇಜ್‌ಗಳು

ಇವೆಲ್ಲವೂ ಪಕ್ಷಗಳು ಬೇರೆಯೇ ಮೂಲಗಳನ್ನು ಅನುಸರಿಸಿ ಮಾಡಿದಂತಹಾ ಖರ್ಚು ವೆಚ್ಚಗಳಾಗಿದ್ದರೆ, ಅಧಿಕೃತ ಪೇಜ್‌ ಗಳಲ್ಲಿ ಅಧಿಕೃತವಾಗಿಯೇ ವ್ಯಯಿಸಿದಂತಹ ಮೊತ್ತಗಳು ಇಂತಿವೆ. ಕಾಂಗ್ರೆಸ್‌ ಪಕ್ಷವು ಜನವರಿ ಮತ್ತು ಮಾರ್ಚ್‌ ತಿಂಗಳ ನಡುವೆ 24,173 ರೂ. ಅಧಿಕೃತ ಪೇಜ್‌ ನಲ್ಲಿ ಖರ್ಚು ಮಾಡಿದ್ದರೆ, ಭಾರತೀಯ ಜನತಾ ಪಕ್ಷವು 30,01,966 ರೂ. ವ್ಯಯಿಸಿದೆ. ಎಪ್ರಿಲ್‌ ತಿಂಗಳೊಂದರಲ್ಲಿ ಕಾಂಗ್ರೆಸ್‌ ಪಕ್ಷವು 29,82,467 ರೂ. ವ್ಯಯಿಸಿದ್ದರೆ, ಬಿಜೆಪಿ ಪಕ್ಷವು 82,27,117ರೂ.ಗಳನ್ನು ಖರ್ಚು ಮಾಡಿದೆ. ಈ ಪೇಜ್‌ ಗಳಲ್ಲಿ ಹೆಚ್ಚಿನ ಕೋಮು ಧ್ರುವೀಕರಣ ಪೋಸ್ಟ್‌ ಗಳನ್ನು ಪ್ರಕಟಿಸದೇ ತಮ್ಮ ಪಕ್ಷಗಳ ಸಾಧನೆಗಳನ್ನು ಬಿಂಬಿಸುವ ಪೋಸ್ಟ್‌ ಗಳನ್ನು ಮಾಡಲಾಗಿದೆ. BJYM ಪೇಜ್‌ ನಲ್ಲಿ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ 1,37,470 ರೂ., ಮಹಿಳಾ ಮೋರ್ಚಾ ಬಿಜೆಪಿಯು 78,546, ಬಿಜೆಪಿ ಎಸ್ಸಿ ಮೋರ್ಚಾ 1,16,761 ರೂ. ಖರ್ಚು ಮಾಡಿದೆ. ಎಪ್ರಿಲ್‌ ನಲ್ಲಿ ಬಿಜೆಪಿ ಕರ್ನಾಟಕ ಪೇಜ್‌ ಒಟ್ಟು 8,27,007 ರೂ.ಯನ್ನು ಜಾಹೀರಾತಿಗಾಗಿ ವ್ಯಯಿಸಿದೆ.




ನಾಗರಿಕ ಸಮಾಜದ ಕಾಳಜಿಗಳು ಏನೇನು?

ಭಾರತದಲ್ಲಿ ಮೊದಲ ಹಂತದ ಚುನಾವಣೆ ನಡೆಯುವ ಮೊದಲು, ಹಲವಾರು ನಾಗರಿಕ ಸಮಾಜದ ಗುಂಪುಗಳು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಇಂತಹ ಬದಲಿ ಜಾಹೀರಾತುಗಳ ಬಗ್ಗೆ ಪತ್ರ ಬರೆದವು. ಔಪಚಾರಿಕ ಮತ್ತು ಅನೌಪಚಾರಿಕ ವಿಧಾನಗಳ ಮೂಲಕ ರಾಜಕೀಯ ಪಕ್ಷಗಳು ಮಾಡುತ್ತಿರುವ ಖರ್ಚುಗಳನ್ನು ಪತ್ತೆಹಚ್ಚುವಲ್ಲಿನ ತೊಂದರೆಯನ್ನು ಎತ್ತಿ ತೋರಿಸಿದವು. ಮಾರ್ಚ್ 2019 ರಿಂದ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನೈತಿಕ ಬಳಕೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ "ಸ್ವಯಂಪ್ರೇರಿತ ನೀತಿಸಂಹಿತೆ" ಯನ್ನು ಪತ್ರವು ಟೀಕಿಸಿದೆ. ಈ ನೀತಿಯಲ್ಲಿ ಪಾರದರ್ಶಕತೆಯ ಕೊರತೆಯಿದ್ದು, ಇದರಲ್ಲಿನ ಉಲ್ಲಂಘನೆಗಳನ್ನು ವರದಿ ಮಾಡಲು ನಾಗರಿಕರಿಗೆ ಯಾವುದೇ ಸುಲಭದ ವ್ಯವಸ್ಥೆಗಳಿಲ್ಲ ಎಂದು ಈ ಪತ್ರವು ಸೂಚಿಸಿತ್ತು. ಇದೇ ವೇಳೆ, ಒಂದು ಸ್ವತಂತ್ರ ಸಂಸ್ಥೆಯ ನೇತೃತ್ವದಲ್ಲಿ ಪಾರದರ್ಶಕವಾಗಿ ಮತ್ತು ಎಲ್ಲರೂ ಪಾಲ್ಗೊಳ್ಳುವ ಪ್ರಕ್ರಿಯೆಯ ಮೂಲಕ ವರದಿ ಮಾಡುವ ಕಾರ್ಯವಿಧಾನಗಳೊಂದಿಗೆ ಬೈಂಡಿಂಗ್ ಮಾದರಿ ನೀತಿ ಸಂಹಿತೆ (MCC) ಗೆ ಕರೆ ನೀಡಿವೆ.

ಮೆಟಾ ಪ್ರತಿಕ್ರಿಯೆ

ರಾಜಕೀಯ ಪಕ್ಷಗಳು ಮತ್ತು ಅವರ ಪ್ರಾಕ್ಸಿ ಪುಟಗಳು ಮೆಟಾದ ಜಾಹೀರಾತು ವ್ಯವಸ್ಥೆಯನ್ನ ಹೇಗೆ ಬಳಸಿಕೊಳ್ಳುತ್ತಿವೆ ಎಂಬುವುದರ ಕುರಿತ ನಿಲುವಿಗಾಗಿ ನಾವು ಮೆಟಾವನ್ನು ಸಂಪರ್ಕಿಸಿದಾಗ, ಅದರ ವಕ್ತಾರರು ಈಮೇಲ್‌ ಮೂಲಕ ಉತ್ತರಿಸಿದರು. "ಜಾಹೀರಾತುಗಳನ್ನು ಯಾರಾದರೂ ಉಲ್ಲಂಘನೆ ಮಾಡಿದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಅದಾಗ್ಯೂ ಮತ್ತೆ ಮತ್ತೆ ಪುನರಾವರ್ತನೆಯಾದರೆ ಜಾಹೀರಾತುದಾರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣೆಗಳು ಅಥವಾ ರಾಜಕೀಯದ ಕುರಿತು ಜಾಹೀರಾತುಗಳನ್ನು ಪ್ರದರ್ಶಿಸಲು ಬಯಸುವ ಜನರು ಅಧಿಕೃತ ಪ್ರಕ್ರಿಯೆಯ ಮೂಲಕವೇ ಹೋಗಬೇಕು. ನಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಎಲ್ಲಾ ಅನ್ವಯವಾಗುವ ಕಾನೂನುಗಳನ್ನು ಅನುಸರಿಸಲು ಬಳಕೆದಾರರು ಜವಾಬ್ದಾರರಾಗಿರುತ್ತಾರೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಪತ್ತೆಹಚ್ಚಿದ ವಿಧಾನ

ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಾಕ್ಸಿ ಅಥವಾ ಫ್ಯಾನ್ ಪೇಜ್‌ಗಳು ನಡೆಸುತ್ತಿರುವ ರಾಜಕೀಯ ಜಾಹೀರಾತುಗಳನ್ನು ವಿಶ್ಲೇಷಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ಈ ಉದ್ದೇಶಕ್ಕಾಗಿ, ನಾವು ಜನವರಿ ಮತ್ತು ಏಪ್ರಿಲ್ ನಡುವೆ ಕರ್ನಾಟಕದ ರಾಜಕೀಯ ಜಾಹೀರಾತುಗಳಿಗಾಗಿ ಮೆಟಾ ಜಾಹೀರಾತು ಲೈಬ್ರರಿಯಿಂದ ಡೇಟಾವನ್ನು ಹೊರತೆಗೆದಿದ್ದೇವೆ. ನಮ್ಮ ಅಧ್ಯಯನವು ಈ ಪಟ್ಟಿಯಲ್ಲಿನ ಅಗ್ರ 10 ಪುಟಗಳ ಮೇಲೆ ಕೇಂದ್ರೀಕರಿಸಿದೆ. ಬಿಜೆಪಿ ಅಥವಾ ಕಾಂಗ್ರೆಸ್ ಪರವಾಗಿ ಜಾಹೀರಾತುಗಳನ್ನು ಪ್ರದರ್ಶಿಸಿದ ಅನಧಿಕೃತ ಪುಟಗಳನ್ನು ಮತ್ತಷ್ಟು ಫಿಲ್ಟರ್ ಮಾಡಲಾಗಿದೆ. ನಂತರ ನಾವು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಎಂಗೇಜ್‌ಮೆಂಟ್ ಆಧಾರದ ಮೇಲೆ ಈ ಪುಟಗಳಿಂದ ಪೋಸ್ಟ್‌ಗಳನ್ನು ಪ್ರತ್ಯೇಕಿಸಿದ್ದೇವೆ.

ಮೆಟಾ ಆಡ್‌ ಲೈಬ್ರರಿಯು ಜಾಹೀರಾತುಗಳಲ್ಲಿನ ಪಾರದರ್ಶಕತೆಗಾಗಿ ಸಮಗ್ರವಾದ, ಸರ್ಚ್‌ ಮಾಡಬಹುದಾದದ ಡೇಟಾಬೇಸ್ ಆಗಿದೆ. ಮಾಡಿರುವ ಖರ್ಚು, ಎಷ್ಟು ಜನರಿಗೆ ತಲುಪಿದೆ? ಮತ್ತು ಧನಸಹಾಯ ಘಟಕಗಳು ಸೇರಿದಂತೆ ಮೆಟಾ ತಂತ್ರಜ್ಞಾನಗಳಾದ್ಯಂತ ಇರುವ ಜಾಹೀರಾತುಗಳ ಕುರಿತು ವಿವರವಾದ ಮಾಹಿತಿಯನ್ನು ಪಡೆಯಲು ಇದು ಬಳಕೆದಾರರಿಗೆ ಅನುಮತಿಸುತ್ತದೆ. ಸಾಮಾಜಿಕ ಸಮಸ್ಯೆಗಳು, ಚುನಾವಣೆಗಳು ಅಥವಾ ರಾಜಕೀಯಕ್ಕೆ ಸಂಬಂಧಿಸಿದ ಜಾಹೀರಾತುಗಳಿಗಾಗಿ, Meta ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ. ಅವುಗಳು ಸಕ್ರಿಯವಾಗಿರಲಿ ಅಥವಾ ನಿಷ್ಕ್ರಿಯವಾಗಿರಲಿ ಈ ಜಾಹೀರಾತುಗಳನ್ನು ಜಾಹೀರಾತು ಲೈಬ್ರರಿಯಲ್ಲಿ ಏಳು ವರ್ಷಗಳವರೆಗೆ ಸಂಗ್ರಹಿಸುತ್ತದೆ.

Next Story