ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ದೇಶವು ನಿಂತಿರುವಾಗ ಹಲವಾರು ನಕಲಿ ಸುದ್ದಿಗಳೂ ಈ ನಡುವೆ ವೈರಲ್ ಆಗುತ್ತಿವೆ. ಸದ್ಯ ಬಾಲಿವುಡ್ ನಟ ಅಮೀರ್ ಖಾನ್ ರವರದ್ದೆನ್ನಲಾದ ವೀಡಿಯೊವೊಂದು ವೈರಲ್ ಆಗಿದೆ. ಈ ವೀಡಿಯೊದಲ್ಲಿ ಅಮೀರ್ ಖಾನ್ "ಭಾರತದ ಪ್ರತಿಯೊಬ್ಬ ಪ್ರಜೆಯೂ ಲಕ್ಷಾಧಿಪತಿಯಾಗಿದ್ದಾನೆ. ಏಕೆಂದರೆ ಪ್ರತಿಯೊಬ್ಬನ ಬಳಿಯೂ 15ಲಕ್ಷ ರೂ. ಇರಬೇಕು. ನೀವೇನು ಹೇಳುತ್ತಿದ್ದೀರಿ? ನಿಮ್ಮ ಖಾತೆಯಲ್ಲಿ 15 ಲಕ್ಷ ರೂ. ಹಣವಿಲ್ಲವೇ? ಹಾಗಾದರೆ ಅದು ಎಲ್ಲಿಗೆ ಹೋಯ್ತು? ಹಾಗಾಗಿ ಇಂತಹಾ ಡೋಂಗಿಗಳಿಂದ ಎಚ್ಚರಿಕೆಯಿಂದಿರಿ ಇಲ್ಲದಿದ್ದರೆ ನೀವು ಭಾರೀ ನಷ್ಟವನುಭವಿಸುತ್ತೀರಿ" ಎಂದು ಹೇಳುವಂತೆ ತೋರಿಸಲಾಗಿದೆ. ಅಲ್ಲದೇ ಇದರಲ್ಲಿ ಅಮೀರ್ ಖಾನ್ ಕಾಂಗ್ರೆಸ್ ಪಾರ್ಟಿಯನ್ನು ಬೆಂಬಲಿಸುವಂತೆ ತೋರಿಸಲಾಗಿದ್ದು, ವೀಡಿಯೋದ ಕೊನೆಯಲ್ಲಿ, "ವೋಟ್ ಫಾರ್ ನ್ಯಾಯ್", "ವೋಟ್ ಫಾರ್ ಕಾಂಗ್ರೆಸ್" ಎಂಬ ಬರಹವನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆಯೊಂದಿಗೆ ಪರದೆಯ ಮೇಲೆ ಪ್ರದರ್ಶಿಸಲಾಗಿದೆ.
ಕಾಂಗ್ರೆಸ್ ನಾಯಕ ಹರೀಶ್ ಮೀನಾರವರು ಈ ವೀಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು, ""ಭಾರತದ ಪ್ರತಿಯೊಬ್ಬ ಪ್ರಜೆಯೂ ಲಕ್ಷಾಧಿಪತಿಯಾಗಿದ್ದಾನೆ. ಏಕೆಂದರೆ ಪ್ರತಿಯೊಬ್ಬನ ಬಳಿಯೂ 15ಲಕ್ಷ ರೂ. ಇರಬೇಕು. ನೀವೇನು ಹೇಳುತ್ತಿದ್ದೀರಿ? ನಿಮ್ಮ ಖಾತೆಯಲ್ಲಿ 15 ಲಕ್ಷ ರೂ. ಹಣವಿಲ್ಲವೇ? ಹಾಗಾದರೆ ಅದು ಎಲ್ಲಿಗೆ ಹೋಯ್ತು? ಹಾಗಾಗಿ ಇಂತಹಾ ಡೋಂಗಿಗಳಿಂದ ಎಚ್ಚರಿಕೆಯಿಂದಿರಿ ಇಲ್ಲದಿದ್ದರೆ ನೀವು ಭಾರೀ ನಷ್ಟವನುಭವಿಸುತ್ತೀರಿ. ದೇಶಹಿತಕ್ಕಾಗಿ ಜಾರಿ." ಎಂದು ಬರೆದಿದ್ದಾರೆ.
ಇನ್ನೂ ಹಲವಾರು ಸಾಮಾಜಿಕ ತಾಣ ಬಳಕೆದಾರರು ಈ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಅದನ್ನು ನಿಮಗೆ ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಪ್ರಧಾನಿ ನರೇಂದ್ರ ಮೋದಿಯವರು 2014ರ ಲೋಕಸಭಾ ಚುನಾವಣೆಯ ವೇಳೆ, ಇಲ್ಲಿರುವ ಕಪ್ಪು ಹಣವನ್ನು ಹಂಚಿದರೆ ಪ್ರತಿಯೊಬ್ಬ ಭಾರತೀಯನ ಖಾತೆಗೆ 15ಲಕ್ಷ ರೂ. ಜಮಾ ಮಾಡಬಹುದು ಎಂಬ ಹೇಳಿಕೆ ನೀಡಿದ್ದರು. ಇದು ಬಳಿಕ ಹಲವು ವಿವಾದ ಮತ್ತು ಟ್ರೋಲ್ ಗಳಿಗೆ ಗುರಿಯಾಗಿತ್ತು.
ಫ್ಯಾಕ್ಟ್ ಚೆಕ್: ಈ ವೀಡಿಯೊವನ್ನು ʼನ್ಯೂಸ್ ಮೀಟರ್ʼ ಪರಿಶೀಲನೆ ನಡೆಸಿದಾಗ ಇದು ನಕಲಿ ಎಂದು ತಿಳಿದು ಬಂದಿದೆ. ಈ ವೀಡಿಯೊವನ್ನು ಗೂಗಲ್ ನಲ್ಲಿ ರಿವರ್ಸ್ ಸರ್ಚ್ ಮಾಡಿ ನೋಡಿದಾಗ ಇದು ಈ ಹಿಂದೆ ಅಮೀರ್ ಖಾನ್ ನಡೆಸಿಕೊಡುತ್ತಿದ್ದ ʼಸತ್ಯಮೇವ ಜಯತೇʼ ಎಂಬ ಕಾರ್ಯಕ್ರಮದ್ದಾಗಿದೆ ಎಂದು ತಿಳಿದು ಬಂತು. ಈ ವೀಡಿಯೊವನ್ನು ಆಗಸ್ಟ್ 30, 2016ರಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವೀಡಿಯೊದ ತಲೆಬರೆಹದಲ್ಲಿ, "Satyamev Jayate Episode 4 Promo - Every Indian Deserves One Crore!' ಎಂದು ಬರೆಯಲಾಗಿದೆ.
ಒಟ್ಟು 35 ಸೆಕುಂಡಿನ ಈ ವೀಡಿಯೋದಲ್ಲಿ ಅಮೀರ್ ಖಾನ್, "ಸ್ನೇಹಿತರೇ, ಭಾರತ ಒಂದು ಬಡದೇಶ ಎಂದು ನೀವು ಭಾವಿಸುವುದಾದದರೆ ಅದು ಸಂಪೂರ್ಣ ತಪ್ಪು. ಯಾಕೆಂದರೆ, ಇಲ್ಲಿ ಪ್ರತಿಯೊಬ್ಬ ಪ್ರಜೆಯೂ ಲಕ್ಷಾಧಿಪತಿ (ಮಿಲಿಯೇನರ್) ಆಗಿದ್ದಾನೆ. ಪ್ರತಿಯೊಬ್ಬನ ಬಳಿಯೂ ಒಂದು ಕೋಟಿ ರೂ. ಇರಬೇಕು. ಏನು ಹೇಳುತ್ತಿದ್ದೀರಿ? ನಿಮ್ಮ ಬಳಿ ಈ ಹಣವಿಲ್ಲವೇ? ಹಾಗಾದರೆ ನಿಮ್ಮ ಒಂದು ಕೋಟಿ ರೂ. ಎಲ್ಲಿಗೆ ಹೋಯ್ತು? ನೋಡಿ, ರವಿವಾರ ಬೆಳಗ್ಗೆ 11 ಗಂಟೆಗೆ" ಎಂದು ಹೇಳಿದ್ದಾರೆ.
ಈ ನಡುವೆ ಅಮೀರ್ ಖಾನ್ ರವರ ವಕ್ತಾರರು ಈ ವೀಡಿಯೊದ ಕುರಿತು ಸ್ಪಷ್ಟನೆ ನೀಡಿದ್ದು, "ಅಮೀರ್ ಖಾನ್ ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಅವರು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿ ವೈರಲ್ ಆಗಿರುವ ವೀಡಿಯೊದಿಂದ ನಾವು ನೊಂದಿದ್ದೇವೆ. ಇದು ನಕಲಿ ವೀಡಿಯೋವಾಗಿದೆ ಮತ್ತು ಸಂಪೂರ್ಣ ಸುಳ್ಳು ಎಂದು ನಾವು ಸ್ಪಷ್ಟಪಡಿಸುತ್ತೇವೆ. ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಮುಂಬೈ ಪೊಲೀಸರ ಸೈಬರ್ ಕ್ರೈಂ ಸೆಲ್‌ನಲ್ಲಿ ಕೇಸು ದಾಖಲಿಸಲಾಗಿದೆ" ಎಂದು ಅಮೀರ್ ಖಾನ್ ತಂಡವು ತಿಳಿಸಿದೆ.
ಆದ್ದರಿಂದ, ಅಮೀರ್ ಖಾನ್ ರವರು ಬಿಜೆಪಿ ಪಕ್ಷವನ್ನು ಗುರಿಯಾಗಿಸಿ 15 ಲಕ್ಷ ರೂ.ಯ ಕುರಿತು ಮಾತನಾಡಿದ್ದಾರೆ ಎಂಬ ವೀಡಿಯೊ ಎಡಿಟ್ ಮಾಡಲಾಗಿದ್ದು, ನಕಲಿಯಾಗಿದೆ ಎಂದು ಸತ್ಯಶೋಧನೆಯ ವೇಳೆ ತಿಳಿದು ಬಂದಿದೆ.