ಹೈದರಾಬಾದ್: ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸುತ್ತಿರುವಾಗ ಅಗ್ನಿ ಅವಘಡ ಉಂಟಾಗಿದೆ ಎಂಬ ಶೀರ್ಷಿಕೆಯೊಂದಿಗೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಕೆಲವು ನೆಟ್ಟಿಗರು ಈ ವಿಡಿಯೋವನ್ನು ಹಂಚಿಕೊಂಡು, ಈಗೀಗ ಮೋದಿಯವರ ಪ್ರತಿಕೃತಿಯು ಉತ್ತರ ನೀಡಲು ಆರಂಭಿಸಿದೆ ಎಂಬ ಶೀರ್ಷಿಕೆ ನೀಡಿ ಹಂಚುತ್ತಿದ್ದಾರೆ.
"ಕರ್ನಾಟಕದಲ್ಲಿ ಮೋದಿಯವರ ಪ್ರತಿಕೃತಿ ದಹಿಸುವಾಗ ಐವರು ಕಾಂಗ್ರೆಸಿಗರ ಲುಂಗಿಗೆ ಬೆಂಕಿ ತಗುಲಿದೆ! ಇದೆಲ್ಲ ಹೇಗಾಯಿತು ನೋಡಿ. ಈಗ ಮೋದಿಜಿಯವರ ಪ್ರತಿಕೃತಿಗಳೂ ಮೋದಿಜಿ ಪವರ್ ತೋರಿಸುತ್ತಿದೆ, ಪಾಠ ಕಲಿಸಲು ಪ್ರಾರಂಭಿಸಿವೆ” ಎಂದು ನೆಟ್ಟಿಗರೊಬ್ಬರು ಹಿಂದಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
29 ಸೆಕೆಂಡ್‌ಗಳ ವೀಡಿಯೊ ತುಣುಕಿನಲ್ಲಿ ಪ್ರತಿಭಟನಾಕಾರರ ಗುಂಪು ನೀಲಿ ಬಣ್ಣದ ಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಜಂಕ್ಷನ್‌ನತ್ತ ನಡೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತದೆ. ಬಳಿಕ ಪ್ರತಿಭಟನೆಯ ಭಾಗವಾಗಿ ಅವರು ಪ್ರತಿಕೃತಿಯನ್ನು ಸುಡಲು ಪ್ರಯತ್ನಿಸಿದಾಗ, ಅವರಲ್ಲಿ ಕೆಲವರ ಬಟ್ಟೆಗಳಿಗೆ ಬೆಂಕಿ ತಗುಲುತ್ತದೆ.
ಇಂತಹದೇ ಪೋಸ್ಟ್‌ಗಳನ್ನು ನಿಮಗೆ ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.
ಫ್ಯಾಕ್ಟ್ ಚೆಕ್
ನ್ಯೂಸ್‌ಮೀಟರ್ ಈ ಸುದ್ದಿಯ ಸತ್ಯಾಂಶ ಪರಿಶೀಲನೆ ಮಾಡಿ, ಅದು ಸುಳ್ಳು ಎಂದು ಕಂಡುಹಿಡಿದಿದೆ. ಈ ಘಟನೆಯು ಜುಲೈ 2012 ರಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಕೇರಳ ವಿದ್ಯಾರ್ಥಿ ಒಕ್ಕೂಟ (ಕೆಎಸ್‌ಯು) ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ. 1957 ರಲ್ಲಿ ಸ್ಥಾಪನೆಯಾದ ಕೇರಳ ಸ್ಟೂಡೆಂಟ್ಸ್ ಯೂನಿಯನ್ (KSU), ಕೇರಳ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾಗಿದೆ. ದೃಶ್ಯಗಳಲ್ಲಿ ಕಂಡುಬರುವ ಪ್ರತಿಕೃತಿಯು ಅಂದಿನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯದ್ದಾಗಿದ್ದು, ಪ್ರಧಾನಿ ಮೋದಿಯದ್ದಲ್ಲ ಎಂದು ಸಾಬೀತಾಗಿದೆ.
ವೀಡಿಯೊವನ್ನು ಸರಿಯಾಗಿ ಪರಿಶೀಲಿಸಿದಾಗ ಇದು ಕೇರಳದಲ್ಲಿ ನಡೆದ ಪ್ರತಿಭಟನೆ ಎಂಬ ಸ್ಪಷ್ಟ ಸುಳಿವನ್ನು ನೀಡಿತು. ಮುಖ್ಯವಾಗಿ ಅಂಗಡಿ ನಾಮಫಲಕ, ಸೂಚನ ಫಲಕ ಮತ್ತು ಕೆಎಸ್‌ಯು ಸಂಘಟನೆಯ ಧ್ವಜವು ಘಟನೆ ಕೇರಳದ್ದೇ ಎಂಬುದನ್ನು ಸಾಬೀತುಪಡಿಸುವಂತೆ ಇತ್ತು. ವಿಡಿಯೋದಲ್ಲಿರುವ ಪ್ರತಿಭಟನಾಕಾರರ ಪೈಕಿ ಒಬ್ಬರಾದ ಪತ್ತನಂತಿಟ್ಟ ಜಿಲ್ಲೆಯ ಕೆಎಸ್‌ಯು ಅಧ್ಯಕ್ಷರಾಗಿ ಹಾಗೂ ಪ್ರಸ್ತುತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಮಂಕೂಟತಿಲ್ ಅವರನ್ನು ನಾವು ಗುರುತಿಸಬಹುದು. ಪ್ರತಿಭಟನೆಯನ್ನು ಸಕ್ರಿಯವಾಗಿ ಮುನ್ನಡೆಸಿದ್ದೂ ಅವರೇ ಆಗಿತ್ತು.
ಕೇರಳದ ಏಶ್ಯಾನೆಟ್ ನ್ಯೂಸ್ ವರದಿ ಪ್ರಕಾರ, ಕೆಎಸ್‌ಯು ಸದಸ್ಯರು ಮಹಾತ್ಮಾ ಗಾಂಧಿ ಯುನಿವರ್ಸಿಟಿಯ ಉಪಕುಲಪತಿಗಳ ಪ್ರತಿಕೃತಿಯನ್ನು ದಹಿಸುವ ವೇಳೆ ಈ ಘಟನೆ ಸಂಭವಿಸಿದೆ. ಕೆಎಸ್‌ಯು ಪತ್ತನಂತಿಟ್ಟ ಜಿಲ್ಲಾ ಸಮಿತಿಯಿಂದ ನಡೆದ ಪ್ರತಿಭಟನೆಯು ಸೆಂಟ್ರಲ್ ಜಂಕ್ಷನ್‌ನಲ್ಲಿ ಕೊನೆಗೊಂಡಿತ್ತು. ಸೆಂಟ್ರಲ್ ಜಂಕ್ಷನ್‌ನಲ್ಲಿ ಪ್ರತಿಕೃತಿ ದಹಿಸುವ ಸಂದರ್ಭ ಕೆಎಸ್‌ಯು ಸದಸ್ಯರ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿತ್ತು. ಅದೃಷ್ಟವಶಾತ್ ಅವರು ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದರು. ಘಟನೆಯಲ್ಲಿ ಕೆಎಸ್‌ಯು ಸದಸ್ಯರಾದ ಶ್ರೀನಾಥ್ ಮತ್ತು ವಿಷ್ಣು ಪನ್ನಕಲ್ ಗಾಯಗೊಂಡಿದ್ದರು. ಮಹಾತ್ಮಾ ಗಾಂಧಿ (ಎಂಜಿ) ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.
ಕೀವರ್ಡ್ ಮೂಲಕ ನಡೆಸಿದ ಹುಡುಕಾಟವೂ ಟೈಮ್ಸ್ ಆಫ್ ಇಂಡಿಯಾದಲ್ಲಿ ಅದೇ ಘಟನೆಯನ್ನು ಉಲ್ಲೇಖಿಸುವ ವರದಿಯನ್ನು ನೀಡಿದೆ. ರಾಜ್ಯಾದ್ಯಂತ ಪ್ರತಿಕೃತಿ ದಹನವನ್ನು ನಿಷೇಧಿಸುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಪ್ರಕಟಿಸಿದ ಸುದ್ದಿಯಲ್ಲಿ ಪತ್ತನಂತಿಟ್ಟ ಪ್ರತಿಭಟನೆ ವೇಳೆಯ ಅವಘಡಕ್ಕೆ ಸಂಬಂಧಿಸಿದ ಚಿತ್ರವನ್ನೇ ಬಳಸಲಾಗಿತ್ತು. ಈ ಘಟನೆಯು ಜುಲೈ 4, 2012 ರಂದು ನಡೆದಿದೆ.
ಆದ್ದರಿಂದ ಈ ಸುದ್ದಿಯು ಸುಳ್ಳಾಗಿದ್ದು, ನೆರೆ ರಾಜ್ಯ ಕೇರಳದಲ್ಲಿ ನಡೆದ ಘಟನೆಯನ್ನು ಬೇರೆಯೇ ನಿರೂಪಣೆಯೊಂದಿಗೆ ಹರಿಯಬಿಡಲಾಗುತ್ತಿದೆ ಎಂದು ಸತ್ಯಶೋಧನೆಯಲ್ಲಿ ತಿಳಿದು ಬಂದಿದೆ.