Year Ender 2025 | ಧರ್ಮಸ್ಥಳ ಬುರುಡೆ ಪ್ರಕರಣದಿಂದ ಆಪರೇಷನ್ ಸಿಂಧೂರ್, ಮಹಾಕುಂಭ ಮೇಳ, ಬೋಂಡಿ ಬೀಚ್ ಅಟ್ಯಾಕ್ ವರೆಗೆ: 2025 ರ ಟಾಪ್ 10 ಸತ್ಯ ಪರಿಶೀಲನೆಗಳು
2025 ಮುಗಿಯುತ್ತಾ ಬಂದಿದೆ. ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. 2025ನೇ ವರ್ಷದಲ್ಲಿ ಸುದ್ದಿಗಳಿಗೆ ಸಂಬಂಧಿಸಿದಂತೆ ಅನೇಕ ಘಟನೆಗಳು ನಡೆದಿವೆ. ಇದರಲ್ಲಿ ಬಹಳಷ್ಟು ಸುಳ್ಳು ಸುದ್ದಿಗಳು ಕೂಡ ಹರಿದಾಡಿವೆ.
By - Vinay Bhat |
2025 ಮುಗಿಯುತ್ತಾ ಬಂದಿದೆ. ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. 2025ನೇ ವರ್ಷದಲ್ಲಿ ಸುದ್ದಿಗಳಿಗೆ ಸಂಬಂಧಿಸಿದಂತೆ ಅನೇಕ ಘಟನೆಗಳು ನಡೆದಿವೆ. ಇದರಲ್ಲಿ ಬಹಳಷ್ಟು ಸುಳ್ಳು ಸುದ್ದಿಗಳು ಕೂಡ ಹರಿದಾಡಿವೆ. ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಯಿಂದ ಹಿಡಿದು, ಆಪರೇಷನ್ ಸಿಂಧೂರ್, ಮಹಾಕುಂಭ ಮೇಳ, ಪಹಲ್ಗಾಮ್ ಭಯೋತ್ಪಾದಕ ದಾಳಿ, ಅಹಮದಾಬಾದ್ ವಿಮಾನ ಪತನ, ಇತ್ತೀಚಿನ ಸಿಡ್ನಿಯ ಬೋಂಡಿ ಬೀಚ್ ಟೆರರ್ ಅಟ್ಯಾಕ್ ವರೆಗೆ ಅನೇಕ ಸುಳ್ಳು ಸುದ್ದಿಗಳು ಈ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿವೆ. ಇದರ ಜೊತೆಗೆ ಈ ವರ್ಷ AI ಕುರಿತ ನಕಲಿ ಸುದ್ದಿಗಳು ಕೂಡ ಉಲ್ಬಣಗೊಂಡವು.
ಸದ್ಯ ನ್ಯೂಸ್ ಮೀಟರ್ 2025 ರಲ್ಲಿ ಕನ್ನಡದಲ್ಲಿ ಪ್ರಕಟ ಮಾಡಿದ ಟಾಪ್ 10 ಮಹತ್ವದ ಸುದ್ದಿ ಯಾವುದು? ಎಂಬುದನ್ನು ನೋಡೋಣ..
1 Fact Check: ಧರ್ಮಸ್ಥಳದಲ್ಲಿ ಸಿಕ್ಕಿದ ಅಸ್ಥಿಪಂಜರಗಳು ಎಂದು ಫ್ರಾನ್ಸ್‌ಗೆ ಸೇರಿದ ಹಳೆಯ ಫೋಟೋ ವೈರಲ್
ಈ ವರ್ಷ ಧರ್ಮಸ್ಥಳ ಬುರುಡೆ ಪ್ರಕರಣ ಇಡೀ ದೇಶದಲ್ಲಿ ಭಾರೀ ಚರ್ಚೆಯಾಯಿತು. ಇಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಆರೋಪ ಪ್ರಕರಣದ ಬಗ್ಗೆ ಎಸ್‌ಐಟಿ ಶೋಧಕಾರ್ಯ ನಡೆಸಿತು. ಎಸ್‌ಐಟಿ ಅಧಿಕಾರಿಗಳು, ಫೋರೆನ್ಸಿಕ್ ತಜ್ಞರ ಮೇಲ್ವಿಚಾರಣೆಯಲ್ಲಿ ಶೋಧಕಾರ್ಯ ನಡೆಸಿದರು. ಇದರ ಮಧ್ಯೆ ಉತ್ಖನನ ಪ್ರಕ್ರಿಯೆಯಲ್ಲಿರುವ ಹಲವಾರು ಮಾನವ ಅಸ್ಥಿಪಂಜರಗಳನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತು, ಇದು ಧರ್ಮಸ್ಥಳದ ಉತ್ಖನನ ಸ್ಥಳಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಈ ಫೋಟೋವು 2011 ಮತ್ತು 2013 ರ ನಡುವೆ ಫ್ರಾನ್ಸ್‌ನ ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಲ್ಲಿ ನಡೆದ ಉತ್ಖನನಕ್ಕೆ ಸಂಬಂಧಿಸಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
2 Fact Check: ಮಹಾಕುಂಭ ಮೇಳದಲ್ಲಿ ಪ್ರಿಯಾಂಕಾ ಗಾಂಧಿ ಪುಣ್ಯಸ್ನಾನ ಎಂದು 2021ರ ವೀಡಿಯೊ ವೈರಲ್
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಜನವರಿ 13 ರಿಂದ ಫೆಬ್ರವರಿ 26 ವರೆಗೆ ಮಹಾಕುಂಭಮೇಳ ನಡೆಯಿತು. ಇದರಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ಆಕಾಂಕ್ಷಿಗಳು ಬಂದರು. ವಿದೇಶಿಗರು ಸೇರಿದಂತೆ ನಿತ್ಯ ಲಕ್ಷಾಂತರ ಜನರು ಆಗಮಿಸಿದರು. ರಾಜಕಾರಣಿಗಳು, ಅನೇಕ ವಿಐಪಿಗಳು ಕೂಡ ಪುಣ್ಯಸ್ನಾನ ಮಾಡಿದರು. ಇದರ ನಡುವೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಮಹಾಕುಂಭದಲ್ಲಿ ಪವಿತ್ರಸ್ನಾನ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೋಟೋ ವೈರಲ್ ಆಯಿತು. ಆದರೆ, ಇದು 2021ರಲ್ಲಿ ಮೌನಿ ಅಮಾವಾಸ್ಯೆಯಂದು ಪ್ರಯಾಗರಾಜ್ನ ಸಂಗಮದಲ್ಲಿ ಪ್ರಿಯಾಂಕಾ ಗಾಂಧಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದ ಫೋಟೋ ಆಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
3 Fact Check: ಮಹಾಕುಂಭಕ್ಕೆ ತೆರಳುತ್ತಿದ್ದ ರೈಲಿಗೆ ಕಲ್ಲು ಎಸೆದಿದ್ದು ಮುಸ್ಲಿಮರಲ್ಲ
ಮಹಾಕುಂಭ ಮೇಳದ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ಭಾರೀ ವೈರಲ್ ಆಯಿತು. ರೈಲ್ವೆ ಸ್ಟೇಷನ್ನಲ್ಲಿ ನಿಂತಿದ್ದ ರೈಲಿನ ಮೇಲೆ ಕೆಲ ಜನರು ಕಲ್ಲನ್ನು ಎಸೆಯುತ್ತಾರೆ. ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿಗೆ ಕಲ್ಲು ಎಸೆದ ಮುಸ್ಲಿಮರು ಎಂಬ ಹೇಳಿಕೆಯೊಂದಿಗೆ ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡರು. ಆದರೆ, ರೈಲಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದರಿಂದ ರೈಲಿನ ಡೋರ್ ತೆಗೆಯಲಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಕಲ್ಲು ಎಸೆದಿರುವ ಘಟನೆ ಇದಾಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
4 Fact Check: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಉಗ್ರಗಾಮಿಗಳನ್ನು ಮಟ್ಟ ಹಾಕಿದೆಯೇ? ಇಲ್ಲ, ಇದು ಹಳೆಯ ವೀಡಿಯೊ
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನ ಬಳಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸೇರಿದಂತೆ ಕನಿಷ್ಠ 26 ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡರು. ಈ ಘಟನೆ ಬಳಿಕ ಇದಕ್ಕೆ ಸಂಬಂಧಿಸಿದಂತೆ ಅನೇಕ ಫೇಕ್ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು. ಹಿಮದಿಂದ ಆವೃತವಾದ ಪರ್ವತ ಪ್ರದೇಶದಲ್ಲಿ ಸೇನಾ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬ ನೆಲದ ಮೇಲೆ ಬಿದ್ದಿರುವ ವ್ಯಕ್ತಿಗೆ ಗುಂಡು ಹಾರಿಸುತ್ತಿರುವ ವೀಡಿಯೊ ಇದಾಗಿದೆ. ಇದು ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆಯ ಪ್ರತೀಕಾರ ಎಂಬರ್ಥದಲ್ಲಿ ಅನೇಕರು ಹಂಚಿಕೊಂಡರು. ಆದರೆ, ಪಹಲ್ಗಾಮ್ ಅಟ್ಯಾಕ್ 2025ಕ್ಕು ಈ ವೀಡಿಯೊಕ್ಕು ಯಾವುದೇ ಸಂಬಂಧವಿಲ್ಲ. ಇದು 2022ರ ವೀಡಿಯೊ ಆಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿಕ್ಲಿಕ್ ಮಾಡಿ.
5 Fact Check: ಬೆಂಕಿಗೆ ಆಹುತಿ ಆಗುತ್ತಿರುವ ಲಾಸ್ ಏಂಜಲೀಸ್ ಎಂದು ಎಐ ರಚಿತ ವೀಡಿಯೊ ವೈರಲ್
ಈ ವರ್ಷದ ಆರಂಭದಲ್ಲಿ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಬೆಂಕಿಯು ಏಕಾಏಕಿ ಕಾಣಿಸಿಕೊಂಡಿತು. ಸುಮಾರು 35,000 ಎಕರೆಗಳಿಗಿಂತ ಹೆಚ್ಚಿನ ಪ್ರದೇಶ ಭಸ್ಮವಾಯಿತು. ಕಾಡ್ಗಿಚ್ಚುಗಳೊಂದಿಗೆ ಲಾಸ್ ಏಂಜಲೀಸ್ ಹೋರಾಡಿತು. ಈ ಬಿಕ್ಕಟ್ಟಿನ ಮಧ್ಯೆ, ಬೆಂಕಿಯ ವಿವಿಧ ಸುಳ್ಳು ದೃಶ್ಯಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಇದರಲ್ಲಿ ಕೆಲವು ಎಐ ರಚಿತ ವೀಡಿಯೊ ಕೂಡ ಸೇರಿವೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
6 Fact Check: ಪಾಕಿಸ್ತಾನದ ಮೇಲೆ ಭಾರತದಿಂದ ಸಾವಿರಾರು ಮಿಸೇಲ್ ಮೂಲಕ ದಾಳಿ ಎಂದು ಗೇಮಿಂಗ್ ವೀಡಿಯೊ ವೈರಲ್
ಆಪರೇಷನ್ ಸಿಂಧೂರ್ನ ಭಾಗವಾಗಿ ಪಾಕಿಸ್ತಾನದಿಂದ ಜಮ್ಮು ಮತ್ತು ಪಂಜಾಬ್ ಮೇಲೆ ಏಕಕಾಲಕ್ಕೆ 100 ಮಿಸೆಲ್ ನಿಂದ ದಾಳಿ ಅದಕ್ಕೆ ಉತ್ತರವಾಗಿ ಸಾವಿರಾರು ಮಿಸೇಲ್ ಮೂಲಕ ಭಾರತದಿಂದ ದಾಳಿ ಆರಂಭ ಎಂಬ ಹೇಳಿಕೆಯೊಂದೊಗೆ ಒಂದು ವೀಡಿಯೊ ಈ ವರ್ಷ ಭಾರೀ ಹರಿದಾಡಿದವು. ಆದರೆ, ಈ ವೀಡಿಯೊ ಸುಮಾರು ಮೂರು ವರ್ಷ ಹಳೆಯದಾಗಿದ್ದು ಆರ್ಮಾ ಎಂಬ ವೀಡಿಯೊ ಗೇಮ್‌ನದ್ದಾಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
7 Fact Check: ಅಹಮದಾಬಾದ್ ವಿಮಾನ ಅಪಘಾತದ ಅಂತಿಮ ಕ್ಷಣ ಎಂದು 2023ರ ನೇಪಾಳ ವಿಮಾನ ಅಪಘಾತದ ವೀಡಿಯೊ ವೈರಲ್
ಈ ವರ್ಷ ದೇಶದಲ್ಲಿ ನಡೆದ ಮತ್ತೊಂದು ದುರಂತ ಎಂದರೆ ಅದು 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಅಪಘಾತಕ್ಕೀಡಾಗಿದ್ದು. ಲಂಡನ್-ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ವಿಮಾನವು ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡು ಜನನಿಬಿಡ ಮೇಘನಿನಗರ ಪ್ರದೇಶದಲ್ಲಿ ಪತನಗೊಂಡು, ಭಾರಿ ಸ್ಫೋಟ ಮತ್ತು ಬೆಂಕಿಗೆ ಕಾರಣವಾಯಿತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸಂಬಂಧವಿಲ್ಲದ ವೀಡಿಯೊಗಳು ಹರಿದಾಡಿದವು. ಈ ಪೈಕಿ ವ್ಯಕ್ತಿಯೊಬ್ಬ ವಿಮಾನದ ಒಳಗಿನಿಂದ ಹೊರಗಿನ ದೃಶ್ಯವನ್ನು ಸೆರೆಹಿಡಿಯುತ್ತಿರುವಾಗ ಹಠಾತ್ ಬೆಂಕಿ ಮತ್ತು ವಿಮಾನ ಅಪಘಾತದ ದೃಶ್ಯಗಳು ಗೋಚರಿಸುತ್ತವೆ. ಈ ದೃಶ್ಯಗಳನ್ನು ಹಂಚಿಕೊಳ್ಳುವವರು ಇದು ದುರಂತದ ಕೆಲವು ಕ್ಷಣಗಳ ಮೊದಲು ಅಹಮದಾಬಾದ್ ವಿಮಾನದ ಒಳಗಿನಿಂದ ನಡೆದ ಲೈವ್ ರೆಕಾರ್ಡಿಂಗ್ ಎಂದು ಹೇಳಿಕೊಂಡರು. ಆದರೆ, ಈ ವೀಡಿಯೊ 2023 ರಲ್ಲಿ ನೇಪಾಳದಲ್ಲಿ ನಡೆದ ವಿಮಾನ ಅಪಘಾತದ್ದಾಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
8 Fact Check: ಬೆಂಗಳೂರಿನಲ್ಲಿ ಆರ್ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಎಂದು ಚೀನಾದ ವೀಡಿಯೊ ವೈರಲ್
ಜೂನ್ 03 ಐಪಿಎಲ್ 2025 ರ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಕಾಯುವಿಕೆಯ ನಂತರ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆರ್ಸಿಬಿ ಗೆದ್ದ ಬೆನ್ನಲ್ಲೇ ದೇಶಾದ್ಯಂತ ಸಂಭ್ರಮಾಚರಣೆಗಳು ಭರದಿಂದ ಸಾಗಿದವು. ಬೆಂಗಳೂರು ಮತ್ತು ಇತರ ನಗರಗಳಲ್ಲಿ, ಅಭಿಮಾನಿಗಳು ಧ್ವಜಗಳನ್ನು ಬೀಸುತ್ತಾ ಬೀದಿಗಿಳಿದು ಆಚರಿಸಿದರು. ಆದಾಗ್ಯೂ, ಬೆಂಗಳೂರಿನಲ್ಲಿ ನಡೆದ ವಿಜಯೋತ್ಸವವು ದುರಂತವಾಗಿ ಮಾರ್ಪಟ್ಟಿತು, ಕಾಲ್ತುಳಿತದಲ್ಲಿ 11 ಅಮಾಯಕ ಜೀವಗಳು ಬಲಿಯಾದವು. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಯಿತು. ಕೆಂಪು ಬಟ್ಟೆ ಧರಿಸಿದ ಬೃಹತ್ ಜನಸಮೂಹವನ್ನು ತೋರಿಸುವ ವೀಡಿಯೊವನ್ನು ಅನೇಕ ಜನರು ಹಂಚಿಕೊಂಡರು, ಮೊದಲ ಐಪಿಎಲ್ ಗೆಲುವಿನ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಎಂಬರ್ಥದಲ್ಲಿ ಇದನ್ನು ಹಂಚಿಕೊಂಡರು. ಆದರೆ, ಇದು ಚೀನಾದಲ್ಲಿ 2025ರ ಹೊಸ ವರ್ಷದ ಸಂಭ್ರಮಾಚರಣೆಯ ವೀಡಿಯೊ ಆಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿಕ್ಲಿಕ್ ಮಾಡಿ.
9 Fact Check: ನೇಪಾಳ ಪ್ರತಿಭಟನೆಯಲ್ಲಿ ಯೋಗಿ ಆದಿತ್ಯನಾಥ್ ಬ್ಯಾನರ್ ಪ್ರದರ್ಶನ?
ಈ ವರ್ಷ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲಿನ ಸರ್ಕಾರದ ನಿಷೇಧದ ವಿರುದ್ಧ ನೇಪಾಳದಲ್ಲಿ ಜನರಲ್ ಝಡ್ ಚಳುವಳಿ ಹಿಂಸಾತ್ಮಕ ತಿರುವು ಪಡೆದುಕೊಂಡಿತು. ಏತನ್ಮಧ್ಯೆ, ಪ್ರತಿಭಟನಾಕಾರರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರವನ್ನು ಹೊಂದಿದ್ದರು ಎಂಬ ಹೇಳಿಕೆ ವೈರಲ್ ಆಯಿತು. ಆದರೆ, ಇದು ಕಠ್ಮಂಡುವಿನಲ್ಲಿ ನಡೆದ ರಾಜಪ್ರಭುತ್ವ ಪರ ರ್ಯಾಲಿಯದ್ದಾಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.
10 Fact Check: ಆಸ್ಟ್ರೇಲಿಯಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸಂಭ್ರಮಿಸುತ್ತಿರುವ ಪಾಕಿಸ್ತಾನಿಗಳು ಎಂದು ಹಳೆಯ ವೀಡಿಯೊ ವೈರಲ್
ಡಿಸೆಂಬರ್ 14, 2025 ರಂದು ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಯಹೂದಿ ಹಬ್ಬವಾದ ಹನುಕ್ಕಾವನ್ನು ಆಚರಿಸುತ್ತಿದ್ದ ಗುಂಪಿನ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದರು. ಈ ಘಟನೆಯ ನಂತರ, ಪಾಕಿಸ್ತಾನದ ಪಟ್ಟಣವೊಂದರಲ್ಲಿ ನಡೆದ ಸಂಭ್ರಮಾಚರಣೆಗಳನ್ನು ತೋರಿಸುವ ಒಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಆದರೆ, ಇದು 2023 ರ ಅಕ್ಟೋಬರ್‌ನಲ್ಲಿ ಕರಾಚಿಯಲ್ಲಿ ಇಸ್ರೇಲ್-ಗಾಜಾ ಸಂಘರ್ಷದ ಸಮಯದಲ್ಲಿ ನಡೆದ ರ್ಯಾಲಿಯದ್ದಾಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.