Year Ender 2024 Fact Check: ಲೋಕಸಭೆ ಚುನಾವಣೆಯಿಂದ ಬಾಂಗ್ಲಾದೇಶ ಹಿಂಸಾಚಾರದವರೆಗೆ, 2024 ರ ಟಾಪ್ 10 ಸತ್ಯ ಪರಿಶೀಲನೆಗಳು

ನ್ಯೂಸ್ ಮೀಟರ್ 2024 ರಲ್ಲಿ ಕನ್ನಡದಲ್ಲಿ ಪ್ರಕಟ ಮಾಡಿದ ಟಾಪ್ 10 ಮಹತ್ವದ ಸುದ್ದಿ ಯಾವುದು? ಎಂಬುದನ್ನು ನೋಡುವುದಾದರೆ..

By Vinay Bhat  Published on  29 Dec 2024 9:36 PM IST
Year Ender 2024 Fact Check: ಲೋಕಸಭೆ ಚುನಾವಣೆಯಿಂದ ಬಾಂಗ್ಲಾದೇಶ ಹಿಂಸಾಚಾರದವರೆಗೆ, 2024 ರ ಟಾಪ್ 10 ಸತ್ಯ ಪರಿಶೀಲನೆಗಳು

2024 ಮುಗಿಯುತ್ತಾ ಬಂದಿದೆ. ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. 2024ನೇ ವರ್ಷದಲ್ಲಿ ಸುದ್ದಿಗಳಿಗೆ ಸಂಬಂಧಿಸಿದಂತೆ ಅನೇಕ ಘಟನೆಗಳು ನಡೆದಿವೆ. ಇದರಲ್ಲಿ ಬಹಳಷ್ಟು ಸುಳ್ಳು ಸುದ್ದಿಗಳು ಕೂಡ ಹರಿದಾಡಿವೆ. ವಕ್ಫ್ ಬೋರ್ಡ್​ಗೆ ಸಂಬಂಧಿಸಿದ ಸುದ್ದಿಯಿಂದ ಹಿಡಿದು, ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ, ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ವರೆಗೆ ಅನೇಕ ಸುಳ್ಳು ಸುದ್ದಿಗಳು ಈ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿವೆ. ಇದರ ಜೊತೆಗೆ ಈ ವರ್ಷ AI ಕುರಿತ ನಕಲಿ ಸುದ್ದಿಗಳು ಕೂಡ ಉಲ್ಬಣಗೊಂಡವು.

ಸದ್ಯ ನ್ಯೂಸ್ ಮೀಟರ್ 2024 ರಲ್ಲಿ ಕನ್ನಡದಲ್ಲಿ ಪ್ರಕಟ ಮಾಡಿದ ಟಾಪ್ 10 ಮಹತ್ವದ ಸುದ್ದಿ ಯಾವುದು? ಎಂಬುದನ್ನು ನೋಡುವುದಾದರೆ..

1 Fact Check: ಹಿಂದೂಗಳ ಅಗತ್ಯವಿಲ್ಲ, ಮುಸ್ಲಿಮರ ವೋಟು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?

ಈ ವರ್ಷದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಲವಾರು ನಕಲಿ ನ್ಯೂಸ್‌ ಗಳು ಸಾಮಾಜಿಕ ತಾಣದಾದ್ಯಂತ ಹರಿದಾಡಿದವು. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಿನಲ್ಲಿ ನ್ಯೂಸ್‌ಪೇಪರ್‌ ನ ಕ್ಲಿಪ್‌ ಒಂದು ವೈರಲ್‌ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. "ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು: ಸಿದ್ರಾಮಯ್ಯ" ಎಂಬ ಶೀರ್ಷಿಕೆಯಿರುವ ಸುದ್ದಿತುಣುಕನ್ನು ಹಂಚಿಕೊಳ್ಳಲಾಗಿತ್ತು. ಅಸಲಿಗೆ ಇದು ಎಡಿಟ್‌ ಮಾಡಲ್ಪಟ್ಟ ಸುದ್ದಿ ತುಣುಕು ಆಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

2 Fact Check: ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನ ಕಡ್ಡಾಯಗೊಳಿಸಲಾಗಿದೆಯೇ?: ವಿಡಿಯೋದ ನಿಜಾಂಶ ಇಲ್ಲಿದೆ

ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಲಾಗಿದೆ ಎಂಬ ಸುದ್ದಿ ಈ ವರ್ಷ ಹರಿದಾಡಿತು. ಇದರ ಜೊತೆಗೆ ಶಾಲೆಯಲ್ಲಿ ಖುರಾನ್ ಪಠಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಆದರೆ ಇದು ಆಧಾರ ರಹಿತವಾಗಿದ್ದು, ಕರ್ನಾಟಕದ ಶಾಲೆಗಳಲ್ಲಿ ಖುರಾನ್ ಅಧ್ಯಯನವನ್ನು ಕಡ್ಡಾಯಗೊಳಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಖಾಸಗಿ ಶಾಲೆಯಲ್ಲಿ ಬಕ್ರೀದ್ ಆಚರಣೆಯ ದೃಶ್ಯಾವಳಿಗಳಾಗಿವೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

3 Fact Check: ಕೇರಳದ ಜನರು ನಿಜಕ್ಕೂ ಪಾಕಿಸ್ತಾನ ಕ್ರಿಕೆಟ್ ಜೆರ್ಸಿ ತೊಟ್ಟಿದ್ದರಾ?

ಈ ವರ್ಷದ ಜುಲೈ ತಿಂಗಳಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕಾರ್ಯಕರ್ತರು ಕೇರಳದ ಕಾಸರಗೋಡು ಕಚೇರಿಯ ಮುಂದೆ ಹಸಿರು ಜೆರ್ಸಿ ಧರಿಸಿ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಹರಿದಾಡಿತ್ತು. ಇವರು ಪಾಕಿಸ್ತಾನಿ ಕ್ರಿಕೆಟ್ ತಂಡದ ಜೆರ್ಸಿ ಧರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

4 Fact Check: ಕೊಲೆಯಾದ ಕೋಲ್ಕತ್ತಾ ವೈದ್ಯೆಯ ಕೊನೆಯ ಕ್ಷಣ ಎಂಬ ಫೇಕ್ ವಿಡಿಯೋ ವೈರಲ್

ಕೋಲ್ಕತ್ತಾದ ಆರ್‌ಜಿಸಿಎಆರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯನ್ನು ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ದೇಶಾದ್ಯಂತ ವಿವಿಧ ಸಮುದಾಯಗಳ ಜನರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದರು. ಇವುಗಳ ನಡುವೆ ಗಾಯಾದ ಮಡಿಲಲ್ಲಿ ನರಳುತ್ತಿರುವ ವೈದ್ಯೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದು ಕೋಲ್ಕತ್ತಾದ ಟ್ರೈನಿ ವೈದ್ಯೆಯು ಕೊನೆ ಉಸಿರೆಳೆಯುವ ಮುನ್ನ ತೆಗೆದ ಸೆಲ್ಫಿ ವಿಡಿಯೋ ಎಂದು ಹೇಳಿಕೊಂಡು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರು. ಆದರೆ, ಇವರು ಮೇಕಪ್ ಕಲಾವಿದೆ ಆಗಿದ್ದಾರೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

5 Fact Check: ಬಾಂಗ್ಲಾದೇಶ ಕ್ರಿಕೆಟಿಗ ಲಿಟ್ಟನ್ ದಾಸ್ ಮನೆಗೆ ಬೆಂಕಿ ಹಚ್ಚಿದ್ದಾರೆ ಎನ್ನುವ ವೈರಲ್ ವೀಡಿಯೊ ಸುಳ್ಳು

ಈ ವರ್ಷ ದೇಶದಲ್ಲಿ ಅತಿ ಹೆಚ್ಚು ವೈರಲ್ ಆದ ಸುಳ್ಳು ಸುದ್ದಿ ಎಂದರೆ ಅದು ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದು. ಇದರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿಂದೂ ಕ್ರಿಕೆಟಿಗ ಲಿಟ್ಟನ್ ದಾಸ್ ಅವರ ಮನೆ ಬೆಂಕಿಗೆ ಆಹುತಿಯಾಗುತ್ತಿದೆ ಎಂಬ ವೀಡಿಯೊ. ಲಿಟ್ಟನ್ ದಾಸ್ ಹಿಂದೂ ಎಂಬ ಕಾರಣಕ್ಕೆ ಪ್ರತಿಭಟನಾಕಾರರು ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೊ ಶೇರ್ ಮಾಡಲಾಗಿತ್ತು. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

6 Fact Check: ಭಾರೀ ಮಳೆಗೆ ಬ್ರ್ಯಾಂಡ್ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದು ವಿಯೆಟ್ನಾಂ ವೀಡಿಯೊ ವೈರಲ್

ಈ ವರ್ಷ ರಾಜ್ಯದಲ್ಲಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಳೆದ ಅಕ್ಟೋಬರ್​ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ತಗ್ಗು ಪ್ರದೇಶಗಳು ಜಲಾವೃತವಾದರೆ, ಇನ್ನು ಕೆಲವು ಕಡೆ ರಸ್ತೆಗಳಲ್ಲೇ ನೀರು ಹರಿದು ಹಳ್ಳಗಳಂತಾಗಿತ್ತು. ಇದರ ನಡುವೆ ಮಳೆ ಬರುತ್ತಿರುವಾಗ ರಸ್ತೆಯ ಮಧ್ಯೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಉರಿಯುತ್ತಿರುವ ವೀಡಿಯೊ ಬೆಂಗಳೂರಿನದ್ದು ಎಂದು ಹರಿದಾಡಿತು. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

7 Fact Check: ಹಿಂದೂಗಳನ್ನು ಹೊಗಳಿರುವ ಟ್ರಂಪ್ ಹೇಳಿಕೆ 2016ರದ್ದು, 2024ರ ಚುನಾವಣೆಯಲ್ಲಿ ಗೆದ್ದ ನಂತರದ್ದಲ್ಲ

ಯುಎಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ನಂತರ, ಡೊನಾಲ್ಡ್ ಟ್ರಂಪ್ ಅವರ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಇದರಲ್ಲಿ ಟ್ರಂಪ್ ಅವರು, ನಾನು ಹಿಂದೂಗಳ ಮತ್ತು ಭಾರತದ ದೊಡ್ಡ ಅಭಿಮಾನಿ ಎಂದು ಹೇಳುವುದನ್ನು ಕೇಳಬಹುದು. ಚುನಾವಣಾ ಫಲಿತಾಂಶದ ನಂತರ ಟ್ರಂಪ್ ಅವರ ಮೊದಲ ವಿಜಯೋತ್ಸವ ಭಾಷಣ ಇದಾಗಿದೆ ಎಂದು ಅನೇಕರು ಹಂಚಿಕೊಂಡರು. ಆದರೆ, ಇದು 2016 ರ ಯುಎಸ್ ಅಧ್ಯಕ್ಷೀಯ ಚುನಾವಣಾ ಪ್ರಚಾರದ್ದಾಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

8 Fact Check: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಸಾಧಿಸಿಲ್ಲ, ವೈರಲ್ ಸುದ್ದಿ ನಕಲಿ

ಮಹಾರಾಷ್ಟ್ರ ಚುನಾವಣೆಯ ಸಂಭ್ರಮದ ನಡುವೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು ಚಲಾಯಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಯಿತು. ‘‘ಹಿಂದೂಗಳ ಆರಾಧ್ಯ ದೈವ ಮತ್ತು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಬೋರ್ಡ್ ಹಕ್ಕು’’ ಎಂದು ಬರೆದು ಫೋಟೋವನ್ನು ಅನೇಕರು ಹಂಚಿಕೊಂಡಿದ್ದರು. ಆದರೆ, ದೇವಸ್ಥಾನದ ಸೊಸೈಟಿಯ ಅಧಿಕಾರಿಗಳೇ ಇದನ್ನು ನಕಲಿ ಎಂದು ಹೇಳಿದರು. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

9 Fact Check: ಸಂಭಾಲ್ ಮಸೀದಿ ಸಮೀಕ್ಷೆಯಲ್ಲಿ ವಿಗ್ರಹ ಪತ್ತೆ ಎಂದು ಕರ್ನಾಟಕದಲ್ಲಿ ಸಿಕ್ಕ ಮೂರ್ತಿಯ ಫೋಟೋ ವೈರಲ್

ಇತ್ತೀಚೆಗಷ್ಟೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ಸಂದರ್ಭ 1,500 ವರ್ಷಗಳಷ್ಟು ಹಳೆಯದಾದ ಶಿಲ್ಪಗಳು ಕಂಡುಬಂದಿವೆ ಎಂಬ 4 ಫೋಟೋ ಎಲ್ಲ ಕಡೆಗಳಲ್ಲಿ ಹರಿದಾಡಿತು. ಆದರೆ, ಫೋಟೋದಲ್ಲಿ ಕಾಣುವ ಮೊದಲ ಮೂರು ವಿಗ್ರಹಗಳು ಕರ್ನಾಟಕದಲ್ಲಿ ಫೆಬ್ರವರಿ 2024 ರಲ್ಲಿ ಸಿಕ್ಕಿರುವುದಾಗಿದೆ. ನಾಲ್ಕನೇ ಫೋಟೋದಲ್ಲಿ ಕಂಡುಬರುವ ಸುದರ್ಶನ ಚಕ್ರವನ್ನು ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ.

10 Fact Check: ಬಾಂಗ್ಲಾದೇಶದಲ್ಲಿ ಇಸ್ಕಾನ್ ಅರ್ಚಕ ಪರ ವಕಾಲತ್ತು ವಹಿಸಿದ ಮುಸ್ಲಿಂ ವಕೀಲರ ಹತ್ಯೆ ನಡೆದಿದ್ದು ನಿಜವೇ?

ದೇಶದ್ರೋಹದ ಪ್ರಕರಣದಲ್ಲಿ ಬಾಂಗ್ಲಾದೇಶದ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಬಂಧನದ ನಂತರ ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಹಿಂಸಾಚಾರ ಬುಗಿಲೆದ್ದಿತು. ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಚಿತ್ತಗಾಂಗ್ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆವರಣದಲ್ಲಿ ಗಲಾಟೆ ನಡೆದು, ಒಬ್ಬ ವಕೀಲರು ಸಾವನ್ನಪ್ಪಿದರು. ಈ ಮೃತ ವಕೀಲರು ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಪರ ವಾದಿಸುತ್ತಿದ್ದರು ಮತ್ತು ಅವರು ಮುಸ್ಲಿಂ ಎಂದು ಹೇಳುವ ಪೋಸ್ಟ್ ಆ ಸಂದರ್ಭ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಆದರೆ, ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ವಕೀಲರು ಚಿನ್ಮೋಯ್ ದಾಸ್ ಅವರ ಪರವಾಗಿ ವಕಾಲತ್ತು ವಹಿಸಿದವರಲ್ಲ. ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದಾರೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲುಇಲ್ಲಿ ಕ್ಲಿಕ್ ಮಾಡಿ.

Next Story